ADVERTISEMENT

‘ಪರೀಕ್ಷೆಗೆ ಹೋಗಲು ಬಸ್‌ ಸೌಲಭ್ಯ ಕಲ್ಪಿಸಿ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:56 IST
Last Updated 23 ಮಾರ್ಚ್ 2017, 9:56 IST

ಬಾದಾಮಿ: ಇದೇ 30ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗ್ರಾಮೀಣ ಮಟ್ಟದಲ್ಲಿ ಕ್ಲಸ್ಟರ್‌ ಪದ್ಧತಿಯಿಂದ ಈ ಬಾರಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಎಸ್ಸೆಸ್ಸೆಲ್ಸಿ  ಕೇಂದ್ರವನ್ನು ತಲುಪಲು 30ರಿಂದ 35 ಕಿ.ಮೀ. ಹೋಗಬೇಕಿದೆ. ಹೊಸೂರ, ಗೋವನಕೊಪ್ಪ, ಹೆಬ್ಬಳ್ಳಿ ಮತ್ತು ಮುತ್ತಲಗೇರಿ ಗ್ರಾಮದ ವಿದ್ಯಾರ್ಥಿಗಳು ದೂರದ ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕಿದೆ ಎಂದು ಪೋಷಕರು ತಿಳಿಸಿದರು.

ತಾಲ್ಲೂಕಿನ ಗೋವನಕೊಪ್ಪ ಮತ್ತು ಹೆಬ್ಬಳ್ಳಿ ಗ್ರಾಮದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು 35 ಕಿ.ಮೀ. ದೂರದ ಬೇಲೂರ ಕೇಂದ್ರಕ್ಕೆ ಹೋಗಬೇಕು. ಹೊಸೂರ ಗ್ರಾಮದ ವಿದ್ಯಾರ್ಥಿಗಳು ದೂರದ ಹೆಬ್ಬಳ್ಳಿಗೆ ಹೋಗಬೇಕು. ಈ ಗ್ರಾಮಗಳಿಂದ ಯಾವುದೇ ಬಸ್‌ ಸೌಲಭ್ಯವಿಲ್ಲ. ಬಡ ವಿದ್ಯಾರ್ಥಿಗಳಿಗೆ ಮತ್ತಷ್ಟು  ತೊಂದರೆಯಾಗಿದೆ. ವಿದ್ಯಾರ್ಥಿಗಳು ಸುತ್ತು ಬಳಸಿ ನಿತ್ಯ ಬಸ್ಸಿಗೆ ₹ 50 ಕೊಟ್ಟು ಹೋಗಬೇಕು.

ಹೆಬ್ಬಳ್ಳಿ ಮತ್ತು ಗೋವನಕೊಪ್ಪ ಗ್ರಾಮದ ವಿದ್ಯಾರ್ಥಿಗಳಿಗೆ ಬೇಲೂರಿಗೆ ಹೋಗಲು ಬಸ್‌ ಸಂಚಾರ ಇಲ್ಲ. ಬಾದಾಮಿಗೆ ಬಂದು ಬೇಲೂರಿಗೆ ಹೋಗಬೇಕು. ಹೊಸೂರು ಗ್ರಾಮದ ವಿದ್ಯಾರ್ಥಿಗಳು ಚೊಳಚಗುಡ್ಡ ಇಲ್ಲವೆ ಬಾದಾಮಿಗೆ ಬಂದು ಸುತ್ತು ಬಳಸಿ ಹೆಬ್ಬಳ್ಳಿಗೆ ಹೋಗಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ಪರೀಕ್ಷೆಯಿಂದ ವಂಚತರಾಗುತ್ತಾರೆ  ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದರು.

‘ಕೈತೋರಿದಲ್ಲಿ ಬಸ್‌’ ನಿಲ್ಲಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಾಲಕರಿಗೆ ಸೂಚನೆ ನೀಡಿದೆ ಎಂದು ಪತ್ರಿಕೆಯಲ್ಲಿ ಬಂದಿದೆ. ಆದರೆ ಈ ಗ್ರಾಮಗಳ ರಸ್ತೆಗೆ ಬಸ್ಸುಗಳೇ ಬರುವುದಿಲ್ಲ. ಕೈ ಯಾರಿಗೆ ತೋರಿಸಬೇಕು ಎಂದು ತಿಳಿಯದಂತಾಗಿದೆ ಎಂದು ಪೋಷಕರು ದೂರಿದ್ದಾರೆ. ಹೊಸೂರು, ಬೇಲೂರ, ಹೆಬ್ಬಳ್ಳಿ ಮತ್ತು ಗೋವನಕೊಪ್ಪ ಮಾರ್ಗದಲ್ಲಿ ಬಸ್‌ ಸಂಚಾರದ ಸೌಲಭ್ಯ ಒದಗಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.