ADVERTISEMENT

ಇಬ್ಬರು ಬಾಲಕಿಯರಲ್ಲಿ ಡೆಂಗಿ ಪತ್ತೆ

ಗುಡೂರ ಗ್ರಾಮದಲ್ಲಿ ತಾತ್ಕಾಲಿಕ ಕ್ಲಿನಿಕ್ ಆರಂಭ; ಗ್ರಾಮಸ್ಥರಿಗೆ ಜಾಗೃತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 8:58 IST
Last Updated 27 ಮಾರ್ಚ್ 2017, 8:58 IST
ಇಳಕಲ್: ಸಮೀಪದ ಗುಡೂರ ಎಸ್‌ಬಿ ಗ್ರಾಮದ ಇಬ್ಬರು ಬಾಲಕಿಯರಲ್ಲಿ ಡೆಂಗಿ ಪತ್ತೆಯಾಗಿದ್ದು, ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಗ್ರಾಮದ ಅಂಗನವಾಡಿಯಲ್ಲಿ ತಾತ್ಕಾಲಿಕ ಕ್ಲಿನಿಕ್‌ ಆರಂಭಿಸಿದೆ.
 
ಗ್ರಾಮದ ಸಾನಿಕಾ ದೊಡ್ಡಪ್ಪ ಗೂಳಿ (5) ನಿರ್ಮಲಾ ಬಸಪ್ಪ ಗೂಳಿ (12) ಅವರಲ್ಲಿ ಡೆಂಗಿ ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಬಾಲಕಿಯರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈಚೆಗೆ ಗುಡೂರ ಎಸ್‌ಬಿ ಗ್ರಾಮಕ್ಕೆ ಹತ್ತಿರ ಇರುವ ಚಿಕ್ಕಕೊಡಗಲಿ ತಾಂಡಾದಲ್ಲಿ ಡೆಂಗಿ, ಮಲೇರಿಯಾ ಹಾಗೂ ಕರುಳುಬೇನೆ ವ್ಯಾಪಕ ಹರಡಿತ್ತು. ಕಳೆದ ವರ್ಷದ ಮಾರ್ಚನಲ್ಲಿ ಗುಡೂರ ಎಸ್‌ಬಿ ಗ್ರಾಮದಲ್ಲಿ ನೂರಾರು ಜನರಿಗೆ ಮಲೇರಿಯಾ ಹರಡಿತ್ತು.

ಈ ಹಿನ್ನಲೆಯಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾದ ಶನಿವಾರದಿಂದಲೇ ಗ್ರಾಮದಲ್ಲಿ ತಾತ್ಕಾಲಿಕ ಕ್ಲಿನಿಕ್‌ ತೆರೆಯಲು ಕ್ರಮ ಕೈಗೊಂಡಿದ್ದೇವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕುಸುಮಾ ಮಾಗಿ ತಿಳಿಸಿದ್ದಾರೆ.
 
ಶನಿವಾರದಂದು ಜ್ವರದಿಂದ ಬಳಲುತ್ತಿದ್ದ 20 ಜನರ ರಕ್ತ ತಪಾಸಣೆ ಮಾಡಲಾಗಿದೆ. ಯಾವುದೇ ರೋಗಾಣು ಕಂಡು ಬಂದಿಲ್ಲ. ಶನಿವಾರ ಗ್ರಾಮದಲ್ಲಿ ಡಾ.ಕುಸುಮಾ ಮಾಗಿ ಅವರ ನೇತೃತ್ವದ ಆರೋಗ್ಯ ಇಲಾಖೆಯ ತಂಡ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದೆ.
 
ಗ್ರಾಮದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಫಾಗಿಂಗ್‌ ಮಾಡಲಾಗುತ್ತಿದೆ ಎಂದು ಸ್ಥಳದಲ್ಲಿ ಬೀಡುಬಿಟ್ಟಿರುವ ಕಂದಗಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಎಸ್.ಎಸ್‌. ಬಿಂಜವಾಡಗಿ ಮಾಹಿತಿ ನೀಡಿದರು.
 
ಡಿಎಚ್‌ಓ ಭೇಟಿ:  ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಅನಂತ ದೇಸಾಯಿ ಮತ್ತು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜಯಶ್ರೀ ಎಮ್ಮಿ, ಡಾ. ಪಟ್ಟಣಶೆಟ್ಟಿ ಭಾನುವಾರ ಗುಡೂರ ಎಸ್‌ಬಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಕ್ಕೆ ಹೊಂದಿಕೊಂಡು ಇರುವ ಕೆರೆಯ ನೀರು ಕಲುಷಿತಗೊಂಡಿದ್ದು, ಸ್ವಚ್ಛಗೊಳಿಸಲು ಗ್ರಾಮ ಪಂಚಾಯ್ತಿ ಪಿಡಿಓ ಅವರಿಗೆ ಸೂಚಿಸಿದರು. 
 
ಗುಡೂರ ಎಸ್‌ಬಿ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಹಿರೇಕೊಡಗಲಿ ಗ್ರಾಮದಲ್ಲಿ ಯುಗಾದಿ ಪಾಡ್ಯಮಿಯಂದು ವೀರಭದ್ರೇಶ್ವರ ಜಾತ್ರೆ ನಡೆಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ನಿಗಾ ವಹಿಸಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ಮಲ್ಲನಗೌಡ ಪಾಟೀಲ ಮನವಿ ಮಾಡಿದರು. 
ತಾತ್ಕಾಲಿಕ ಕ್ಲಿನಿಕ್‌ನಲ್ಲಿ ಕಿರಿಯ ವೈದ್ಯಕೀಯ ಸಹಾಯಕ  ಬಿ.ಕೆ ಮುಜಾವರ, ಲ್ಯಾಬ್‌ ಟಿಕ್ನಿನಿಶಿಯನ್‌ ಬಸವರಾಜ ಸಂಕೀನ, ಅವಿನಾಶ ಧೂಪದ ಕಾರ್ಯ ನಿರ್ವಹಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.