ADVERTISEMENT

ಕಮಲಾಪುರ ಕೆರೆ ಪಕ್ಕ ಹೊಸ ರಸ್ತೆಯಿಲ್ಲ

ಕೆರೆಯ ಏರಿ ಮೇಲಿನ ಈಗಿರುವ ರಸ್ತೆ ವಿಸ್ತರಣೆಗೂ ವಿರೋಧ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ಮೇ 2017, 10:10 IST
Last Updated 25 ಮೇ 2017, 10:10 IST
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಬಳಿ ವಿಜಯನಗರ ಅರಸರು ಕಟ್ಟಿಸಿದ ಕೆರೆ ಏರಿ ಮೇಲಿನ ಟಾರ್‌ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಲು ಉದ್ದೇಶಿಸಿದ್ದ ರಸ್ತೆಯನ್ನು (ಜಲ್ಲಿ ಸುರಿದ ಜಾಗದಲ್ಲಿ) ಕೈಬಿಡಲಾಗಿದೆ. –ಪ್ರಜಾವಾಣಿ ಚಿತ್ರ
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಬಳಿ ವಿಜಯನಗರ ಅರಸರು ಕಟ್ಟಿಸಿದ ಕೆರೆ ಏರಿ ಮೇಲಿನ ಟಾರ್‌ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಲು ಉದ್ದೇಶಿಸಿದ್ದ ರಸ್ತೆಯನ್ನು (ಜಲ್ಲಿ ಸುರಿದ ಜಾಗದಲ್ಲಿ) ಕೈಬಿಡಲಾಗಿದೆ. –ಪ್ರಜಾವಾಣಿ ಚಿತ್ರ   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಕೆರೆ ದಡದಲ್ಲಿ ಈಗಿರುವ ರಸ್ತೆಯ ಮಗ್ಗುಲಲ್ಲೇ ನಿರ್ಮಿಸಲು ಉದ್ದೇಶಿಸಿದ್ದ ಮತ್ತೊಂದು ಹೊಸ ರಸ್ತೆ ನಿರ್ಮಾಣ ಯೋಜನೆ ಕೈಬಿಡಲಾಗಿದೆ.

ಸ್ಥಳೀಯ ರೈತರು ಹಾಗೂ ಯುನೆಸ್ಕೊ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ರಸ್ತೆ ನಿರ್ಮಾಣ ಯೋಜನೆ ಯನ್ನು ಕೈಬಿಟ್ಟಿದೆ. ಪ್ರಾಧಿಕಾರದ ಆಯುಕ್ತ ರಾಗಿರುವ ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರೇ ಈ ವಿಷಯವನ್ನು ಬುಧವಾರ ‘ಪ್ರಜಾ ವಾಣಿ’ಗೆ ಖಚಿತಪಡಿಸಿದರು.

‘ಕಮಲಾಪುರ ಕೆರೆಯು ಹಂಪಿ ಕೋರ್‌ ಜೋನ್‌ನಲ್ಲಿ ಬರುವುದರಿಂದ ಹೊಸ ರಸ್ತೆ ನಿರ್ಮಿಸಲು ಬರುವುದಿಲ್ಲ. ಅಲ್ಲದೇ ಈಗಿರುವ ರಸ್ತೆಯ ಬದಿ ಹೊಸ ರಸ್ತೆ ನಿರ್ಮಿಸುವುದರಿಂದ ಕೆರೆಯ ತೂಬಿಗೆ ಹಾನಿಯಾಗುವ ಸಾಧ್ಯತೆ ಇತ್ತು. ಹಾಗಾಗಿ ಅದರ ಬದಲು ಈಗಿರುವ ರಸ್ತೆಯನ್ನೇ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ.

ಇದಕ್ಕೆ ಸರ್ಕಾರದಿಂದಲೂ ಒಪ್ಪಿಗೆ ಸಿಕ್ಕಿದೆ’ ಎಂದು ತಿಳಿಸಿದರು. ಎಷ್ಟು ಅಡಿಗಳ ವರೆಗೆ ರಸ್ತೆ ವಿಸ್ತರಿಸಲಾಗು ವುದು ಎಂಬ ಪ್ರಶ್ನೆಗೆ ಅವರು ಉತ್ತರಿ ಸಲಿಲ್ಲ. ಇದಕ್ಕೆ ಪೂರಕವೆಂಬಂತೆ ಈಗಾ ಗಲೇ ಕಮಲಾಪುರ ಕೆರೆ ಏರಿ ಮೇಲಿನ ರಸ್ತೆಬದಿಯಿದ್ದ ಲೋಹದ ಬ್ಯಾರಿಕೇಡ್‌ ತೆರವುಗೊಳಿಸಲಾಗಿದೆ.

ಈಗಿರುವ ರಸ್ತೆಯ ಪಕ್ಕ ಸುಮಾರು ಐದು ಅಡಿಗಳ ಷ್ಟು ಅಗಲ ಮಣ್ಣು ಸುರಿದು ರಸ್ತೆ ವಿಸ್ತರಣೆ ಕೆಲಸವನ್ನು ಲೋಕೋ ಪಯೋಗಿ ಇಲಾಖೆ (ಪಿ.ಡಬ್ಲ್ಯೂ.ಡಿ) ಕೈಗೆತ್ತಿ ಕೊಂಡಿದೆ. ಈ ಕುರಿತು ಪಿ.ಡಬ್ಲ್ಯೂ.ಡಿ. ಇಲಾಖೆಯ ಅಧಿಕಾರಿ ಗಳನ್ನು ಸಂಪರ್ಕಿ ಸಿದರೆ ಮಾಹಿತಿಗೆ ಲಭ್ಯರಾಗಲಿಲ್ಲ.

ಆದರೆ, ಹಂಪಿ ನಿರ್ವಹಣಾ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಕ್ರಮಕ್ಕೆ ಆಕ್ಷೇಪ ವ್ಯಕ್ತ ವಾಗಿದೆ. ‘ಹಂಪಿ ಕೋರ್‌ ಜೋನ್‌ನಲ್ಲಿ ಯಾವುದೇ ರೀತಿಯ ಹೊಸ ಚಟುವಟಿಕೆ ಗಳು ನಡೆಯುವಂತಿಲ್ಲ.

ಈಗಿರುವ ರಸ್ತೆ ವಿಸ್ತರಣೆ ಕೂಡ ಮಾಡಬಾರದು. ಒಂದುವೇಳೆ ಪಿಲ್ಲರ್‌ಗಳನ್ನು ಹಾಕಿ ರಸ್ತೆ ನಿರ್ಮಿಸಿದರೆ ಕೆರೆಗೆ ಹಾನಿಯಾಗುತ್ತದೆ’ ಎನ್ನುತ್ತಾರೆ ಜನಸಂಗ್ರಾಮ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಕುಮಾರ ಮಾಳಗಿ.

‘ಕಮಲಾಪುರ ಕೆರೆ ಜೀವಂತ ಸ್ಮಾರಕ. ಹಾಗಾಗಿಯೇ ಈ ಹಿಂದೆ ಕೆರೆ ಏರಿಯ ಕೆಳಭಾಗದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದಕ್ಕೆ ಯುನೆಸ್ಕೊ ಆಕ್ಷೇಪ ವ್ಯಕ್ತಪಡಿಸಿತ್ತು. ಇಷ್ಟಾದರೂ ಪ್ರಾಧಿಕಾರ ಹಟಕ್ಕೆ ಬಿದ್ದಿರುವುದು ಸರಿಯಲ್ಲ’ ಎಂದರು.

ರಸ್ತೆ ನಿರ್ಮಾಣ ಕೈಬಿಟ್ಟಿದ್ದೇಕೇ?: ಕಮಲಾಪುರ ಕೆರೆ ಇರುವ ಸುಮಾರು ಒಂದು ಕಿ.ಮೀ ಪ್ರದೇಶದಲ್ಲಿ ರಸ್ತೆ ಕಿರಿದಾಗಿದೆ. ಇದರಿಂದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕಾಗಿಯೇ ಲೋಕೋಪಯೋಗಿ ಇಲಾಖೆಯು ಈಗಿರುವ ರಸ್ತೆಗೆ ಸಮನಾಂತರವಾಗಿ ಇನ್ನೊಂದು ರಸ್ತೆ ನಿರ್ಮಿಸಲು ಮುಂದಾಗಿತ್ತು. ಇದಕ್ಕಾಗಿ ಕಾಂಕ್ರೀಟ್‌, ಜಲ್ಲಿ, ಸಿಮೆಂಟ್‌ ಸುರಿದು ಕಚ್ಚಾ ರಸ್ತೆ ಕೂಡ ನಿರ್ಮಾಣ ಮಾಡಿತ್ತು. ಆದರೆ, ಹೊಸದಾಗಿ ನಿರ್ಮಿಸಲು ಉದ್ದೇಶಿಸಿದ್ದ ರಸ್ತೆಯ ಜಾಗದಲ್ಲಿ ವಿಜಯ ನಗರ ಕಾಲದ ತೂಬುಗಳಿವೆ.

ಈ ನಾಲ್ಕು ತೂಬುಗಳ ಮೂಲಕವೇ ಸುಮಾರು ಎರಡು ಸಾವಿರ ಎಕರೆಗೂ ಹೆಚ್ಚಿನ ಕೃಷಿ ಪ್ರದೇಶಕ್ಕೆ ಕಮಲಾಪುರ ಕೆರೆಯ ನೀರು ಹರಿಯುತ್ತದೆ.
ಒಂದುವೇಳೆ ರಸ್ತೆ ನಿರ್ಮಿಸಿದರೆ ತೂಬುಗಳಿಗೆ ಹಾನಿಯಾಗ ಬಹುದು ಎಂದು ಸ್ಥಳೀಯ ರೈತರು ಹಾಗೂ ಜನಸಂಗ್ರಾಮ ಪರಿಷತ್ತು ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿತ್ತು.

ಈ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಈ ವರಧಿ ಆಧರಿಸಿ ಯುನೆಸ್ಕೊ ಕಾಮಗಾರಿ ಆಕ್ಷೇಪ ವ್ಯಕ್ತ ಪಡಿಸಿ, ಕೂಡಲೇ ನಿಲ್ಲಿಸುವಂತೆ ತಿಳಿಸಿತ್ತು. ಒಂದುವೇಳೆ ರಸ್ತೆ ನಿರ್ಮಾಣ ಕೈಬಿಡದಿ ದ್ದಲ್ಲಿ ಅಪಾಯದ ಅಂಚಿನಲ್ಲಿರುವ ತಾಣ ಗಳ ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

ಇದನ್ನೆಲ್ಲ ಮನಗಂಡಿ ರುವ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಉದ್ದೇಶಿತ ರಸ್ತೆ ನಿರ್ಮಾಣ ಯೋಜನೆಯನ್ನು ಕೈಬಿಟ್ಟಿದೆ. ಈಗ ಅದರ ಬದಲಾಗಿ ಈಗಿರುವ ರಸ್ತೆಯನ್ನು ವಿಸ್ತರಣೆ ಮಾಡಲು ಮುಂದಾಗಿದೆ.

*
ಕಮಲಾಪುರ ಕೆರೆ ಮೇಲಿಂದ ಹಾದು ಹೋಗಿರುವ ಪ್ರಸ್ತುತ ರಸ್ತೆಯನ್ನೇ ವಿಸ್ತರಣೆ ಮಾಡಲಾಗು ವುದು. ಸರ್ಕಾರ ಕೂಡ ಒಪ್ಪಿಗೆ ನೀಡಿದೆ.
-ಪ್ರಶಾಂತ್‌ ಕುಮಾರ್‌ ಮಿಶ್ರಾ, ಆಯುಕ್ತ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT