ADVERTISEMENT

ಒಬ್ಬ ವಿದ್ಯಾರ್ಥಿ ಡಿಬಾರ್, 884 ಗೈರು

ಎಸ್ಎಸ್ಎಲ್‌ಸಿ ಪರೀಕ್ಷೆ: ಕನ್ನಡ ಭಾಷೆ ಪರೀಕ್ಷೆಗೆ 27,460 ವಿದ್ಯಾರ್ಥಿಗಳು ಹಾಜರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 8:52 IST
Last Updated 24 ಮಾರ್ಚ್ 2018, 8:52 IST

ಬಾಗಲಕೋಟೆ: ಜಿಲ್ಲೆಯಾದ್ಯಂತ ಶುಕ್ರವಾರ ಆರಂಭವಾದ ಎಸ್ಎಸ್ಎಲ್‌ಸಿ ಪರೀಕ್ಷೆ ಶಾಂತಿಯುತವಾಗಿ ನಡೆಯಿತು. ಒಟ್ಟು 92 ಕೇಂದ್ರಗಳಲ್ಲಿ ನಡೆದ ಕನ್ನಡ ಭಾಷೆ ಪರೀಕ್ಷೆಗೆ 27,460 ವಿದ್ಯಾರ್ಥಿಗಳು ಹಾಜರಾಗಿದ್ದರು. 884 ಮಕ್ಕಳು ಗೈರು ಹಾಜರಾಗಿದ್ದರು.

ಜಮಖಂಡಿಯ ಬಾಲಕಿಯರ ಪದವಿಪೂರ್ವ ಕಾಲೇಜು ಕೇಂದ್ರದಲ್ಲಿ ನಕಲು ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿ ಡಿಬಾರ್ ಆಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ತಿಳಿಸಿದ್ದಾರೆ.

ಇಳಕಲ್‌ನಲ್ಲಿ ಶಾಂತಿಯುತ

ADVERTISEMENT

ಇಳಕಲ್: ನಗರದಲ್ಲಿ ಮೂರು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿದ್ದು, ಗುರುವಾರ ನಡೆದ ಕನ್ನಡ ಪ್ರಥಮ ಭಾಷೆ ಪರೀಕ್ಷೆಯನ್ನು 1091 ವಿದ್ಯಾರ್ಥಿಗಳು ಬರೆದರು.

ಎಲ್ಲ ಪರೀಕ್ಷಾ ಕೊಠಡಿಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಲ್ಲ ಕೇಂದ್ರಗಳಲ್ಲೂ ಪರೀಕ್ಷೆಗಳು ಶಾಂತಯುತವಾಗಿ ನಡೆದವು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಮುರುಘರಾಜೇಂದ್ರ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ 12 ವಿದ್ಯಾರ್ಥಿಗಳು ಸೇರಿ 312 ವಿದ್ಯಾರ್ಥಿಗಳು, ಎಸ್‌ವಿಎಂ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 402 ವಿದ್ಯಾರ್ಥಿಗಳು ಹಾಗೂ ಎಸ್‌.ಆರ್‌. ಕಂಠಿ ಬಾಲಕಿಯರ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ 367 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಒಟ್ಟು 615 ವಿದ್ಯಾರ್ಥಿನಿಯರು ಹಾಗೂ 465 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದರು. ಈ ಸಲ ಬಾಲಕಿಯರ ಪ್ರೌಢಶಾಲೆ ಹಾಗೂ ಎಸಿಓ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ
ಪರೀಕ್ಷಾ ಕೇಂದ್ರಗಳನ್ನು ರದ್ದು ಮಾಡಲಾಗಿದೆ. 3 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಹೆಚ್ಚುವರಿ ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಲಾಗಿದೆ.

ನಕಲು ಮುಕ್ತ ಪರೀಕ್ಷೆ ನಡೆಸಲು ಸ್ಥಳೀಯ ಜಾಗೃತ ದಳ, ಸಂಚಾರಿ ಜಾಗೃತ ದಳ ನೇಮಕ ಮಾಡಲಾಗಿದೆ. ಜತೆಗೆ ಇಳಕಲ್‌ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಕಂದಗಲ್‌, ಖೋಡೆ ಪ್ರೌಢಶಾಲೆ ಗುಡೂರ (ಎಸ್‌ಸಿ), ಗುರುಸಿದ್ದೇಶ್ವರ ಪ್ರೌಢಶಾಲೆ ತುಂಬ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಪರೀಕ್ಷೆಗಳು ಶಾಂತಿಯುತವಾಗಿ ನಡೆದವು.

ಕುಳಗೇರಿ ಕ್ರಾಸ್: 5 ವಿದ್ಯಾರ್ಥಿಗಳು ಗೈರು

ಕುಳಗೇರಿ ಕ್ರಾಸ್: ಸ್ಥಳೀಯ ಜಿ.ಹಕ್ಕಾಪಕ್ಕಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಎಸ್ಎಸ್ಎಲ್‌ಸಿ ಪರೀಕ್ಷೆ ಶಾಂತಿಯುತವಾಗಿ ನಡೆಯಿತು.

ಒಟ್ಟು 253 ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಆರ್.ಆರ್.ಕುಲಕರ್ಣಿ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕಿ ಎಂ. ಕಾಮಾಕ್ಷಿ ಭೇಟಿ ನೀಡಿದರು. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಬೇಕು. ನಕಲು ತಡೆಗಟ್ಟಲು ಸಿಸಿ ಕ್ಯಾಮೆರಾ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.