ADVERTISEMENT

ಶಿಷ್ಟಾಚಾರ ಪಾಲಿಸದ ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 13 ಮೇ 2017, 10:07 IST
Last Updated 13 ಮೇ 2017, 10:07 IST

ಬಾಗಲಕೋಟೆ: ತಾಲ್ಲೂಕಿನ ವಿವಿಧೆಡೆ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ಆಯಾ ತಾಲ್ಲೂಕು ಪಂಚಾಯ್ತಿ ಸದಸ್ಯರನ್ನು ಆಹ್ವಾನಿಸದೇ ಅಗೌರವ ತೋರಿಸಲಾಗುತ್ತಿದೆ ಎಂಬ ಆರೋಪ ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ಇಲಾಖೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಸದಸ್ಯರಿಗೆ ಕಾಟಾಚಾರಕ್ಕೆ ಎಂಬಂತೆ ಆಹ್ವಾನ ನೀಡಲಾಗುತ್ತದೆ. ಕಾರ್ಯಕ್ರಮದ ವೇದಿಕೆಯಲ್ಲಿ ಕನಿಷ್ಠ ಪಕ್ಷ ಸದಸ್ಯರ ಹೆಸರನ್ನು ಹೇಳದೇ ಅಗೌರವ ತೋರಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಸಲ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ ಮಾತನಾಡಿ, ಜನಪ್ರತಿನಿಧಿಗಳು ಐದು ವರ್ಷ ಆಡಳಿತ ನಡೆಸಿದರೂ ಸಹಿತ ಅವರಿಗೆ ಸಂವಿಧಾನದಲ್ಲಿ ವಿಶೇಷ ಗೌರವವಿದೆ. ಅಧಿಕಾರಿಗಳು ಸದಸ್ಯರ ಗೌರವಕ್ಕೆ ದಕ್ಕೆ ಬರದಂತೆ ನೋಡಿಕೊಳ್ಳಬೇಕು. ತಮ್ಮ ಇಲಾಖೆ ಕಾರ್ಯಕ್ರಮಗಳಿಗೆ ಸರಿಯಾದ ಮಾಹಿತಿ ನೀಡಿ, ಕಡ್ಡಾಯವಾಗಿ ಆಹ್ವಾನಿಸಬೇಕು. ಶಿಷ್ಠಾಚಾರ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ADVERTISEMENT

ತಾಲ್ಲೂಕು ಪಂಚಾಯ್ತಿ ಸದಸ್ಯೆ ರತ್ನಾ ಬಾರಕೇರ ಮಾತನಾಡಿ, ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಘಟಕ ಸ್ಥಾಪನೆಯಾಗಿ ವರ್ಷಗಳೇ ಕಳೆದರೂ ನೀರು ಮಾತ್ರ ದೊರಕುತ್ತಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಹಲವೆಡೆ ಪ್ಲೋರೈಡ್ ಅಂಶವಿರುವುದು ಪತ್ತೆಯಾಗಿದೆ. ಹೀಗಾಗಿ, ಘಟಕಗಳನ್ನು ಪ್ರಾರಂಭಿಸಿಲ್ಲ. ಬೇರೆ ಪ್ರದೇಶದಿಂದ ನೀರು ಪೂರೈಸಿ ಘಟಕ ಪ್ರಾರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು. ಕೃಷಿ ಹೊಂಡ, ಅನ್ನಭಾಗ್ಯ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.