ADVERTISEMENT

‘ಮಠಮಾನ್ಯಗಳ ಕಾರ್ಯ ಸ್ತುತ್ಯಾರ್ಹ’

ಮರೇಗುದ್ದಿ ಗ್ರಾಮದ ಅಡವಿಸಿದ್ಧೇಶ್ವರ ಮಠದ ನಿರುಪಾಧೀಶ ಶ್ರೀಗಳ ಅಮೃತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 12:09 IST
Last Updated 11 ಮಾರ್ಚ್ 2017, 12:09 IST
ಜಮಖಂಡಿ:  ಸ್ವಾತಂತ್ರ್ಯಾನಂತರ ಮಠಮಾನ್ಯಗಳು ಶಿಕ್ಷಣ ಸಂಸ್ಥೆಗಳನ್ನು ತೆರೆಯದಿದ್ದರೆ ಹಾಗೂ ಬಡ ಮಕ್ಕಳಿಗೆ ಅನ್ನ ದಾಸೋಹ ಮಾಡದಿದ್ದರೆ ಇಂದಿನ ಜನಾಂಗಕ್ಕೆ ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರ ಮಾಡಲಾಗದ ಕೆಲಸವನ್ನು ಮಠಮಾನ್ಯಗಳು ಮಾಡಿರುವುದು ಸ್ತುತ್ಯಾರ್ಹ ಕಾರ್ಯ ಎಂದು ಬೀಳಗಿ ಶಾಸಕ ಜೆ.ಟಿ. ಪಾಟೀಲ ಹೇಳಿದರು.
 
ತಾಲ್ಲೂಕಿನ ಮರೇಗುದ್ದಿ ಗ್ರಾಮದ ಅಡವಿಸಿದ್ಧೇಶ್ವರ ಮಠದ ಆವರಣದಲ್ಲಿ ಗುರುವಾರ ಆರಂಭವಾಗಿರುವ ನಿರುಪಾಧೀಶ ಶ್ರೀಗಳ ಅಮೃತ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
 
ಮನುಷ್ಯರಾಗಿ ಮನುಷ್ಯರ ನೆರವಿಗೆ ನಾವು ಏಕೆ ಹೋಗುತ್ತಿಲ್ಲ. ನಾವು ಇತರರಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡಬಾರದು ಎಂಬ ತಿಳಿವಳಿಕೆ ಏಕೆ ಬರುತ್ತಿಲ್ಲ. ನಾವು ನಮ್ಮ ಸಂಸಾರದಲ್ಲಿ ಮುಳುಗಿದ್ದೇವೆ. ನಮ್ಮ ವಿಚಾರಗಳು ಕಲುಷಿತಗೊಂಡಿವೆ. ಸ್ವಾರ್ಥಿಗಳಾಗಿದ್ದೇವೆ. ಈ ನಿಟ್ಟಿನಲ್ಲಿ ಅಧ್ಯಾತ್ಮದ ಚಿಂತನೆ ನಡೆಯಬೇಕು ಎಂದರು.
 
ಹುನ್ನೂರಿನ ಬಸವಜ್ಞಾನ ಗುರುಕುಲದ ಅಧ್ಯಕ್ಷ, ಶರಣ ಡಾ.ಈಶ್ವರ ಮಂಟೂರ ಮಾತನಾಡಿ, ಸ್ವತಃ ಗ್ರಂಥಗಳನ್ನು ರಚಿಸಬೇಕು ಇಲ್ಲವೆ ನಮ್ಮನ್ನು ಕುರಿತು ಮತ್ತೊಬ್ಬರು ಗ್ರಂಥಗಳನ್ನು ರಚಿಸುವಂತ ಕಾರ್ಯ ಮಾಡಬೇಕು ಎಂಬುದಕ್ಕೆ ಮರೇಗುದ್ದಿಯ ಅಡವಿಸಿದ್ಧೇಶ್ವರ ಮಠದ ನಿರುಪಾದೀಶ ಶ್ರೀಗಳು ಮಾದರಿಯಾಗಿದ್ದಾರೆ ಎಂದರು.
 
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿದರು. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಜಿ.ಎಸ್‌.ನ್ಯಾಮಗೌಡ, ಚಂದ್ರಶೇಖರ ದೇಸಾಯಿ, ಉದ್ದಿಮೆದಾರ ಜಗದೀಶ ಗುಡಗುಂಟಿ, ಹನಮಂತಗೌಡ ಪಾಟೀಲ, ಸಾಹಿತಿ ಮಲ್ಲಿಕಾರ್ಜುನ ಯಾಳವಾರ, ಸಾಹಿತಿ ಗುರುಸ್ವಾಮಿ ಗಣಚಾರಿ ವೇದಿಕೆಯಲ್ಲಿದ್ದರು.
 
ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಪಂಚಮಶಿವಲಿಂಗೇಶ್ವರ ಶ್ರೀಗಳು ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಬೆಳಗಾವಿಯ ನಾಗನೂರ ರುದ್ರಾಕ್ಷಿ ಮಠದ ಡಾ.ಸಿದ್ಧರಾಮ ಶ್ರೀಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಮರೇಗುದ್ದಿಯ ಗುರುಪಾದಶ್ರೀಗಳು, ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಶ್ರೀಗಳು, ಚಿಮ್ಮಡ ವಿರಕ್ತ ಮಠದ ಪ್ರಭು ಶ್ರೀಗಳು, ಸಾನ್ನಿಧ್ಯ ವಹಿಸಿದ್ದರು.

ನಿರುಪಾಧೀಶ ಶ್ರೀಗಳು ರಚಿಸಿರುವ ‘ಸಿದ್ಧರಾಮ ವಿಲಾಸ’ ಹಾಗೂ ‘ಚಿನ್ನಿಧಿ’ ಎಂಬ ಎರಡು ಗ್ರಂಥಗಳನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.ಶೇಗುಣಸಿಯ ವಿರಕ್ತ ಮಠದ ಮಹಾಂತ ದೇವರು ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.