ADVERTISEMENT

ಗ್ರಾಮ ವಾಸ್ತವ್ಯಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ; ಕಾಂಗ್ರೆಸ್‌ನಲ್ಲಿ ಮೌನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಸೆಪ್ಟೆಂಬರ್ 2017, 5:11 IST
Last Updated 6 ಸೆಪ್ಟೆಂಬರ್ 2017, 5:11 IST
ಹೊಸಪೇಟೆ ತಾಲ್ಲೂಕಿನ ಹೊಸೂರು ಗ್ರಾಮದ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಕಿಚಿಡಿ ಗಂಗಮ್ಮ ಎಂಬುವರ ಮನೆಯಲ್ಲಿ ಸೋಮವಾರ ಆಹಾರ ಸೇವಿಸಿದ ಶಾಸಕ ಆನಂದ್‌ ಸಿಂಗ್‌ (ಎಡಚಿತ್ರ) ತಾಲ್ಲೂಕು ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ. ರವಿಕುಮಾರ್ (ಎಡತುದಿ) ಅವರನ್ನು ಶಾಸಕ ಆನಂದ್‌ ಸಿಂಗ್‌ ಪಕ್ಷದ ಧ್ವಜ ನೀಡಿ ಬಿಜೆಪಿಗೆ ಬರಮಾಡಿಕೊಂಡರು
ಹೊಸಪೇಟೆ ತಾಲ್ಲೂಕಿನ ಹೊಸೂರು ಗ್ರಾಮದ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಕಿಚಿಡಿ ಗಂಗಮ್ಮ ಎಂಬುವರ ಮನೆಯಲ್ಲಿ ಸೋಮವಾರ ಆಹಾರ ಸೇವಿಸಿದ ಶಾಸಕ ಆನಂದ್‌ ಸಿಂಗ್‌ (ಎಡಚಿತ್ರ) ತಾಲ್ಲೂಕು ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ. ರವಿಕುಮಾರ್ (ಎಡತುದಿ) ಅವರನ್ನು ಶಾಸಕ ಆನಂದ್‌ ಸಿಂಗ್‌ ಪಕ್ಷದ ಧ್ವಜ ನೀಡಿ ಬಿಜೆಪಿಗೆ ಬರಮಾಡಿಕೊಂಡರು   

ಹೊಸಪೇಟೆ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ವಿಜಯ ನಗರ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಆದರೆ, ಕಾಂಗ್ರೆಸ್‌ ಇನ್ನೂ ಸಿದ್ಧವಾದಂತೆ ಕಾಣಿಸುತ್ತಿಲ್ಲ.

‘ಸೆ. 1ರಿಂದ ಚುನಾವಣೆ ಮುಗಿಯು ವವರೆಗೆ ಕ್ಷೇತ್ರದಲ್ಲಿ ಠಿಕಾಣಿ ಹೂಡುತ್ತೇನೆ. ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ’ ಎಂದು ಇತ್ತೀಚೆಗೆ ನಗರದ ಪಕ್ಷದ ಕಚೇರಿಯಲ್ಲಿ ಜರುಗಿದ ಸಾಧನಾ ಸಮಾವೇಶದಲ್ಲಿ ಹಾಲಿ ಶಾಸಕ ಆನಂದ್‌ ಸಿಂಗ್‌ ಹೇಳಿ ದ್ದರು. ಅವರು ಹೇಳಿಕೊಂಡಿರುವಂತೆ ಸೆ. 1ರಿಂದ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಸೋಮವಾರದಿಂದ ಗ್ರಾಮ ವಾಸ್ತವ್ಯ ಆರಂಭಿಸಿದ್ದಾರೆ.

ತಾಲ್ಲೂಕಿನ ಹೊಸೂರಿನ ಪರಿಶಿಷ್ಟ ಪಂಗಡದ ಕಿಚಿಡಿ ಗಂಗಮ್ಮ ಎಂಬುವರ ಮನೆಯಲ್ಲಿ ಊಟ ಮಾಡಿದ್ದ ಅವರು, ರಾತ್ರಿ ಗ್ರಾಮದ ಹೊಸೂರಮ್ಮ ದೇವ ಸ್ಥಾನದಲ್ಲಿ ಮಲಗಿಕೊಂಡಿದ್ದರು. ಮಂಗಳವಾರವೂ ಅದೇ ಗ್ರಾಮದಲ್ಲಿ ವಾಸ್ತವ್ಯ ಮಾಡಿ, ಗ್ರಾಮಸ್ಥರ ಸಮಸ್ಯೆ ಆಲಿಸಿದರು. ‘ಕೆಲವು ಸಮಸ್ಯೆಗಳನ್ನು ಕೂಡಲೇ ಬಗೆಹರಿಸುತ್ತೇನೆ.

ADVERTISEMENT

ಕೆಲವನ್ನು ಅಧಿಕಾರಿಗಳಿಗೆ ಸೂಚನೆ ಕೊಟ್ಟು ನಿಗದಿತ ಕಾಲಮಿತಿಯಲ್ಲಿ ಪರಿಹರಿಸಲು ಪ್ರಯತ್ನಿ ಸುತ್ತೇನೆ’ ಎಂದು ಆನಂದ್‌ ಸಿಂಗ್‌ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.ಚುನಾವಣೆ ಸಮೀಪಿಸುವ ವರೆಗೆ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲು ಶಾಸಕರು ಯೋಜಿಸಿದ್ದಾರೆ. ಈ ಮೂಲಕ ಜನರ ವಿಶ್ವಾಸ ಗಳಿಸಲು ಅವರು ಮುಂದಾಗಿದ್ದಾರೆ.

ಅಲ್ಲದೇ ಪಕ್ಷದ ವಿವಿಧ ಮೋರ್ಚಾಗಳು ಪ್ರತಿ ಹಳ್ಳಿಯಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದು, ಪಕ್ಷವನ್ನು ಸಂಘಟಿಸು ತ್ತಿವೆ. ಅಂದಹಾಗೆ ಕ್ಷೇತ್ರದಲ್ಲಿ ಬಿಜೆಪಿ ಕಳೆದ ಒಂದು ವರ್ಷದ ಹಿಂದಿನಿಂದಲೇ ಚುನಾವಣೆಗೆ ತಯಾರಿ ನಡೆಸುತ್ತಿದೆ. ಬೂತ್‌ ಮಟ್ಟದಲ್ಲಿ ಅನೇಕ ಸಮಾವೇಶ ಗಳನ್ನು ನಡೆಸಿದೆ. ಈಗ ಅದು ಮತ್ತಷ್ಟು ಚುರುಕುಗೊಂಡಿದೆ.

ಆದರೆ, ಕಾಂಗ್ರೆಸ್‌ನಲ್ಲಿ ಇನ್ನೂ ಮೌನ ಮಾಡಿದೆ. ಗುಂಪುಗಾರಿಕೆಯಿಂದ ಆ ಪಕ್ಷ ಹೊರಬಂದಿಲ್ಲ. ಪಕ್ಷದ ಪ್ರಮುಖ ಮುಖಂಡರಾದ ಎಚ್‌.ಆರ್‌.ಗವಿಯಪ್ಪ, ದೀಪಕ್‌ ಸಿಂಗ್‌, ಅಬ್ದುಲ್‌ ವಹಾಬ್‌, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌ ಅವರ ನಡುವೆ ಕಾಂಗ್ರೆಸ್‌ ಕಾರ್ಯ ಕರ್ತರು ಹಂಚಿಹೋಗಿ ದ್ದಾರೆ. ಒಬ್ಬ ಮುಖಂಡನಿಗೆ ಕಂಡರೆ ಇನ್ನೊಬ್ಬ ಮುಖಂಡನಿಗೆ ಆಗುವು ದಿಲ್ಲ. ಈ ಹಿಂದಿನ ಎರಡು ಚುನಾವಣೆಯಲ್ಲಿ ಇದೇ ಕಾರಣಕ್ಕೆ ಆನಂದ್‌ ಸಿಂಗ್‌ ಗೆಲುವು ಸಾಧಿಸಿದ್ದಾರೆ. ಆದರೂ ಕಾಂಗ್ರೆಸ್‌ ಪಾಠ ಕಲಿತಿಲ್ಲ.

ಇನ್ನೂ ಗುಂಪುಗಾರಿಕೆ ಇರುವು ದರಿಂದ ಆ ಪಕ್ಷದಲ್ಲಿ ಮುಂದಿನ ಚುನಾ ವಣೆಗೆ ಯಾವುದೇ ಸಿದ್ಧತೆ ನಡೆಯುತ್ತಿರುವುದು ಕಂಡು ಬಂದಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣ ನಿಂಬ ಗಲ್‌, ‘ಶೀಘ್ರದಲ್ಲೇ ಪಕ್ಷದ ಅಭ್ಯರ್ಥಿ ಯಾರು ಎನ್ನುವುದು ಘೋಷಣೆಯಾಗಲಿದೆ.

ಬಳಿಕ ಮುಖಂಡರು ಎಲ್ಲ ಭಿನ್ನಾ ಭಿಪ್ರಾಯ ಮರೆತು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವರು. ಈಗಾ ಗಲೇ ಬೂತ್‌ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಏಜೆಂಟ್‌ರನ್ನು ನೇಮಿಸಲಾಗಿದೆ. ಪಕ್ಷದ ಸಂಘಟನೆ ಕೆಲಸ ನಡೆದಿದೆ. ಆದರೆ, ಪ್ರಚಾರ ಮಾಡುತ್ತಿಲ್ಲ’ ಎಂದು ಹೇಳಿದರು. ‘ಅಂದಹಾಗೆ ಚುನಾವಣೆಗೆ ಇನ್ನೂ ಏಳೆಂಟು ತಿಂಗಳು ಉಳಿದಿವೆ. ಹಾಗಂತ ನಾವು ಮೈಮರೆತಿಲ್ಲ. ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಬಾರಿ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ’ ಎಂದು ತಿಳಿಸಿದರು.

ಯುವ ಕಾಂಗ್ರೆಸ್‌ ಅಧ್ಯಕ್ಷ ರಾಜೀನಾಮೆ
ತಾಲ್ಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕೆ. ರವಿಕುಮಾರ್‌ ಮಂಗಳವಾರ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದಾರೆ. ರವಿಕುಮಾರ್‌ ಅವರ ತಾಯಿ ಕೆ. ನಾಗಲಕ್ಷ್ಮಮ್ಮ ಅವರು ನಗರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾದ 24 ಗಂಟೆಗಳ ಒಳಗೆ ಈ ವಿದ್ಯಮಾನ ನಡೆದಿದೆ. ನಾಗಲಕ್ಷ್ಮಮ್ಮ ಕಾಂಗ್ರೆಸ್‌ ಸದಸ್ಯೆಯಾಗಿದ್ದಾರೆ. ಸೋಮವಾರ ನಡೆದ ಚುನಾವಣೆಯಲ್ಲಿ ನಾಗಲಕ್ಷ್ಮಮ್ಮ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

‘ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಕೂಡಲೇ ಅದನ್ನು ಅಂಗೀಕರಿಸಬೇಕು. ವೈಯಕ್ತಿಕ ಕಾರಣಗಳಿಂದ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಆಗುತ್ತಿಲ್ಲ’ ಎಂದು ರವಿಕುಮಾರ್‌ ಅವರು ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ಮಂಗಳವಾರ ಪತ್ರ ಬರೆದಿದ್ದಾರೆ. ಪತ್ರ ಬರೆದ ಕೆಲವೇ ಗಂಟೆಗಳ ಬಳಿಕ ರವಿಕುಮಾರ್‌ ಅವರು ಬಿಜೆಪಿ ಕಚೇರಿಯಲ್ಲಿ ಶಾಸಕ ಆನಂದ್‌ ಸಿಂಗ್‌ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

* * 

ಜನರ ಸಮಸ್ಯೆ ಖುದ್ದಾಗಿ ತಿಳಿದುಕೊಂಡು ಅವುಗಳನ್ನು ಪರಿಹರಿಸಲು ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಈ ತೀರ್ಮಾನ
ಆನಂದ್‌ ಸಿಂಗ್‌
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.