ADVERTISEMENT

ಆತಂಕ ಮುಕ್ತರಾಗಿ ಪರೀಕ್ಷೆ ಎದುರಿಸಿ

ಜೆ.ಸಿ. ಸಂಸ್ಥೆಯ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ತರಬೇತುದಾರ ಸದಾನಂದ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 6:50 IST
Last Updated 20 ಫೆಬ್ರುವರಿ 2017, 6:50 IST

ಮಹಾಲಿಂಗಪುರ: ಪರೀಕ್ಷೆಗಳು ವಿದ್ಯಾರ್ಥಿ ಜೀವನದಲ್ಲಿ ವರ್ಷಕ್ಕೊಮ್ಮ ಬಂದು ಹೋಗುವ ಸಾಮಾನ್ಯ ಹಾಗೂ ಸಹಜ ಸಂಗತಿಗಳು ಎಂದು ವ್ಯಕ್ತಿತ್ವ ವಿಕಸನದ ರಾಷ್ಟ್ರೀಯ ತರಬೇತುದಾರ ಸದಾನಂದ ನಾವಡ ಹೇಳಿದರು.

ಕೆಎಲ್ಇ ಪಾಲಿಟೆಕ್ನಿಕ್ ಆವರಣದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಜೆಸಿಐ ಮಹಾಲಿಂಗಪುರ ನಗರ ಘಟಕ ಶನಿವಾರ ಹಮ್ಮಿಕೊಂಡಿದ್ದ ‘ವ್ಯಕ್ತಿತ್ವ ವಿಕಸನ ಶಿಬಿರ, ಪರೀಕ್ಷೆ ಒಂದು ಹಬ್ಬ’ ಕಾರ್ಯಾಗಾರದ ಸಂವಾದಕರಾಗಿ ಭಾಗವಹಿಸಿ ಅವರು ಮಾತನಾಡಿದರು.

ಆರೋಗ್ಯಪೂರ್ಣ ಮನಸ್ಸಿನಿಂದ ನಿರಂತರ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಯಶಸ್ಸು ಸಾಧಿಸುತ್ತಾರೆ. ಪರೀಕ್ಷಾ ಸಂದರ್ಭದಲ್ಲಿ ಅನಾವಶ್ಯಕ ಭಯ, ಒತ್ತಡ ಹಾಗೂ ಆತಂಕಗಳಿಂದ ಮುಕ್ತರಾಗಬಲ್ಲವರು ಮಾತ್ರ ಬದುಕಿನ ಎಲ್ಲ ಹಂತಗಳಲ್ಲಿಯೂ ಗೆಲ್ಲುತ್ತಾರೆ.

ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಕುರಿತು ತಪ್ಪು ಕಲ್ಪನೆ ನೀಡಿ ಹೆದರಿಸುವವರು ಸಾಕಷ್ಟು ಜನರಿದ್ದಾರೆ. ಅಂಥವರ ಮಾತು­ಗಳಿಗೆ ಗಮನ ನೀಡದೆ ವಿದ್ಯಾರ್ಥಿಗಳು ಪರೀಕ್ಷೆ ಎಂಬುದೊಂದು ಸಾಮಾನ್ಯ ಪ್ರಕ್ರಿಯೆ, ವರ್ಷಕ್ಕೊಮ್ಮ ಬರುವ ಹಬ್ಬ ಎಂದು ಭಾವಿಸಿ ಸಂಭ್ರ­ಮದ ಮನೋಭಾವ ಬೆಳೆಸಿ­ಕೊಳ್ಳು­ವವರು ಭಯ ಮುಕ್ತರಾಗಿ ಪರೀಕ್ಷೆ ಎದುರಿಸಲು ಸಫಲರಾಗುತ್ತಾರೆ ಎಂದು ಹೇಳಿದರು.

ಕಾನ್ಪುರ ಐಐಟಿಯಲ್ಲಿ ವ್ಯಾಸಂಗ ಮಾಡಿದ ಸ್ಥಳೀಯ ಪ್ರತಿಭೆ ಹರ್ಷವರ್ದನ ವಜ್ಜರಮಟ್ಟಿ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು  ಎದುರಿಸುವ ಬಗೆ, ಪರೀ­ಕ್ಷೆಯಲ್ಲಿ ಪ್ರಶ್ನೆಗಳನ್ನು ಗ್ರಹಿಸಿ­ಕೊಳ್ಳುವ ಬಗೆ  ಕುರಿತು ವಿದ್ಯಾರ್ಥಿ­ಗಳೊಂದಿಗೆ ಅನುಭವ ಹಂಚಿಕೊಂಡರು. ಅತ್ಯಂತ ಕಡು­ಬಡ­ತನ­ದಲ್ಲಿ ಜನಿಸಿ ಕನ್ನಡ ಮಾಧ್ಯಮದಲ್ಲಿ ಕಲಿತು ಎಲ್ಲ ಪೈಪೋಟಿ­ಗಳನ್ನು ಎದುರಿಸಿ ತಾಂತ್ರಿಕ ಕ್ಷೇತ್ರದಲ್ಲಿ ತಾನು ಮಾಡಿದ ಸಾಧನೆಯನ್ನು ವಿವರಿ­ಸಿದಾಗ ವಿದ್ಯಾರ್ಥಿಗಳು ಪುಳಕ­ಗೊಂಡರು.

ಪಟ್ಟಣದ ಸುತ್ತಲಿನ ಸರ್ಕಾರಿ ಪ್ರೌಢಶಾಲೆಯ 200ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ವಿದ್ಯಾರ್ಥಿನಿಯರ ಕ್ರಿಯಾಶೀಲ ಭಾಗವಹಿಸುವಿಕೆ ಗಮನ ಸೆಳೆಯಿತು. ಶಂಕರ ಮುರಗೋಡ, ಶಿವಾನಂದ ತಿಪ್ಪಾ, ಪ್ರಾ.ಎಸ್.ಐ. ಕುಂದಗೋಳ, ಜಮಖಂಡಿ, ಮುಧೋಳ ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಶಿಬಿರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.