ADVERTISEMENT

ಯಮಕನಮರಡಿ ಕ್ಷೇತ್ರ ಬಿಡು ಎನ್ನಲು ಅವರ್‌್ಯಾರು?

ಅಣ್ಣ ರಮೇಶ್‌ಗೆ ತಿರುಗೇಟು ನೀಡಿದ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 19:30 IST
Last Updated 6 ಮಾರ್ಚ್ 2017, 19:30 IST
ಯಮಕನಮರಡಿ ಕ್ಷೇತ್ರ ಬಿಡು ಎನ್ನಲು ಅವರ್‌್ಯಾರು?
ಯಮಕನಮರಡಿ ಕ್ಷೇತ್ರ ಬಿಡು ಎನ್ನಲು ಅವರ್‌್ಯಾರು?   

ಬೆಳಗಾವಿ: ‘ಮುಂಬರುವ ಚುನಾವಣೆಯಲ್ಲಿ ನಾನು ಯಮಕನಮರಡಿ ವಿಧಾನಸಭಾ ಕ್ಷೇತ್ರ ಬಿಟ್ಟು, ರಾಯಚೂರಿನಿಂದ ಸ್ಪರ್ಧಿಸಬೇಕು ಎಂದು ಹೇಳುವುದಕ್ಕೆ ಅವರ್‌್ಯಾರು? ಯಾವುದೇ ಕಾರಣಕ್ಕೂ ಕ್ಷೇತ್ರ ಬಿಡುವುದಿಲ್ಲ’.

ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಅವರ ಕಿರಿಯ ಸಹೋದರ, ಶಾಸಕ ಸತೀಶ ಜಾರಕಿಹೊಳಿ ತಿರುಗೇಟು ನೀಡಿದ್ದು ಹೀಗೆ.
ಇಲ್ಲಿನ ಕಾಡಾ ಕಚೇರಿಯಲ್ಲಿ ಸೋಮವಾರ ನಡೆದ ಸ್ಮಾರ್ಟ್‌ ಸಿಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನನಗೆ ಮನಸ್ಸಾದರೆ ಯಾವ ಕ್ಷೇತ್ರಕ್ಕೆ ಬೇಕಾದರೂ ಹೋಗುತ್ತೇನೆ. ಯಾರೋ ಹೇಳಿದರೆಂದು ಹೋಗುವುದಿಲ್ಲ. ಯಮಕನಮರಡಿ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ. ನಾನೂ ಕಾಂಗ್ರೆಸ್‌ ಪಕ್ಷದ ಒಬ್ಬ ನಾಯಕ. ನನ್ನಂಥವರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ಕ್ಷೇತ್ರ ಬದಲಾವಣೆ ಪ್ರಶ್ನೆಯೇ ಇಲ್ಲ’ ಎಂದು ಅವರು ಸಹೋದರ ರಮೇಶ ಜಾರಕಿಹೊಳಿಗೆ ಟಾಂಗ್‌ ನೀಡಿದರು.

‘ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಇನ್ನೂ ಪ್ರಬುದ್ಧರಾಗಿಲ್ಲ. ಅವರು ಇನ್ನೂ ಕಲಿಯಬೇಕಿದೆ. ಗೋಕಾಕ್‌ನಲ್ಲಿ ಸ್ಟಂಟ್ ತೋರಿಸಿದಂತೆ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ತೋರಿಸಿದರೆ ನಡೆಯುವುದಿಲ್ಲ. ಅವರು ಸುಧಾರಣೆ ಆಗಲು ಇನ್ನೂ ಕಾಲಾವಕಾಶವಿದೆ. ಸುಧಾರಿಸಿಕೊಂಡರೆ ಅವರಿಗೇ ಒಳ್ಳೆಯದು’ ಎಂದು ಮಾರ್ಮಿಕವಾಗಿ ಸಲಹೆ ನೀಡಿದರು.

ಎಲ್ಲವೂ ಊಹಾಪೋಹ: ‘ಸತೀಶ ಜಾರಕಿಹೊಳಿ ರಾಯಚೂರಿನಿಂದ ಸ್ಪರ್ಧಿಸುತ್ತಾರೆ. ಸಹೋದರ ಲಖನ್‌ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದ ಅಭ್ಯರ್ಥಿ ಎಂದು ಸಚಿವರು ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಅದೆಲ್ಲವೂ ಊಹಾಪೋಹ. ಲಖನ್‌ ಸ್ಪರ್ಧಿಸುವುದಿದ್ದರೆ ಗೋಕಾಕದಿಂದಲೇ ಸ್ಪರ್ಧಿಸಲಿ. ಅವರಿಗೆ ಗೋಕಾಕದಲ್ಲಿ ಮಾಡುವುದಕ್ಕೆ ಬಹಳ ಕೆಲಸವಿದೆ. ಹಾಗೆಯೇ ವರ್ಚಸ್ಸು ಕೂಡ ಇದೆ ಹಾಗೂ ಹೆಚ್ಚು ಸುರಕ್ಷಿತವೂ ಹೌದು. ಒಂದು ಬಟನ್‌ ಒತ್ತಿದರೆ ಎಲ್ಲವೂ ಅಲ್ಲಿ ಸಾಧ್ಯವಾಗುತ್ತದೆ. ಯಮಕನಮರಡಿ ಕ್ಷೇತ್ರದಲ್ಲಿ ಅವರಿಗೆ ಕಷ್ಟ. ಈ ಕ್ಷೇತ್ರದ ಜನರ ನಾಡಿಮಿಡಿತ ನನಗೆ ಗೊತ್ತಿದೆ. 10 ವರ್ಷದಿಂದಲೂ ಇಲ್ಲಿನ ಜನರೊಂದಿಗೆ ಒಡನಾಟವಿದೆ. ಲಖನ್‌ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದರೆ ಸಂಪೂರ್ಣ ಬೆಂಬಲ ನೀಡುತ್ತೇನೆ’ ಎಂದರು.

‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನನ್ನ ಆಸ್ತಿ ಇದೆ. ಆಸ್ತಿ ಇದ್ದ ಕಡೆಯಲ್ಲೆಲ್ಲ ಸ್ಪರ್ಧಿಸಲು ಸಾಧ್ಯವಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ಕೊಡುವುದು ಕಾಂಗ್ರೆಸ್ ಸಂಪ್ರದಾಯ. ಹೀಗಾಗಿ, ನನಗೆ ಈ ಕ್ಷೇತ್ರದಿಂದಲೇ ಟಿಕೆಟ್‌ ಸಿಗುತ್ತದೆ. ಇದನ್ನು ತಪ್ಪಿಸಲಾಗದು’ ಎಂದೂ ಸತೀಶ ಜಾರಕಿಹೊಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.