ADVERTISEMENT

ಮುರಿದು ಬಿದ್ದ ಮನೆಯ ಆಧಾರಸ್ತಂಭ

ಜಮ್ಮು ಕಾಶ್ಮೀರದಲ್ಲಿ ಯೋಧ ಮಂಜುನಾಥ ಡೆಂಗಿ ಜ್ವರಕ್ಕೆ ಬಲಿ

ಸಂಗಮೇಶ ಕೋಟಿ
Published 10 ಜುಲೈ 2017, 11:35 IST
Last Updated 10 ಜುಲೈ 2017, 11:35 IST

ಚಿಮ್ಮಡ (ಮಹಾಲಿಂಗಪುರ): ಒಂಬತ್ತು ವರ್ಷಗಳಿಂದ ದೇಶದ ಗಡಿಯಲ್ಲಿ ಪಹರೆ ನಡೆಸುತ್ತಿದ್ದ ಕೇಂದ್ರೀಯ ಮೀಸಲಾತಿ ಪೊಲೀಸ್ ಪಡೆಯ (ಸಿಆರ್‌ಪಿಎಫ್) ಯೋಧ ಮಂಜುನಾಥ ಮೇತ್ರಿ ಡೆಂಗಿ ಜ್ವರದಿಂದ ಶನಿವಾರ ಸಂಜೆ ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಚಿಮ್ಮಡದ ದೇವದಾಸಿ ಕುಟುಂಬ ದಲ್ಲಿ ಜನಿಸಿದ್ದ ಮಂಜುನಾಥ ಕೃಷಿಯಲ್ಲಿ ಅನುಭವ ಹೊಂದಿದ್ದರೂ ದೇಶ ಕಾಯುವ ಉತ್ಕಟ ಬಯಕೆಯಿಂದಾಗಿ ಸಿಆರ್‌ಪಿಎಫ್‌ಗೆ ಸೇರಿಕೊಂಡವರು. ತಾಯಿ ಬಾಗಲಕೋಟೆ ಜಿಲ್ಲೆಯ ಆಸಂಗಿ ಮತಕ್ಷೇತ್ರದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿ ರಾಜಕೀಯದಲ್ಲಿ ಸಕ್ರಿಯ ವಾಗಿದ್ದರೂ ಅದರ ಲಾಭ ಪಡೆದು ಕೊಳ್ಳಲು ಬಯಸದ ಮಂಜುನಾಥ ತನ್ನಿಚ್ಛೆಯಂತೆ ಸೇನೆ ಸೇರಿಕೊಂಡಿದ್ದರು.

ಮನೆಗೆ ಎರಡನೇ ಮಗನಾಗಿದ್ದ ಮಂಜುನಾಥ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಮಂಜುನಾಥ ಸಪ್ತಪದಿ ತುಳಿದು 2 ವರ್ಷಗಳೂ ಗತಿಸಿಲ್ಲ. ಕಳೆದ ಬಾರಿಯ ದುರ್ಗಾದೇವಿ ಜಾತ್ರೆಗೆಂದು ಊರಿಗೆ ಬಂದವರು ಈ ವರ್ಷವೂ ಬರುವುದಾಗಿ ತಿಳಿಸಿದ್ದರು. ಇನ್ನೊಂದು ವಾರದಲ್ಲಿ ಜಾತ್ರೆ ಇರುವುದರಿಂದ ಕುಟುಂಬದ ಸದಸ್ಯರು ಸಂಭ್ರಮದಲ್ಲಿದ್ದರು. ಪತಿಯ ಬರುವಿ ಕೆಯ ನಿರೀಕ್ಷೆಯಲ್ಲಿದ್ದ ಪತ್ನಿ ಲಕ್ಷ್ಮಿಗೆ ಶನಿ ವಾರ ಸಂಜೆ ಪತಿಯ ಸ್ನೇಹಿತರು ನೀಡಿದ ಸುದ್ದಿ  ಬದುಕನ್ನೇ ಕಿತ್ತುಕೊಂಡಿತ್ತು.

ADVERTISEMENT

‘ಸುದ್ದಿ ತಿಳಿಯುತ್ತಿದ್ದಂತೆ ನಂಬಲಾಗಲಿಲ್ಲ, ದೆಹಲಿಗೆ ಹೋಗ ಬೇಕೆಂದು ಗೋವಾ ವಿಮಾನ ನಿಲ್ದಾಣದವರೆಗೂ ಹೋದೆವು. ಅಲ್ಲಿ ಅಧಿಕೃತವಾಗಿ ನಮಗೆ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿತು. ನಾವು ಅತ್ತ ಹೋದರೆ ಅವರು ಈ ಕಡೆಗೆ ಬರುತ್ತಿದ್ದ ಕಾರಣ ಮರಳಿ ಬಂದೆವು’ ಎಂದು ಸಹೋದರ ಮುತ್ತು ಮೇತ್ರಿ ಅಣ್ಣನ ಸಾವಿನ ಕುರಿತು ಮಾಹಿತಿ ನೀಡಿದರು.

ಚಿಮ್ಮಡಕ್ಕೆ ಚಿಮ್ಮಡವೇ ಒಂದು ಕುಟುಂಬವಾಗಿ ಮಂಜುನಾಥನ ಪಾರ್ಥಿವ ಶರೀರಕ್ಕಾಗಿ ಕಾಯುತ್ತಿದೆ. ದೆಹಲಿಯನ್ನು ಬಿಟ್ಟು ಗೋವಾಗೆ ಬಂದು ಅಲ್ಲಿಂದ ರಸ್ತೆ ಮೂಲಕ ಗ್ರಾಮ ತಲುಪಬೇಕಿದೆ. ಕುಟುಂಬದೊಂದಿಗೆ ಗ್ರಾಮದ ಜನರೂ ದುಃಖದಲ್ಲಿ ಮುಳುಗಿದ್ದಾರೆ. ಮನೆತನದ ಆಧಾರ ಸ್ತಂಭವಾಗಿದ್ದ ಮಂಜುನಾಥನ ಸಾವಿನಿಂದ ಮನೆಯೇ ಮುರಿದಂತಾಗಿದೆ ಎಂಬ ಮಾತುಗಳು ಎಲ್ಲರ ಬಾಯಿಂದ ಕೇಳೀಬರುತ್ತಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.