ADVERTISEMENT

ಜೀವ ತೆತ್ತು ಸರ್ಕಾರದ ಕಣ್ಣು ತೆರೆಸಿದ್ದ ತಿಮ್ಮಣ್ಣ!

ವೆಂಕಟೇಶ್ ಜಿ.ಎಚ್
Published 29 ಏಪ್ರಿಲ್ 2017, 8:52 IST
Last Updated 29 ಏಪ್ರಿಲ್ 2017, 8:52 IST
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕು ಸೂಳಿಕೇರಿಯಲ್ಲಿ 2014ರ ಆಗಸ್ಟ್ 5ರಂದು, ತೆರೆದ ಕೊಳವೆಬಾವಿಗೆ ಬಿದ್ದಿದ್ದ ಬಾಲಕ ತಿಮ್ಮಣ್ಣನ ರಕ್ಷಣೆಗೆ ನಡೆದಿದ್ದ ಕಾರ್ಯಾಚರಣೆಯ ನೋಟ    (ಸಂಗ್ರಹ ಚಿತ್ರ)
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕು ಸೂಳಿಕೇರಿಯಲ್ಲಿ 2014ರ ಆಗಸ್ಟ್ 5ರಂದು, ತೆರೆದ ಕೊಳವೆಬಾವಿಗೆ ಬಿದ್ದಿದ್ದ ಬಾಲಕ ತಿಮ್ಮಣ್ಣನ ರಕ್ಷಣೆಗೆ ನಡೆದಿದ್ದ ಕಾರ್ಯಾಚರಣೆಯ ನೋಟ (ಸಂಗ್ರಹ ಚಿತ್ರ)   

ಬಾಗಲಕೋಟೆ:  ಜಿಲ್ಲೆಯ ಜಮಖಂಡಿ ತಾಲ್ಲೂಕು ಮುತ್ತೂರಿನ ಆರು ವರ್ಷದ ಬಾಲಕಿ ಕಾವೇರಿ, ಅಥಣಿ ತಾಲ್ಲೂಕಿನ ಝುಂಜರವಾಡದಲ್ಲಿ ಕೊಳವೆ ಬಾವಿಗೆ ಬಲಿಯಾದ ಪ್ರಕರಣ ಮಕ್ಕಳ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟಿಹಾಕಿದೆ.‘ವಿಫಲ ಕೊಳವೆ ಬಾವಿ’ ಎಂಬ ಯಮರಾಯನ ಅಡಗುತಾಣದಿಂದ ಪುಟ್ಟ ಕಂದಮ್ಮಗಳನ್ನು ರಕ್ಷಿಸಲು ಮೂರು ವರ್ಷಗಳ ಹಿಂದೆಯೇ ಸರ್ಕಾರ ಮಾರ್ಗಸೂಚಿ ರೂಪಿಸಿ ಸುತ್ತೋಲೆ ಹೊರಡಿಸಿದೆ. ಆಗ, ಇಲ್ಲಿನ ಬಾದಾಮಿ ತಾಲ್ಲೂಕಿನ ಸೂಳಿಕೇರಿಯ ಬಾಲಕ ತಿಮ್ಮಣ್ಣಹಟ್ಟಿ ಕೊಳವೆ ಬಾವಿಗೆ ಬಿದ್ದು ದುರಂತ ಅಂತ್ಯ ಕಂಡಿದ್ದ.

ಈ ಪ್ರಕರಣ ದೇಶದಾದ್ಯಂತ ಚರ್ಚೆ ಹುಟ್ಟುಹಾಕಿತ್ತು. ಪ್ರಭುತ್ವದ ಭಾವಕೋಶಕ್ಕೆ ಮೊದಲ ಬಾರಿಗೆ ತಿಮ್ಮಣ್ಣ ಜೀವ ತುಂಬಿದ್ದ. ಹಾಗಾಗಿ ಮೂರು ದಿನಗಳಲ್ಲಿಯೇ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆಗ ನಡೆದದ್ದೇನು?:  2014ರ ಆಗಸ್ಟ್ 3ರಂದು ದೊಡ್ಡಪ್ಪನ ಮಗನೊಂದಿಗೆ ಕಬ್ಬಿನಗದ್ದೆಗೆ ಹೋಗಿದ್ದ ತಿಮ್ಮಣ್ಣ ಆಟವಾಡುತ್ತಾ ತಮ್ಮ ಹೊಲದಲ್ಲಿದ್ದ ವಿಫಲ ಕೊಳವೆ ಬಾವಿಗೆ ಬಿದ್ದು,160 ಅಡಿ ಆಳಕ್ಕೆ ಜಾರಿದ್ದ. 190 ಗಂಟೆ ಸುದೀರ್ಘ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಹಟ್ಟಿ ಚಿನ್ನದ ಗಣಿಯ ತಂತ್ರಜ್ಞರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್ಎಫ್) ಜಿಲ್ಲಾಡಳಿತದ ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ 550ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.  ಈ ಘಟನೆ ಇಡೀ ರಾಷ್ಟ್ರದ ಗಮನಸೆಳೆದಿತ್ತು. ಸುರಂಗ ಕೊರೆಯುವಾಗ ಆಗಾಗ ಅಡ್ಡ ಬರುತ್ತಿದ್ದ ಬಂಡೆಕಲ್ಲುಗಳು, ಕುಸಿಯುತ್ತಿದ್ದ ಮಣ್ಣು, ಸುರಿಯುತ್ತಿದ್ದ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿತ್ತ.

‘ಇನ್ನು ರಕ್ಷಣೆ ಪ್ರಕ್ರಿಯೆ ಸಾಧ್ಯವಿಲ್ಲ’ ಎಂದು ಜಿಲ್ಲಾಡಳಿತ ಕೂಡ ಒಂದು ಹಂತದಲ್ಲಿ ಕೈಚಿಲ್ಲಿತ್ತು. ‘ತಿಮ್ಮಣ್ಣ ಬದುಕಿರುವ ಸಾಧ್ಯತೆ ಕಡಿಮೆ. ಹಾಗೆಯೇ ಮಣ್ಣು ಮುಚ್ಚುವುದು ಸೂಕ್ತ’ ಎಂದು ಆತನ ಕುಟುಂಬದವರು ನೀಡಿದ್ದ ಸಲಹೆಗೆ ಒಪ್ಪಿಗೆ ಸೂಚಿಸಲು ಮುಂದಾಗಿತ್ತು. ಆದರೆ ಆಗಿನ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮಾತ್ರ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ.‘ತಿಮ್ಮಣ್ಣನ ದೇಹವನ್ನು ಹೊರತೆಗೆದು ಸಾವಿಗೆ ಕಾರಣ ತಿಳಿಯಲೇಬೇಕು. ಇಲ್ಲದಿದ್ದರೆ ಕಾನೂನಿನ ತೊಡಕು ಎದುರಾಗಲಿದೆ. ಜೊತೆಗೆ ಮಾನವ ಹಕ್ಕು ಉಲ್ಲಂಘನೆಯಾಗಲಿದೆ’ ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದರು.

ADVERTISEMENT

 ಮರುದಿನವೇ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿತ್ತು. ಕೋಟ್ಯಂತರ ಜನರ ಪ್ರಾರ್ಥನೆ, ಹಾರೈಕೆಗಳ ನಡುವೆಯೂ ತಿಮ್ಮಣ್ಣ ಬದುಕಿ ಬರಲಿಲ್ಲ. ಬದಲಿಗೆ ಏರ್‌ಕಂಪ್ರೆಸರ್ ಮೂಲಕ ತಿಮ್ಮಣ್ಣದ ದೇಹದ ತುಂಡುಗಳನ್ನು ಮೇಲೆತ್ತಿ ಮತ್ತೆ ಜೋಡಿಸಿ ರಾತ್ರೋರಾತ್ರಿ ಶವಸಂಸ್ಕಾರ ನೆರವೇರಿಸಲಾಗಿತ್ತು.

ಹರಿದುಬಂದ ನೆರವು: ಸರ್ಕಾರ, ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳು, ಸಂಘ-–ಸಂಸ್ಥೆಗಳ ಮುಖಂಡರು, ಮಠಾಧೀಶರು ತಿಮ್ಮಣ್ಣನ ಕುಟುಂಬದ ನೆರವಿಗೆ ನಿಂತರು. ₹15.85 ಲಕ್ಷ ಪರಿಹಾರ ನೀಡಿ ಸಂತೈಸಿದರು.ಕಾರ್ಯಾಚರಣೆ ವೇಳೆ ಗುಂಡಿ ಬಿದ್ದು ಹಾಳಾಗಿದ್ದ ಹೊಲಕ್ಕೆ ಸಮೀಪದ ಮುಚಖಂಡಿ ಕೆರೆಯ ಫಲವತ್ತಾದ ಮಣ್ಣು ತರಿಸಿ ಹಾಕಿ ಜಿಲ್ಲಾಡಳಿತ ಅನುಕೂಲ ಮಾಡಿಕೊಟ್ಟಿತು.

ಇಡೀ ಕಾರ್ಯಾಚರಣೆಗೆ ಜಿಲ್ಲಾಡಳಿತ ಅಧಿಕೃತವಾಗಿ ₹45 ಲಕ್ಷ ವ್ಯಯಿಸಿತ್ತು. ತಿಮ್ಮಣ್ಣನ ಇಬ್ಬರು ಸಹೋದರಿಯರನ್ನು ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿಸಲಾಯಿತು.  ಜಿಲ್ಲಾಮಟ್ಟದ ಸಮಿತಿಯ ಅನುಮತಿ ಪಡೆಯದೇ ಬಾದಾಮಿ ಹಾಗೂ ಬಾಗಲಕೋಟೆ ತಾಲ್ಲೂಕಿನಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಲಾಯಿತು.

ಬದಲಾಗದ ಪರಿಸ್ಥಿತಿ:  ಆದರೆ, ತಿಮ್ಮಣ್ಣನ ಪ್ರಕರಣದ ನಂತರವೂ ಜಿಲ್ಲೆಯಲ್ಲಿ ಈ ವಿಚಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.  ಝುಂಜರವಾಡದಲ್ಲಿ ಕಾವೇರಿ ಕೊಳವೆಬಾವಿಗೆ ಬಿದ್ದ ಮರುದಿನವೇ ಹುನಗುಂದ ತಾಲ್ಲೂಕು ಅಮೀನಗಡ ದಲ್ಲಿ ಸಂಘಟನೆಯೊಂದರ ಕಾರ್ಯ ಕರ್ತರು ಮೂರು ನಿಷ್ಕ್ರಿಯ ಕೊಳವೆ ಬಾವಿಗಳನ್ನು  ಮುಚ್ಚಿದರು.ಈ ಬಗ್ಗೆ ಮಾಧ್ಯಮಗಳ ವರದಿ ಜಿಲ್ಲಾ ಪಂಚಾಯ್ತಿ ವಿಶೇಷ ಸಾಮಾನ್ಯಸಭೆ ಯಲ್ಲೂ ಪ್ರತಿಧ್ವನಿಸಿತು. ಮೂರು ದಿನ ಗಳ ಒಳಗಾಗಿ ಇಂಥ ಕೊಳವೆ ಬಾವಿ ಗಳನ್ನು ಮುಚ್ಚಲು ನಿರ್ಣಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.