ADVERTISEMENT

ವಿಮಾನಯಾನ ಕ್ಷೇತ್ರಕ್ಕೆ ₹600 ಕೋಟಿ ವೆಚ್ಚ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 6:56 IST
Last Updated 15 ಸೆಪ್ಟೆಂಬರ್ 2017, 6:56 IST
ಬೆಳಗಾವಿಯ ಮೇಲ್ದರ್ಜೆಗೇರಿಸಲಾದ ವಿಮಾನ ನಿಲ್ದಾಣವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪಿ.ಅಶೋಕ ಗಜಪತಿರಾಜು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಮೇಯರ್‌ ಸಂಜೋತಾ ಬಾಂದೇಕರ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಸಚಿವ ರಮೇಶ ಜಾರಕಿಹೊಳಿ, ಕೇಂದ್ರ ಸಚಿವ ಅನಂತಕುಮಾರ್‌, ಸಚಿವ ಆರ್‌.ವಿ. ದೇಶಪಾಂಡೆ, ಸಂಸದ ಆರ್‌.ವಿ. ದೇಶಪಾಂಡೆ, ಸಚಿವ ಡಿ.ಕೆ. ಶಿವಕುಮಾರ್‌, ಶಾಸಕ ಸಂಜಯ ಪಾಟೀಲ ಉಪಸ್ಥಿತರಿದ್ದರು
ಬೆಳಗಾವಿಯ ಮೇಲ್ದರ್ಜೆಗೇರಿಸಲಾದ ವಿಮಾನ ನಿಲ್ದಾಣವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪಿ.ಅಶೋಕ ಗಜಪತಿರಾಜು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಮೇಯರ್‌ ಸಂಜೋತಾ ಬಾಂದೇಕರ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಸಚಿವ ರಮೇಶ ಜಾರಕಿಹೊಳಿ, ಕೇಂದ್ರ ಸಚಿವ ಅನಂತಕುಮಾರ್‌, ಸಚಿವ ಆರ್‌.ವಿ. ದೇಶಪಾಂಡೆ, ಸಂಸದ ಆರ್‌.ವಿ. ದೇಶಪಾಂಡೆ, ಸಚಿವ ಡಿ.ಕೆ. ಶಿವಕುಮಾರ್‌, ಶಾಸಕ ಸಂಜಯ ಪಾಟೀಲ ಉಪಸ್ಥಿತರಿದ್ದರು   

ಬೆಳಗಾವಿ: ರಾಜ್ಯದ ವಿಮಾನಯಾನ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಕೇಂದ್ರದ ಎನ್‌ಡಿಎ  ಸರ್ಕಾರವು ಅಂದಾಜು ₹ 600 ಕೋಟಿಗೂ ಹೆಚ್ಚು ವೆಚ್ಚ ಮಾಡಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪಿ.ಅಶೋಕ ಗಜಪತಿರಾಜು ಹೇಳಿದರು. ಇಲ್ಲಿನ ಮೇಲ್ದರ್ಜೆಗೇರಿಸಿದ ನೂತನ ವಿಮಾನ ನಿಲ್ದಾಣವನ್ನು ಗುರುವಾರ  ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬೆಳಗಾವಿಗೆ ₹ 142 ಕೋಟಿ, ಹುಬ್ಬಳ್ಳಿಗೆ ₹ 120 ಕೋಟಿ, ಮಂಗಳೂರಿಗೆ ₹ 253 ಕೋಟಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ₹ 90 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ಸರಕು (ಕಾರ್ಗೊ) ವಿಮಾನ ಪೂರಕ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸರಕು ಸಾಗಾಣಿಕೆ (ಕಾರ್ಗೊ) ವಿಮಾನಗಳ ಪಾತ್ರ ಬಹಳ ಮುಖ್ಯವಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಗೊ ವಿಮಾನಸೇವೆ ಆರಂಭಿಸಲು ಒತ್ತು ನೀಡಲಾಗುತ್ತಿದೆ ಎಂದು ಕೇಂದ್ರ ವಿಮಾನಯಾನ ಸಚಿವರಾದ ಪಿ.ಅಶೋಕ ಗಜಪತಿರಾಜು ಪ್ರತಿಪಾದಿಸಿದರು.
ಸಾಮಾನ್ಯ ಜನರೂ ವಿಮಾನದಲ್ಲಿ ಸಂಚರಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ವಾಯುಯಾನ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾದಂತೆ ಟಿಕೆಟ್ ದರ ಕಡಿಮೆಗೊಳ್ಳುತ್ತದೆ ಎಂದರು.

ADVERTISEMENT

ಆತಂಕ ಬೇಡ– ಸಿ.ಎಂ: ಬೆಳಗಾವಿ ವಿಮಾನ ನಿಲ್ದಾಣ ನಿರ್ಮಿಸಲು ಭೂಮಿ ನೀಡಿರುವ ರೈತರಿಗೆ ಹೆಚ್ಚುವರಿ ಪರಿಹಾರ ಒದಗಿಸುವ ಕುರಿತು ನ್ಯಾಯಾಲಯ ಆದೇಶ ನೀಡಿದೆ. ಇದನ್ನು ಕಾನೂನು ಇಲಾಖೆ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ರೈತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಹೊಸ ಭೂಸ್ವಾಧೀನ ಕಾಯ್ದೆ ಜಾರಿಯಾಗಿರುವುದರಿಂದ ಅದನ್ನು ಗಮನದಲ್ಲಿ ಇಟ್ಟುಕೊಂಡು ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರದಷ್ಟೇ ನಾವು ವೆಚ್ಚ ಮಾಡಿದ್ದೇವೆ. ನಿಲ್ದಾಣ ನಿರ್ಮಿಸಲು ಉಚಿತವಾಗಿ ಭೂಮಿ ಮತ್ತು ಮೂಲ ಸೌಕರ್ಯ ಒದಗಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರಿಡಿ, ರೇಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಿ ಎಂದು ಸಲಹೆ ಮಾಡಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ಬೆಳಗಾವಿ ವಿಮಾನ ನಿಲ್ದಾಣದಿಂದ ದೊಡ್ಡ ವಿಮಾನಗಳು ಹಾರಾಟ ನಡೆಸಿದರೆ ಪ್ರಯಾಣ ದರ ತಗ್ಗಲಿದೆ. ಇದರಿಂದ ಹೆಚ್ಚೆಚ್ಚು ಜನರಿಗೆ ವಿಮಾನ ಬಳಸಲು ಸಹಾಯಕವಾಗಲಿದೆ. ಇಲ್ಲಿನ ಉದ್ಯಮಿಗಳಿಗೆ, ಪುಷ್ಪ ಹಾಗೂ ತರಕಾರಿ ರಫ್ತು ಮಾಡುವವರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಕೇಂದ್ರ ಸಚಿವ ಅನಂತಕುಮಾರ್‌ ಮಾತನಾಡಿ, ಬೆಳಗಾವಿ, ಬೀದರ್‌, ಪುಣೆ ಸೇರಿದಂತೆ ಸುತ್ತಮುತ್ತಲಿನ ಸಣ್ಣ ನಗರಗಳಿಗೆ ‘ಶಟಲ್‌’ ಮಾದರಿಯಲ್ಲಿ ವಿಮಾನ ಸೇವೆ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ಹವಾಯಿ ಚಪ್ಪಲ್‌ ಹಾಕುವವರು ಕೂಡ ಹವಾಯಿ ಜಹಾಜ್‌ದಲ್ಲಿ (ವಿಮಾನ) ಪ್ರಯಾಣಿಸುವಂತೆ ಆಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಅವರ ಕನಸು ನನಸಾಗಲಿ ಎಂದರು.

ರಾಜ್ಯ ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಹಾಗೂ ಮೂಲಭೂತ ಸೌಲಭ್ಯ ಇಲಾಖೆ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿದರು.    ರಾಜ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ, ಶಾಸಕ ಸಂಜಯ ಪಾಟೀಲ, ಮೇಯರ್‌ ಸಂಜೋತಾ ಬಾಂದೆಕರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಭಾರತೀಯ ವಿಮಾನಯಾನ ಪ್ರಾಧಿಕಾರದ ನಿರ್ದೇಶಕ (ಯೋಜನಾ) ರಹೇಜಾ, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.