ADVERTISEMENT

ಕೆರೆಗಳನ್ನು ನುಂಗಲು ಸಂಚು: ಕಾರಜೋಳ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 9:37 IST
Last Updated 23 ಜುಲೈ 2017, 9:37 IST

ಮುಧೋಳ: ‘ರಾಜ್ಯದಲ್ಲಿ ಹಿಂದೆ ಯಾರೂ ಪುಣ್ಯಾತ್ಮರು ಕಟ್ಟಿರುವ ಕೆರೆಗಳನ್ನು ನುಂಗಲು ರಾಜ್ಯ ಸರ್ಕಾರ ಸಂಚು ರೂಪಿಸಿದೆ’ ಎಂದು ಎಂದು ಶಾಸಕ ಗೋವಿಂದ ಕಾರಜೋಳ ದೂರಿದರು. ‘ರಾಜ್ಯದ 1500 ಕ್ಕೂ ಕೆರೆಗಳನ್ನು ಡಿ ನೋಟಿಫಿಕೇಶನ್ ಮಾಡಲು ಮುಂದಾಗಿದೆ. ಸರ್ಕಾರ ಈ ದುಸ್ಸಾಹಸಕ್ಕೆ ಕೈಹಾಕಬಾರದು. ಒಂದು ವೇಳೆ ಡಿ ನೋಟಿಫಿಕೇಶನ್ ಮಾಡಲು ಮುಂದಾದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಅವರು ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ಬಿಜೆಪಿ ವಿಸ್ತಾರಕರಾಗಿ ಆಗಮಿಸಿ 15 ದಿನಗಳ ಕಾಲ ಕಾರ್ಯನಿರ್ವಹಿಸಿದ್ದ ಲೋಕೇಶಗೌಡ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ‘ಕರ್ನಾಟಕದ ಇತಿಹಾಸದಲ್ಲಿ ಈ ಕಾಂಗ್ರೆಸ್ ಸರ್ಕಾರದಂತಹ ಮಾನ, ಮರ್ಯಾದೆ ಇಲ್ಲದ ನಿರ್ಲಜ್ಜ ಸರ್ಕಾರವನ್ನು ಜನತೆ ಎಂದು ನೋಡಿರಲಿಲ್ಲ. ಇದೊಂದು ತುಘುಲಕ್ ಸರ್ಕಾರ’ ಎಂದು ಹೇಳಿದರು.

‘ಕೇವಲ ಭ್ರಷ್ಟಾಚಾರದಲ್ಲಿ ಮಾತ್ರ ನಂ1 ಆಗಿದ್ದ ಈ ಕಾಂಗ್ರೆಸ್ ಸರ್ಕಾರ ಈಗ ಕೈದಿಗಳಿಗೆ ರಾಜಾಶ್ರಯ ನೀಡುವುದರ ಮೂಲಕ ದೇಶ ವಿದೇಶದಲ್ಲಿ ರಾಜ್ಯಕ್ಕೆ ಕೆಟ್ಟ ಹೆಸರು ತಂದಿದೆ. ಹಣಕ್ಕಾಗಿ ಇಲ್ಲಿ ಏನು ಬೇಕಾದರೂ ಆಗುತ್ತದೆ ಎಂಬ ಸಂದೇಶ ರವಾನೆಯಾಗಿದೆ’ ಎಂದರು.

ADVERTISEMENT

‘ದೇಶದ ವಿವಿಧ ಭಾಗಗಳಲ್ಲಿರುವ ಕೈದಿಗಳ ಸಂಬಂಧಿಗಳು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲು ಬೇಡಿಕೆ ಇಡುವಂತೆ ಮಾಡಲಾಗಿದೆ. ಭ್ರಷ್ಟಾಚಾರ ಪರಮಾವಧಿ ತಲುಪಿದೆ. ಹಣ ತಿಂದು ಸೆರೆಮನೆಯಲ್ಲಿ ಸ್ವರ್ಗ ಸೃಷ್ಟಿಸಲಾಗಿದೆ. ಈ ಕುರಿತು ನಿಸ್ಪಕ್ಷಪಾತ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.

ವಿಸ್ತಾರಕ ಲೋಕೇಶಗೌಡ ಮಾತನಾಡಿ ‘ನಾನು ಮುಧೋಳ ಕ್ಷೇತ್ರ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ, ಎಲ್ಲ ಸ್ತರದ ಜನರನ್ನು ಮಾತನಾಡಿಸಿದ್ದೇನೆ. ನಾನು ಕಂಡಂತೆ ರಾಜ್ಯ 224 ಕ್ಷೇತ್ರಗಳಲ್ಲಿ ಮುಧೋಳ ಕ್ಷೇತ್ರದಲ್ಲಿ ಶಾಸಕ ಕಾರಜೋಳರ ಕ್ರಿಯಾಶೀಲತೆ ಮುಂಧೋರಣೆಯ ಫಲವಾಗಿ ನೀರಾವರಿ, ರಸ್ತೆ, ಶಿಕ್ಷಣ ರಂಗದಲ್ಲಿ ಮುಂಚೂಣಿಯಲ್ಲಿದೆ’ ಎಂದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ನಾಗಪ್ಪ ಅಂಬಿ, ಮುಖಂಡರಾದ ಬಂಡುರಾವ ಘಾಟಗೆ, ಕುಮಾರ ಹುಲಕುಂದ, ಬಸವರಾಜ ಮಳಲಿ, ಆರ್.ಟಿ.ಪಾಟೀಲ, ರಾಜೇಂದ್ರ ಟಂಕಸಾಲಿ, ಕಲ್ಲಪ್ಪ ಸಬರದ, ಪ್ರಕಾಶ ಚಿತ್ತರಗಿ, ಪ್ರದೀಪ ನಿಂಬಾಳಕರ, ಪುಂಡಲೀಕ ಬೊಯಿ, ಅರುಣ ಕಾರಜೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.