ADVERTISEMENT

‘ನಾಡ ರಕ್ಷಣೆಗೆ ಖಡ್ಗ ಹಿಡಿದ ಚನ್ನಮ್ಮ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 5:27 IST
Last Updated 8 ನವೆಂಬರ್ 2017, 5:27 IST

ಬಾದಾಮಿ: ‘ಅಡುಗೆ ಮನೆಗೆ ಸೀಮಿತವಾದ ಮಹಿಳೆ ಅಗತ್ಯಬಿದ್ದಲ್ಲಿ ಖಡ್ಗ ಹಿಡಿದು ನಾಡ ರಕ್ಷಣೆಗೆ ಮುಂದಾಗುತ್ತಾಳೆ ಎಂಬುದಕ್ಕೆ ರಾಣಿ ಚನ್ನಮ್ಮ ಜ್ವಲಂತ ಉದಾಹರಣೆ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು. ಇಲ್ಲಿನ ಪಿಕಾರ್ಡ್‌ ಬ್ಯಾಂಕ್ ಆವರಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಮತ್ತು ಪಂಚಮಸಾಲಿ ಸಮಾಜದಿಂದ ಜರುಗಿದ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಚನ್ನಮ್ಮನ ಧೈರ್ಯ ಎಲ್ಲರಿಗೂ ಮಾದರಿ. ಇಂದಿನ ಮಹಿಳೆಯರು ಧೈರ್ಯ ಸ್ಥೈರ್ಯದಿಂದ ಬಾಳಬೇಕು’ ಎಂದು ಸಲಹೆ ನೀಡಿದರು. ‘ಕಪ್ಪ ಕೊಡಬೇಕ ಕಪ್ಪ, ನೀನಗೇಕೆ ಕಪ್ಪ ತೊಲಗು ಇಲ್ಲಿಂದ ಆಚೆ’ ಎಂದು ಬ್ರಿಟಿಷ್ ಅಧಿಕಾರಿಗೆ ಚನ್ನಮ್ಮ ಹೇಳಿದ ಮಾತನ್ನು ಪುನರುಚ್ಚರಿಸಿದ ವೀಣಾ ಕಾಶಪ್ಪನವರ ಸಭೆಯಲ್ಲಿ ಇದ್ದವರಿಂದ ಚಪ್ಪಾಳೆ ಗಿಟ್ಟಿಸಿದರು.

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಬ್ರಿಟಿಷರ ವಿರುದ್ಧ ಖಡ್ಗ ಹಿಡಿದು ಹೋರಾಟ ಮಾಡಿದ ರಾಣಿ ಚೆನ್ನಮ್ಮ ನಾಡಿನ ಮಹಿಳಾ ಸಂಕುಲಕ್ಕೆ ಸದಾ ಸ್ಫೂರ್ತಿದಾಯಕವಾಗಿದ್ದಾರೆ’ ಎಂದರು.

ADVERTISEMENT

‘ಸಮಾಜದ ಬೇಡಿಕೆಗೆ ಮಣಿದು ಚನ್ನಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಅವರಿಗೆ ಅಭಿನಂದನೆ. ವಿಧಾನಸೌಧದ ಮುಂದೆ ಕಿತ್ತೂರ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ’ ಹೇಳಿದರು.

ವಿದೇಶದಲ್ಲಿರುವ ಕಿತ್ತೂರ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಬಳಕೆ ಮಾಡಿದ್ದ ಖಡ್ಗಗಳನ್ನು ಮರಳಿ ನಾಡಿಗೆ ತರಿಸಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು. ಸಮಾಜವನ್ನು ಒಡೆಯುವ ಕೆಲಸಕ್ಕೆ ಕೆಲವರು ಕೈ ಹಾಕಿದ್ದಾರೆ. ಬೇರೆ ಜಾತಿಯವರ ಜೊತೆಗೆ ಪ್ರೀತಿಯಿಂದ ಇರುವ ಜೊತೆಗೆ ಪಂಚಮಸಾಲಿ ಸಮಾಜ ಒಗ್ಗಟ್ಟಾಗಿ ಇರಬೇಕು ಎಂದರು.

ಬಸವ ಜಯಮೃತ್ಯುಂಜ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಕಾಶ ನರಗುಂದ ಉಪನ್ಯಾಸ ನೀಡಿದರು.ಸಂಸದ ಪಿ.ಸಿ. ಗದ್ದಿಗೌಡರ ಚನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಅಕ್ಕಮಹಾದೇವಿ ಕಲ್ಯಾಣ ಮಂಟಪದಿಂದ ಪಿಕಾರ್ಡ್ ಬ್ಯಾಂಕಿನ ವರೆಗೆ ಅದ್ಧೂರಿಯಾಗಿ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಪ್ರೇಮಾ ಗುಳೇದಗುಡ್ಡ ಕುದುರೆಯ ಮೇಲೆ ಕಿತ್ತೂರ ಚನ್ನಮ್ಮಳ ವೇಷವನ್ನು ಧರಿಸಿ ಕೈಯಲ್ಲಿ ಖಡ್ಗ ಹಿಡಿದುಕೊಂಡದ್ದು ಆಕರ್ಷಕವಾಗಿತ್ತು. ಕುಂಭ ಹೊತ್ತ ಸುಮಂಗಲೆಯರು, ಹಿರಿಯರು, ಯುವಕರು, ಅಧಿಕಾರಿಗಳು ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಮಾಜದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.