ADVERTISEMENT

ಸೋಲಾರ್ ಸೈಕಲ್ ರಿಕ್ಷಾ, ವಿದ್ಯುತ್ ಕಂಬವೇ ಛತ್ರಿ

ರಾಜ್ಯಮಟ್ಟದ ತಾಂತ್ರಿಕ ವಸ್ತುಪ್ರದರ್ಶನ: ವೈವಿಧ್ಯಮಯ ಮಾದರಿಗಳ ಸಮಾಗಮ; ಕಣ್ಸೆಳೆದ ಹಲವು ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 12:02 IST
Last Updated 6 ಮಾರ್ಚ್ 2017, 12:02 IST
ಸೋಲಾರ್ ಸೈಕಲ್ ರಿಕ್ಷಾ, ವಿದ್ಯುತ್ ಕಂಬವೇ ಛತ್ರಿ
ಸೋಲಾರ್ ಸೈಕಲ್ ರಿಕ್ಷಾ, ವಿದ್ಯುತ್ ಕಂಬವೇ ಛತ್ರಿ   
ಬಾಗಲಕೋಟೆ:  ಪೆಡಲ್ ತುಳಿಯುವ ಶ್ರಮವಿಲ್ಲ. ಪೆಟ್ರೋಲ್ ಹಾಕಿಸಬೇಕಿಲ್ಲ. ಮೂರು ತಾಸು  ಬಿಸಿಲಿಗೆ ನಿಲ್ಲಿಸಿ ಚಾರ್ಜ್ ಮಾಡಿದಲ್ಲಿ ಮೂವರನ್ನು 35ರಿಂದ 40 ಕಿ.ಮೀ ದೂರ ಹೊತ್ತೊಯ್ಯುವ ಸೈಕಲ್ ರಿಕ್ಷಾ.

ಪ್ರಯಾಣಿಕರು ಹತ್ತುವಾಗ ಮೆಟ್ಟಿಲ ಮೇಲೆ ಬೀಳುವ ಒತ್ತಡದಿಂದ ಚಲಿಸುವ ಬಸ್‌. ಮಳೆ ನೀರು ಹಿಡಿದಿಟ್ಟು ಇಂಗಿಸುವ ವಿದ್ಯುತ್‌ ಕಂಬ, ಬೆಳೆಗೆ ಬೇಕಾಗುವಷ್ಟು ಮಾತ್ರ ನೀರು ಹಾಯಿಸುವ ಸೆನ್ಸರ್ ಚಾಲಿತ ಮೋಟಾರ್ ಯಂತ್ರ..
 
ಇಲ್ಲಿನ ನವನಗರದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಭಾನುವಾರ ಆರಂಭವಾದ ಪಾಲಿಟೆಕ್ನಿಕ್ ಕಾಲೇಜುಗಳ ರಾಜ್ಯಮಟ್ಟದ ತಾಂತ್ರಿಕ ವಸ್ತುಪ್ರದರ್ಶನದಲ್ಲಿ ಕಂಡು ಬಂದ ಮಾದರಿಗಳು ಇವು. 
 
ರಾಜ್ಯದ ವಿವಿಧೆಡೆಯಿಂದ ಬಂದಿರುವ ವಿದ್ಯಾರ್ಥಿಗಳು ಈ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಮೊದಲ ದಿನ ಆಸಕ್ತರಿಗೆ ಅವುಗಳ ತಾಂತ್ರಿಕ ಕಾರ್ಯಕ್ಷಮತೆಯನ್ನು ವಿದ್ಯಾರ್ಥಿಗಳೇ ಪರಿಚಯ ಮಾಡಿಕೊಟ್ಟರು.
 
ಸೋಲಾರ್ ಚಾಲಿತ ಸೈಕಲ್ ರಿಕ್ಷಾ:  ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಸಿ.ಬಿ.ಕೋರೆ ಪಾಲಿಟೆಕ್ನಿಕ್‌ನ ಆಟೊಮೊಬೈಲ್‌ ಎಂಜಿನಿಯರಿಂಗ್‌ ವಿಭಾಗದ 14 ಮಂದಿ ವಿದ್ಯಾರ್ಥಿಗಳ ತಂಡ ಸೋಲಾರ್ ಚಾಲಿತ ಸೈಕಲ್ ರಿಕ್ಷಾ ಅಭಿವೃದ್ಧಿಪಡಿಸಿದೆ. 
 
‘12 ವೋಲ್ಟ್‌ನ ಸೋಲಾರ್ ಪ್ಯಾನಲನ್ನು ರಿಕ್ಷಾದ ಮೇಲ್ಚಾವಣಿಗೆ ಅಳವಡಿಸಲಾಗಿದೆ. ಅಲ್ಲಿ ಉತ್ಪತ್ತಿಯಾಗುವ ಶಕ್ತಿ ಸರ್ಕಿಟ್ ಡಯೋಡ್ ಮೂಲಕ 12 ವೋಲ್ಟ್‌ ಸಾಮರ್ಥ್ಯದ ನಾಲ್ಕು ಬ್ಯಾಟರಿಗಳು ಚಾರ್ಜ್ ಮಾಡುತ್ತದೆ. ಅದರ ಸಹಾಯದಿಂದ ಸೈಕಲ್ ಓಡುತ್ತದೆ. ಹ್ಯಾಂಡಲ್ ಮುಂಭಾಗದ ಸ್ವಿಚ್‌ ಹಾಕಿದರೆ ಸೈಕಲ್ ಚಾಲನೆ ಪಡೆಯುತ್ತದೆ. ಎಕ್ಸಲೇಟರ್ ಬಳಸಿ ಸೈಕಲ್ ಓಡಿಸಬಹುದಾಗಿದೆ’ ಎಂದು ತಂಡದ ಮುಖಂಡ ರೋಹಿತ್ ಚವ್ಹಾಣ ಹೇಳಿದರು. ₹ 40 ಸಾವಿರ ವೆಚ್ಚದಲ್ಲಿ ಸೈಕಲ್ ತಯಾರಿಸಲಾಗಿದೆ. ಇದಕ್ಕೆ 15 ದಿನಗಳ ಕಾಲಾವಕಾಶ ತಗುಲಿದೆ. 
 
ಕಾಲೇಜಿನ ಪ್ರಾಚಾರ್ಯ ಬಿ.ಎ.ಪೂಜಾರಿ ಅವರ ಮಾರ್ಗದರ್ಶನದಲ್ಲಿ ಈ ಮಾದರಿ ತಯಾರಿಸಿದ್ದಾಗಿ ವಿದ್ಯಾರ್ಥಿ ಮಹಾವೀರ ಪಾಟೀಲ ತಿಳಿಸಿದರು.
ಮಳೆನೀರು ಇಂಗಿಸುವ ವಿದ್ಯುತ್ ಕಂಬ:  ಬೆಂಗಳೂರಿನ ಬಾಲ್ಡ್‌ವಿನ್ ಪಾಲಿಟೆಕ್ನಿಕ್‌ನ ಮೆಕ್ಯಾಕಲ್ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ಮಳೆ ನೀರು ಇಂಗಿಸುವ ವಿದ್ಯುತ್ ಕಂಬ ಅಭಿವೃದ್ಧಿಪಡಿಸಿದ್ದಾರೆ. 
 
ಅವರಿಗೆ ಉಪನ್ಯಾಸಕ ಜೇಮ್ಸ್ ರಾಜಾ ಮಾರ್ಗ ದರ್ಶನ ನೀಡಿದ್ದಾರೆ. ಬೇರೆ ಸಂದರ್ಭದಲ್ಲಿ ಸಾಮಾನ್ಯ ವಿದ್ಯುತ್ ಕಂಬದಂತೆ ಕಂಡರೂ, ಮಳೆ ಬಂದಾಗ ಮಾತ್ರ  ಛತ್ರಿಯಂತೆ ತುದಿಯಲ್ಲಿ ಗರಿಬಿಚ್ಚಿಕೊಳ್ಳುವ ಕಂಬ ಬಿದ್ದ ನೀರನ್ನು ಹಿಡಿದಿಡುತ್ತದೆ. ನಂತರ ಅದಕ್ಕಾಗಿಯೇ ವಿನ್ಯಾಸಗೊಳಿಸಿದ ಪೈಪ್ ಮೂಲಕ ನೀರನ್ನು ಬುಡದಲ್ಲಿಯೇ ಇಂಗಿಸುತ್ತದೆ. ರಸ್ತೆಗೆ ಬಿದ್ದು ಹರಿದುಹೋಗುವ ನೀರನ್ನು ತನ್ನ ಒಡಲಲ್ಲಿಯೇ ಇಂಗಿಸಿಕೊಂಡು ಅಂತರ್ಜಲಮಟ್ಟ ಹೆಚ್ಚಳಕ್ಕೆ ಈ ಕಂಬ ತನ್ನದೇ ಕೊಡುಗೆ ನೀಡುತ್ತದೆ.

ಈ ವಿಶೇಷ ವಿದ್ಯುತ್ ಕಂಬ ರೂಪಿಸಲು ₹ 40 ಸಾವಿರ ಖರ್ಚು ಮಾಡಿರುವುದಾಗಿ ಬಾಲ್ಡ್‌ವಿನ್ ವಿದ್ಯಾರ್ಥಿ ನಿಶಾಂತ್ ರಾಜಶೇಖರ್ ಹೇಳಿದರು. ಆರನೇ ಸೆಮಿಸ್ಟರ್‌ನ ಏಳು ಮಂದಿ ಗೆಳೆಯರು ಇದಕ್ಕೆ ಕೈ ಜೋಡಿಸಿದ್ದಾರೆ.  
 
ಮೆಕಾಟ್ರಾನಿಕ್ಸ್ ವ್ಯವಸ್ಥೆಯ ಬಸ್!
ಸ್ಥಳೀಯ ಬಿ.ವಿ.ವಿ ಸಂಘದ ಪಾಲಿಟೆಕ್ನಿಕ್‌ ಕಾಲೇಜಿನ ವಿದ್ಯಾರ್ಥಿಗಳು ಮೆಕಾಟ್ರಾನಿಕ್ಸ್ ತಾಂತ್ರಿಕತೆ ರೂಪಿಸಿ ನಗರ ಸಾರಿಗೆ ಬಸ್ ರೂಪಿಸಿರುವುದು ಪ್ರದರ್ಶನದಲ್ಲಿ ಗಮನ ಸೆಳೆಯಿತು.

ಬಸ್ ಹತ್ತುವಾಗ ಮೆಟ್ಟಿಲಲ್ಲಿ ಅಳವಡಿಸಿದ ಸ್ಪ್ರಿಂಗ್‌ನ ಮೇಲೆ ಬಿದ್ದ ಒತ್ತಡದಿಂದ ಉಂಟಾಗುವ ಶಕ್ತಿ ಡೈನಮೊ ಮೂಲಕ ಬ್ಯಾಟರಿಗೆ ವರ್ಗಾಯಿಸುವ, ಛಾವಣಿಯ ಮೇಲೆ ಸೋಲಾರ್ ಪೆನಾಲ್‌ ಅಳವಡಿಸಿ ಅದರಿಂದ ದೊರೆಯುವ ಶಕ್ತಿಯ ಬಳಕೆ. ಪವನ ಯಂತ್ರ (ಟರ್ಬೈನ್) ಅಳವಡಿಸಿ ಅದರಿಂದ ಉತ್ಪಾದನೆಯಾಗುವ ಶಕ್ತಿ ಬಳಸಿಕೊಂಡು ಬಸ್‌ ಓಡಿಸುವ ತಾಂತ್ರಿಕತೆ ಅಭಿವೃದ್ಧಿಪಡಿಸಲಾಗಿದೆ.

ಪೆಟ್ರೋಲ್, ಡೀಸೆಲ್‌ ಅಗತ್ಯವಿಲ್ಲದೇ  ಕಡಿಮೆ ದೂರದ ನಗರ ಸಾರಿಗೆಗೆ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟರು. ‘ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಈ ಮೂರು ವಿಭಾಗಗಳ ಸಮನ್ವಯದಿಂದ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನಕ್ಕೆ ಮೆಕಾಟ್ರಾನಿಕ್ಸ್ ಎಂದು ಕರೆಯಲಾಗುತ್ತಿದೆ’ ಎಂದು ವಿದ್ಯಾರ್ಥಿ ಮುತ್ತುರಾಜ ಕಡಪಟ್ಟಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.