ADVERTISEMENT

ಹಬ್ಬ ಆಚರಿಸಿ ಒತ್ತಡ ಮರೆತರು!

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 7:29 IST
Last Updated 8 ಜುಲೈ 2017, 7:29 IST

ಬಾಗಲಕೋಟೆ: ಸದಾ ಒತ್ತಡದ ನಡುವೆ ಕೆಲಸ ಮಾಡುವ ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಒಂದಷ್ಟು ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಲು ಆಯೋಜಿಸಿರುವ ಎರಡು ದಿನಗಳ ‘ಪಂಚಾಯ್ತಿ ನೌಕರರ ಹಬ್ಬ’ಕ್ಕೆ ಶುಕ್ರವಾರ ಚಾಲನೆ ದೊರೆತಿದೆ.

ನವನಗರದ ಅಂಬೇಡ್ಕರ್ ಭವನ ಹಬ್ಬದ ಆತಿಥ್ಯಕ್ಕೆ ವೇದಿಕೆಯಾಗಿದೆ. ಈ ವೇಳೆ ಇಲಾಖೆಯ ಎಲ್ಲಾ ನೌಕರರನ್ನು ಒಂದೆಡೆ ಸೇರಿಸಿ ಸಾಂಸ್ಕೃತಿಕ, ಕ್ರೀಡೆ ಹಾಗೂ ವ್ಯಕ್ತಿತ್ವ ವಿಕಸನ ಚಟುವಟಿಕೆ. ಜೊತೆಗೆ ದೇಹ–ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಯಿತು.

ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, ಅಧಿಕಾರಿಗಳು ಸೇರಿದಂತೆ ಇಲಾಖೆಯ ಆಡಳಿತ ಯಂತ್ರವೇ ಶುಕ್ರವಾರದಿಂದ ಜಿಲ್ಲಾ ಕೇಂದ್ರದಲ್ಲಿ ಬೀಡುಬಿಟ್ಟಿದೆ. ಸ್ವತಃ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್ ನೇತೃತ್ವ ವಹಿಸಿದ್ದಾರೆ.

ADVERTISEMENT

ಅಂಬೇಡ್ಕರ್‌ ಭವನದ ಆವರಣದಲ್ಲಿ ಮೊದಲ ದಿನ ಮುಂಜಾನೆ ರಂಗೋಲಿಯ ಚಿತ್ತಾರ ಆವರಿಸಿ ಹಬ್ಬಕ್ಕೆ ರಂಗುತುಂಬಿತು. ದಿನದ ಮೊದಲಾರ್ಧ ತಜ್ಞರಿಂದ ಉಪನ್ಯಾಸ ಕೊಡಿಸಿ ದೈನಂದಿನ ಕೆಲಸದ ಅವಧಿಯಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳುವ ವಿಧಾನವನ್ನು ನೌಕರರಿಗೆ ಹೇಳಿಕೊಡಲಾಯಿತು. ಮಧ್ಯಾಹ್ನ ಕ್ವಿಜ್‌ ಸ್ಪರ್ಧೆ ನಡೆಸಿ ಮಸ್ತಕಕ್ಕೆ ಒಂದಷ್ಟು ಕೆಲಸ ಕೊಡಲಾಯಿತು.

ಸಂಜೆಗೆ ಹಾಡು,ಹಸೆ, ನೃತ್ಯ, ಮಿಮಿಕ್ರಿ, ನಾಟಕ, ಏಕಪಾತ್ರಾಭಿನಯ ಕಳೆಗಟ್ಟಿದವು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ 300ಕ್ಕೂ ಹೆಚ್ಚು ನೌಕರರು ಒಂದೆಡೆ ಕಲೆತು ಸಂಭ್ರಮಿಸಿದರು. ಕಷ್ಟ–ಸುಖ ಹಂಚಿಕೊಂಡರು. ತಮ್ಮೊಳಗಿನ ಪ್ರತಿಭೆ ಹೊರಹಾಕಿದರು. ಶಿಳ್ಳೆ, ಚಪ್ಪಾಳೆ, ಶಹಬ್ಬಾಶ್‌ಗಿರಿ ಗಿಟ್ಟಿಸಿಕೊಂಡರು. ಕೆಲವರು ಹಿರಿಯ ಅಧಿಕಾರಿಗಳೊಂದಿಗೆ ಸಂವಾದಿಯಾಗಿ ನಿತ್ಯದ ಕೆಲಸ–ಕಾರ್ಯದಲ್ಲಿ ತಮಗೆ ಎದುರಾಗುವ ಆಡಳಿತಾತ್ಮಕ ತೊಡಕುಗಳಿಗೆ ಉತ್ತರಪಡೆದರು.

ಚೆನ್ನಾಗಿ ರಂಗೋಲಿ ಬಿಡಿಸಿದ, ಸಾಂಸ್ಕೃತಿಕ ಕಾರ್ಯಕ್ರಮದಡಿ ವೈವಿಧ್ಯಮಯ ಚಟುವಟಿಕೆಗಳಿಂದ ರಂಜಿಸಿದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಬಹುಮಾನ, ಪ್ರಶಂಸಾಪತ್ರ ನೀಡಿ ಗೌರವಿಸಲಾಯಿತು. ಮಧ್ಯಾಹ್ನ ಎಲ್ಲರೂ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಹಾಗೂ ಚಪಾತಿ ಊಟ ಸವಿದರು. 

ಮೊದಲ ಬಾರಿ ಆಯೋಜನೆ: ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೌಕರರನ್ನು ಒಂದೆಡೆ ಸೇರಿಸಿ ಸಂಭ್ರಮಿಸಲು ವೇದಿಕೆ ಕಲ್ಪಿಸಲಾಯಿತು.

ಮೂರು ವರ್ಷಗಳ ಹಿಂದೆ ಎಸ್‌.ಎಸ್. ನಕುಲ್ ಅವರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ವೇಳೆ ಹೀಗೊಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆದರೆ ಕಾರಣಾಂತರದಿಂದ ಅದಕ್ಕೆ ಅವಕಾಶವಾಗಿರಲಿಲ್ಲ ಎಂದು ಹಬ್ಬದಲ್ಲಿ ಪಾಲ್ಗೊಂಡಿದ್ದ ನೌಕರರು ಸಂತಸ ಹಂಚಿಕೊಂಡರು. ಶನಿವಾರ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಲ್ಲಿ ನೌಕರರ ತಮ್ಮ ಸಾಮರ್ಥ್ಯ ಒರೆಗಚ್ಚಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.