ADVERTISEMENT

ಶರಣರ ವಚನಗಳು ಬದುಕಿಗೆ ದಾರಿದೀಪ

ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ತಿಮ್ಮಾಪುರ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 8:34 IST
Last Updated 23 ಮಾರ್ಚ್ 2018, 8:34 IST
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನತೆ
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನತೆ   

ಬಾಗಲಕೋಟೆ: ‘12ನೇ ಶತಮಾನದಲ್ಲಿ ಬಸವಣ್ಣನವರಿಗಿಂತ ಮೊದಲು ವಚನ ರಚಿಸಿದ ಶರಣ ದಾಸಿಮಯ್ಯನವರಾಗಿದ್ದು, ಅವರ ವಚನಗಳು ಪ್ರತಿಯೊಬ್ಬರ ಬದುಕಿಗೆ ದಾರಿದೀಪಗಳಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಜಿಲ್ಲಾಡಳಿತದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಬದುಕಿನಲ್ಲಿ ದಾಂಪತ್ಯ ಜೀವನ ಹೇಗಿರಬೇಕು ಎಂಬುದನ್ನು ವಚನಕಾರ ದಾಸಿಮಯ್ಯ ತಿಳಿಸಿಕೊಟ್ಟಿದ್ದಾರೆ. ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬುದನ್ನು ಅಲ್ಲಗೆಳೆದು, ಇಬ್ಬರು ಸಮಾನರು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ’ ಎಂದರು.

‘ಪರಮಾತ್ಮ ಕೊಟ್ಟಿದ್ದರಲ್ಲಿ ತೃಪ್ತಿಪಟ್ಟು ಜೀವನ ಸಾಗಿಸಿದ ಅವರು, ಸಮಾಜದ ಒಳಿತಿಗಾಗಿ ತಮ್ಮ ವಚನಗಳ ಮೂಲಕ ತಿಳಿವಳಿಕೆ ನೀಡಿದ್ದಾರೆ. ಇಂತಹ ಶರಣರ ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವುದು ಶರಣರಿಗೆ ನೀಡಿದ ಗೌರವಾಗಿದೆ’ ಎಂದರು.

ADVERTISEMENT

‘ನೇಕಾರರ ವೃತ್ತಿಯಿಂದ ಚಿರಪರಿಚಿತರಾದ ದಾಸಿಮಯ್ಯನವರು, ಅಂದು ತೃಪ್ತಿ ಜೀವನ ನಡೆಸಿದ್ದರು. ಇಂದಿನ ನೇಕಾರರ ಸ್ಥಿತಿಗತಿಗಳು ಸರಿಯಿಲ್ಲ. ಇದಕ್ಕಾಗಿ ಸರ್ಕಾರ ನೇಕಾರರಿಗೆ ಪ್ರೋತ್ಸಾಹಧನ, ಸಾಲಮನ್ನಾ ಮಾಡುವ ಕಾರ್ಯ ಕೈಗೊಂಡಿದೆ. ಮುಖ್ಯಮಂತ್ರಿಗಳು ನೇಕಾರ ಜನಾಗದ ಮೇಲೆ ಹೆಚ್ಚಿನ ಕಾಳಜಿ ಹೊಂದಿದ್ದರಿಂದ ಅವರ ಸಾಲ ಮನ್ನಾ ಮಾಡಿದ್ದಾರೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ‘ಪುರುಷ–ಮಹಿಳೆ ಇಬ್ಬರೂ ಸಮಾನರು ಎಂದು ವಚನಕಾರ ದಾಸಿಮಯ್ಯನವರು ತೋರಿಸಿಕೊಟ್ಟಿದ್ದಾರೆ. ತಮ್ಮ ವಚನದಲ್ಲಿ ರಾಮನಾಥ ಎಂಬ ಕಾವ್ಯ ನಾಮದೊಂದಿಗೆ ಅನೇಕ ವಚನಗಳನ್ನು ನೀಡಿದ್ದಾರೆ’ ಎಂದರು.

ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ‘ಮುಂದಿನ ಯುವ ಪೀಳಿಗೆ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ಜಯಂತಿ ಆಚರಿಸಲಾಗುತ್ತಿದೆ. ಬದುಕಿನ ಜಂಜಾಟ ಬಿಟ್ಟು ಶರಣರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರ ತತ್ವ ಹಾಗೂ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸವಾಗಬೇಕು’ ಎಂದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಧ್ಯಾಪಕ ಎಸ್.ಕೆ.ಬಂಗಾರಿ ಅವರು ದೇವರ ದಾಸಿಮಯ್ಯನವರ ಜೀವನ, ಬದುಕಿನ ದಾರಿ ಹಾಗೂ ಅವರು ರಚಿಸಿದ ವಚನಗಳ ಮಹತ್ವವನ್ನು ತಿಳಿಸಿಕೊಟ್ಟರು.

ಶಾಸಕ ಎಚ್.ವೈ.ಮೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಸಮಾಜದ ಮುಖಂಡರಾದ ಡಾ.ಎಂ.ಎಸ್.ದಡ್ಡೇನವರ, ಎಂ.ಎಂ.ಹಂಡಿ, ಶಿವಾನಂದ ನಾರಾ, ಎಸ್.ಎನ್.ಪಾಟೀಲ, ಗೋವಿಂದ ಬಳ್ಳಾರಿ, ಸತೀಶ ಸತ್ಯದವರ, ದಂಡಿನ ಸೇರಿದಂತ ಇತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು. ಕಂದಾಯ ಇಲಾಖೆಯ ಎಂ.ಬಿ.ಗುಡೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.