ADVERTISEMENT

ಅಬಕಾರಿ ನಿಯಮ ಉಲ್ಲಂಘನೆ; ಚುನಾವಣೆ ಮುಗಿಯುವವರೆಗೂ ಅಂಗಡಿಗಳು ಬಂದ್

17 ಮದ್ಯದಂಗಡಿ ಲೈಸೆನ್ಸ್ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 5:21 IST
Last Updated 21 ಏಪ್ರಿಲ್ 2018, 5:21 IST

ಬಾಗಲಕೋಟೆ: ‘ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಜಿಲ್ಲೆಯ 17 ಮದ್ಯದ ಅಂಗಡಿಗಳ ಲೈಸೆನ್ಸ್‌ ಅಮಾನತು ಮಾಡಿ ತಾತ್ಕಾಲಿಕವಾಗಿ ಬಂದ್‌ ಮಾಡಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಲೈಸೆನ್ಸ್ ಅಮಾನತುಗೊಂಡಿರುವ ಮದ್ಯದ ಅಂಗಡಿಗಳು ಏಪ್ರಿಲ್ 19ರಿಂದ ಮೇ 16ರವರೆಗೆ ಬಾಗಿಲು ತೆರೆಯುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಬಕಾರಿ ಇಲಾಖೆ ನಿಗದಿಗೊಳಿಸಿದ ಸಮಯ ಮೀರಿ ವ್ಯವಹಾರ ನಡೆಸಿರುವುದು, ಚಿಲ್ಲರೆ ಮದ್ಯ ಮಾರಾಟ ಹಾಗೂ ಮಾರಾಟಗೊಂಡ ಮದ್ಯದ ಪ್ರಮಾಣದ ಬಗ್ಗೆ ಸೂಕ್ತ ದಾಖಲೆ ಇಡದಿರುವುದು, ಗ್ರಾಹಕರಿಗೆ ರಸೀದಿ ಕೊಡದಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಸನ್ನದ್ದಿನ ಒಪ್ಪಂದ ಉಲ್ಲಂಘಿಸಿರುವುದು ಪರಿಶೀಲನೆ ವೇಳೆಯಲ್ಲಿ ಕಂಡುಬಂದಿದೆ’ ಎಂದರು.

ADVERTISEMENT

ನಿಯಮ ಪಾಲನೆಗೆ ಸೂಚನೆ: ಜಿಲ್ಲೆಯ ಮದ್ಯದ ಅಂಗಡಿಗಳ ಲೈಸೆನ್ಸ್‌ ದಾರರ ಸಭೆ ಕರೆದು,ಅಬಕಾರಿ ಇಲಾಖೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣೆ ನ್ಯಾಯಸಮ್ಮತ, ನಿಷ್ಪಕ್ಷಪಾತ ಮತ್ತು ಮುಕ್ತವಾಗಿ ಜರುಗಲು ನಿಮ್ಮದೂ ಸಹಕಾರ ಅಗತ್ಯವಿದೆ ಎಂಬುದನ್ನು ಮನದಟ್ಟು ಮಾಡಲಾಗಿದೆ ಎಂದು ತಿಳಿಸಿದರು.

ಮತಗಟ್ಟೆ ಅಧಿಕಾರಿಗಳ ತರಬೇತಿ: ಜಿಲ್ಲೆಯಲ್ಲಿ ಒಟ್ಟು 1,694 ಮತಗಟ್ಟೆಗಳಿಗೆ 10,588 ಸಿಬ್ಬಂದಿ ಆಯ್ಕೆ ಮಾಡಲಾಗಿದೆ. ಸದರಿ ಸಿಬ್ಬಂದಿಗಳ ಪೈಕಿ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿಗಳಿಗೆ ಏಪ್ರಿಲ್‌ 29 ಹಾಗೂ ಮೇ 7 ರಂದು ತರಬೇತಿ ನೀಡಲಾಗುತ್ತಿದೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ : ಮಿಂಚಿನ ನೋಂದಣಿ ಅಭಿಯಾನದ ವೇಳೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮಾರ್ಚ್ 1 ರಿಂದ 14 ರವರೆಗೆ ವಿಶೇಷ ಮತದಾರರ ಪರಿಷ್ಕರಣೆ ಅವಧಿಯಲ್ಲಿ ಒಟ್ಟು 33,696 ಹೆಸರು ಸೇರ್ಪಡೆಗೆ ಅರ್ಜಿಗಳು ಸ್ವೀಕೃತವಾಗಿವೆ. ಹೆಸರು ತೆಗೆದುಹಾಕಲು ಒಟ್ಟು 7,071 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲಿ ದಿನ 24 ಗಂಟೆಯೂ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ 08354–235121, 235125, 235126 ಹಾಗೂ 235109 ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.

ಪಿಂಕ್ ಮತಗಟ್ಟೆ ಸ್ಥಾಪಿಸಲು ನಿರ್ಧಾರ: ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಆಯ್ದ ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳನ್ನಾಗಿ ರೂಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗ 17 ಕಡೆ ಪಿಂಕ್‌ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ ತಿಳಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ ಹೇಳಿದರು. ಮತದಾನ ಜಾಗೃತಿಗೆ ಪ್ರಾಣೇಶ್ ಸೇರಿದಂತೆ ಹಲವು ಕಲಾವಿದರನ್ನು ಸೇರಿಸಿ ಹಾಸ್ಯ ಸಂಜೆ ಆಯೋಜಿಸಲಾಗುವುದು ಎಂದು ತಿಳಿಸಿದರು.

₹ 1.37 ಕೋಟಿ ಹಣ ಜಪ್ತಿ..

ಜಿಲ್ಲೆಯ 23 ತಪಾಸಣಾ ಕೇಂದ್ರಗಳಲ್ಲಿ ದಾಖಲೆ ರಹಿತ ಒಟ್ಟು ₹ 1.37 ಕೋಟಿ ನಗದು ಹಾಗೂ 1,255 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಅನುಮತಿ ಇಲ್ಲದೇ ಸಾಗಾಟ ಮಾಡುತ್ತಿದ್ದ ಸೀರೆ, ಬಟ್ಟೆ, ಅಕ್ಕಿ ಚೀಲ ವಶಪಡಿಸಿಕೊಂಡು ಒಟ್ಟು 9 ಪ್ರಕರಣ ದಾಖಲಿಸಲಾಗಿದೆ. ಕೇಂದ್ರ ಮೀಸಲು ಪಡೆಯ ಆರು ತುಕಡಿಗಳು ಚುನಾವಣೆ ಭದ್ರತೆಗಾಗಿ ಜಿಲ್ಲೆಗೆ ಬಂದಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದರು.

ಅಮಾನತುಗೊಂಡ ಲೈಸೆನ್ಸ್‌ದಾರರ ವಿವರ

ಬೀಳಗಿ ತಾಲ್ಲೂಕಿನ ಗಲಗಲಿಯ ಐ.ಬಿ.ನ್ಯಾಮಗೌಡರ, ಇಳಕಲ್‌ನ ಎಚ್.ಬಿ.ಪಾಟೀಲ, ಬಾಗಲಕೋಟೆಯ ಆರ್.ಎಸ್.ಬಿರಾದಾರ, ಜಮಖಂಡಿ ತಾಲೂಕಿನ ಬನಹಟ್ಟಿಯ ಎಂ.ಜೆ.ತೊರಗಲ್, ಬಾದಾಮಿ ತಾಲ್ಲೂಕಿನ ಚೊಳಚಗುಡ್ಡದ ಎ.ಎ.ಈಳಗೇರ, ಕುಳಗೇರಿ ಕ್ರಾಸ್‌ನಲ್ಲಿರುವ ಎಸ್.ಎ.ಕೊತಂಬರಿಕರ ಮತ್ತು ಎನ್.ಕೆ.ಹೊರಕೇರಿ, ಬಾಗಲಕೋಟೆಯ ಸಿ.ವಿ.ಯಳಮಲಿ, ಗುಡೂರಿನ ಎಸ್.ಜಿ.ಧಲಬಂಜನ್, ಎಂ.ಜಿ.ಧಲಬಂಜನ, ಜಮಖಂಡಿಯ ಎ.ಟಿ.ಪಾಟೀಲ, ಸಿ.ಡಿ.ಕಾಂಬಳೇಕರ, ಎಂ.ಆರ್.ಪಾಸಲಕರ್‌, ಹುನಗುಂದದ ಆರ್.ಎಸ್.ಕಲಾಲ, ಜಮಖಂಡಿ ತಾಲ್ಲೂಕಿನ ಸಾವಳಗಿಯ ಎಸ್.ಎಂ.ಕಲಾಲ, ಬೀಳಗಿಯ ಎಂ.ಎಸ್.ಐ.ಎಲ್. ಹಾಗೂ ಜಮಖಂಡಿಯ ರೇಣುಕಾ ಕೃಪಾ ಬಾರ್ ಲೈಸನ್‌ ಅಮಾನತು ಮಾಡಲಾಗಿದೆ.

ಮತದಾನದ ಅವಧಿ ಹೆಚ್ಚಳ

ಬಿಸಿಲ ಝಳದ ಕಾರಣ ಮಧ್ಯಾಹ್ನದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಬರುವುದಿಲ್ಲ. ಹಾಗಾಗಿ ಚುನಾವಣಾ ಆಯೋಗ ಮತದಾನದ ಸಮಯವನ್ನು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಅವಕಾಶ ಇತ್ತು. ಈಗ ಒಂದು ಗಂಟೆ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.