ADVERTISEMENT

ದಲಿತರ ಮೇಲೆ ದೌರ್ಜನ್ಯ: ಪ್ರತಿಭಟನೆ

ಅಂಗನ­ವಾಡಿ ಕೇಂದ್ರ ಹಾಗೂ ಆಶಾ ಕಾರ್ಯಕ­ರ್ತರ ಹುದ್ದೆಗಳಲ್ಲಿ ಅವಕಾಶ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 13:44 IST
Last Updated 15 ಫೆಬ್ರುವರಿ 2017, 13:44 IST

ಬಾಗಲಕೋಟೆ: ತಾಲ್ಲೂಕಿನ ಖಜ್ಜಿ­ಡೋಣಿ ಗ್ರಾಮದಲ್ಲಿ ದಲಿತರ ಮೇಲೆ  ನಿರಂತರವಾಗಿ ದೌರ್ಜನ್ಯ ನಡೆಸಲಾ­ಗುತ್ತಿದೆ ಎಂದು ಆರೋಪಿಸಿ ಹಾಗೂ ಸಂತ್ರಸ್ತರಿಗೆ  ಮೂಲ ಸೌಕರ್ಯ ಒದಗಿಸ­ಬೇಕು ಎಂದು ಆಗ್ರಹಿಸಿ  ಕರ್ನಾಟಕ ದಲಿತ ಸೇವಾ ಸಮಿತಿ ವತಿ­ಯಿಂದ ಮಂಗ­ಳವಾರ ಇಲ್ಲಿನ ಜಿಲ್ಲಾ­ಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಗ್ರಾಮದಲ್ಲಿ ದಲಿತರ ಮೇಲೆ ನಿತ್ಯ ದೌರ್ಜನ್ಯ ನಡೆಯುತ್ತಿದೆ. ದಲಿತರಿಗೆ ಸಿಗಬೇಕಾಗದ ಸವಲತ್ತುಗಳು ಗ್ರಾಮ ಪಂಚಾಯ್ತಿಯಲ್ಲಿ ಸಿಗುತ್ತಿಲ್ಲ. ಅಂಗನ­ವಾಡಿ ಕೇಂದ್ರ ಹಾಗೂ ಆಶಾ ಕಾರ್ಯಕ­ರ್ತರ ಹುದ್ದೆಗಳಲ್ಲಿ ದಲಿತರಿಗೆ ಅವಕಾಶ ನೀಡುತ್ತಿಲ್ಲ. ಗ್ರಾಮ ಪಂಚಾಯ್ತಿ, ಶಾಲೆಗಳಲ್ಲಿ ದಲಿತ ನೌಕರರು ಕಾರ್ಯನಿರ್ವಹಿಸಲು ಬಿಡುತ್ತಿಲ್ಲ. ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ದಲಿತರಿಗೆ ವೇದಿಕೆ ಮೇಲೆ ಅವಕಾಶ ನೀಡುತ್ತಿಲ್ಲ. ಸರ್ಕಾರದಿಂದ ದೊರೆಯುವ ಯೋಜನೆಗಳನ್ನು ದಲಿತರ ಕಾಲೊನಿಗೆ ಹಂಚಲು ಬಿಡುತ್ತಿಲ್ಲ ಹೀಗೆ ಇನ್ನು ಅನೇಕ ಸಮಸ್ಯೆಗಳ ಮಧ್ಯ ಅಲ್ಲಿನ ದಲಿತ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯದ ವಿವಿಧೆಡೆ ದಲಿತ ಸಮು­ದಾಯದ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಕಳವಳಕಾರಿ­ಯಾದುದು. ಅಧಿಕಾರಿಗಳು ಕೂಡಲೇ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಕರ್ನಾಟಕ ದಲಿತ ಸೇನಾ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಸತೀಶ ಎಚ್. ಮಾದರ, ಅಶೋಕ ಮೇತ್ರಿ, ಶ್ರೀಕಾಂತ ಮೇತ್ರಿ, ವೆಂಕನ ಜೋಗಿನ, ಮೋಹನ ಶೆಲ್ಲಿಕೇರಿ, ದುರ್ಗಪ್ಪ ಕೊಪ್ಪದ, ರೇಣವ್ವ ಶೆಲ್ಲಿಕೇರಿ, ಯಲ್ಲವ್ವ ಕೊಪ್ಪದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.