ADVERTISEMENT

ಬಲಮುರಿಯಲ್ಲಿ ಇಂದು ಜಾತ್ರೆ ಸಂಭ್ರಮ

ತೀರ್ಥಸ್ನಾನ ಮಾಡಿ ಪುನೀತರಾಗುವ ಭಕ್ತರು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2017, 8:08 IST
Last Updated 18 ಅಕ್ಟೋಬರ್ 2017, 8:08 IST
ಬಲಮುರಿಯಲ್ಲಿ ಇಂದು ಜಾತ್ರೆ ಸಂಭ್ರಮ
ಬಲಮುರಿಯಲ್ಲಿ ಇಂದು ಜಾತ್ರೆ ಸಂಭ್ರಮ   

ನಾಪೋಕ್ಲು: ಕಾವೇರಿ ತೀರದ ಪವಿತ್ರ ಯಾತ್ರಾಸ್ಥಳವಾದ ಬಲಮುರಿಯಲ್ಲಿ ಕಾವೇರಿ ಜಾತ್ರೆ ಬುಧವಾರ ಸಂಭ್ರಮ ದಿಂದ ಜರುಗಲಿದ್ದು ಅಗತ್ಯ ಸಿದ್ಧತೆ ಮಾಡಲಾಗಿದೆ.

ಕಣ್ಣೇಶ್ವರ ಹಾಗೂ ಅಗಸ್ತ್ಯೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಲಿದೆ. ಉತ್ಸವಕ್ಕೆ ಬರುವ ಭಕ್ತರಿಗೆ ಗ್ರಾಮದ ದಾನಿಗಳಿಂದ ಅನ್ನಸಂತರ್ಪಣೆಗೆ ವ್ಯವಸ್ಥೆ ಕೈಗೊಳ್ಳಲಾಗಿದೆ.

ಭಾನುವಾರ ಕಣ್ಣಮುನೀಶ್ವರ ಸ್ವಸಹಾಯ ಸಂಘದ ಸದಸ್ಯರು ದೇವಾಲಯದ ಆವರಣವನ್ನು ಶುಚಿಗೊಳಿಸಿದರು.

ADVERTISEMENT

ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗಿ ತೆರಳುವರು.

ಪ್ರತಿವರ್ಷ ಕಾವೇರಿ ತೀರ್ಥೋದ್ಭ ವದ ಮರುದಿನ ಬಲಮುರಿ ಜಾತ್ರೆ ನಡೆಯುವುದು. ತಲಕಾವೇರಿಯಂತೆ ಬಲಮುರಿಯೂ ಪುಣ್ಯಸ್ಥಳ. ಬಲಮುರಿಯಲ್ಲಿರುವ ಕಣ್ಣೇಶ್ವರ ಹಾಗೂ ಅಗಸ್ತ್ಯೇಶ್ವರ ದೇವಾಲಯಗಳಿಗೆ ಕಾವೇರಿ ಚಾರಿತ್ರಿಕ ಹಿನ್ನೆಲೆ ಇದೆ.

ಕಾವೇರಿ ನದಿಯ ಎಡಭಾಗದಲ್ಲಿ ಕಣ್ಣೇಶ್ವರ ಹಾಗೂ ಬಲಭಾಗದಲ್ಲಿ ಅಗಸ್ತ್ಯೇಶ್ವರ ದೇವಾಲಯಗಳಿದ್ದು ಸುಂದರವಾದ ಪರಿಸರದಿಂದ ಕೂಡಿದೆ. ಇಲ್ಲಿ ಪಿಂಡ ಪ್ರದಾನ ಮಾಡಿದರೆ ತಲಕಾವೇರಿಯಲ್ಲಿ ಪಿಂಡಪ್ರದಾನ ಮಾಡಿದಷ್ಟೇ ಪುಣ್ಯಬರುತ್ತದೆ ಎಂಬುದು ಇಲ್ಲಿನ ನಂಬಿಕೆ.

ಚಾರಿತ್ರಿಕ ಹಿನ್ನೆಲೆಯಂತೆ ತಲಕಾವೇರಿಯಲ್ಲಿ ಉಗಮಿಸಿದ ಕಾವೇರಿ ಹರಿದು ಇಲ್ಲಿಗೆ ಬರುವಾಗ ಬಲಭಾಗಕ್ಕೆ ಅರ್ಧಚಂದ್ರಾಕಾರವಾಗಿ ದಿಕ್ಕು ಬದಲಿಸಿದಳು. ಪ್ರಾಚೀನ ಕಾಲದಲ್ಲಿ ಒಲಂಪುರಿ ಎಂದು ಕರೆಯಲ್ಪಟ್ಟ ಈ ತಾಣ ಮುಂದಿನ ದಿನಗಳಲ್ಲಿ ಬಲಮುರಿ ಎನಿಸಿಕೊಂಡಿತು.

ಪೌರಾಣಿಕ ಕತೆಯ ಪ್ರಕಾರ ಒಲಂಪುರಿ ತಾಣಕ್ಕೆ ಲವಣೇಶ್ವರ ಆರಾಧ್ಯ ದೈವ. ಕಾವೇರಿ ಮಾತೆ ತಾನು ಹರಿದು ಇಲ್ಲಿಗೆ ಬರುವುದಾಗಿ ದೇವಕಾಂತ ಮಹರಾಜನಿಗೆ ಸೂಚನೆ ನೀಡಿದ್ದಳು. ಅದರಂತೆ ಕಾವೇರಿ ನದಿಯಾಗಿ ಒಲಂಪುರಿಗೆ ಹರಿದು ಬರುವಾಗ ಪ್ರವಾಹ ಏರ್ಪಟ್ಟಿತು. ಈ ವೇಳೆ ಕಾವೇರಿಯನ್ನು ತಡೆಯಲು ಬಂದ ಮಹಿಳೆಯರ ಸೀರೆ ನೆರಿಗೆಗಳು ಹಿಂದಕ್ಕೆ ಸರಿದವು. ಹಿಂದಕ್ಕೆ ಹೋದ ಸೀರೆಯ ಸೆರಗನ್ನು ಬಲಭಾಗಕ್ಕೆ ಗಂಟು ಹಾಕಿ ಮಹಿಳೆಯರು ಉಟ್ಟುಕೊಂಡಿದ್ದರಿಂದ ಇಲ್ಲಿಗೆ ಬಲಮುರಿ ಎಂಬ ಹೆಸರು ಬಂತು ಎಂಬುದು ಪ್ರತೀತಿ ಇದೆ ಎನ್ನುತ್ತಾರೆ ಸ್ಥಳೀಯರು.

ಕಾವೇರಿಯನ್ನು ಹಿಂಬಾಲಿಸಿ ಬಂದ ಅಗಸ್ತ್ಯ ಮುನಿಗಳು ನದಿತೀರದಲ್ಲಿ ಶಿವಲಿಂಗವೊಂದನ್ನು ಪ್ರತಿಷ್ಠಾಪನೆ ಮಾಡಿ ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸಿದರು ಎನ್ನಲಾಗಿದೆ.

ಅಗಸ್ತ್ಯೇಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ನದಿಯ ಇನ್ನೊಂದು ತೀರದಲ್ಲಿ ಕಾವೇರಿ ಕಣ್ವಮುನೀಶ್ವರ ದೇವಾಲಯವಿದ್ದು ಸುಮಾರು ₹7 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದಿದೆ. ಆದರೆ, ಅಗಸ್ತ್ಯೇಶ್ವರ ದೇವಾಲಯ ಹಲವು ವರ್ಷಗಳ ಹಿಂದೆ ಜೀರ್ಣೋ ದ್ಧಾರಗೊಂಡಿದ್ದು ತುರ್ತು ಅಭಿವೃದ್ಧಿ ಕಾಣಬೇಕಾದ ಅಗತ್ಯವಿದೆ ಎನ್ನುತ್ತಾರೆ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕೊಂಗೀರಂಡ ಸಾದು ತಮ್ಮಯ್ಯ.

ಪಿಂಡ ಪ್ರದಾನ ಮಾಡುವ ಸ್ಥಳದಲ್ಲಿ ಮೆಟ್ಟಿಲುಗಳ ನಿರ್ಮಿಸುವ ಅವಶ್ಯವಿದೆ. ದೇವಸ್ಥಾನಕ್ಕೆ ಮಾರ್ಗಸೂಚಿ ಫಲಕಗಳಿಲ್ಲ. ಭಕ್ತರು ಸುತ್ತುಬಳಸಿ ಬಂದು, ದೇವಾಲಯವನ್ನು ಕಾಣದೆ ವಾಪಸಾಗುವ ಪರಿಸ್ಥಿತಿಯೂ ಇದೆ. ಬಲಮುರಿ–ಹೊದ್ದೂರು ಗ್ರಾಮಗಳ ನಡುವಿನ ಸಂಪರ್ಕರಸ್ತೆ ಪೂರ್ಣಹದಗೆಟ್ಟಿದ್ದು ಆದಷ್ಟು ಬೇಗ ಅಭಿವೃದ್ಧಿ ಪಡಿಸಿ ಪ್ರವಾಸಿ ಗರಿಗೆ, ಭಕ್ತರಿಗೆ ಅನುಕೂಲ ಮಾಡಿ ಕೊಡಬೇಕು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.