ADVERTISEMENT

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ: ಲಾಡ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 5:35 IST
Last Updated 10 ಸೆಪ್ಟೆಂಬರ್ 2017, 5:35 IST
ಬಳ್ಳಾರಿಯ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಸೆ.12ರಂದು ನಡೆಯಲಿರುವ ಬಳ್ಳಾರಿ ಅಭಿವೃದ್ಧಿ ಮತ್ತು ಸಾಮಾಜಿಕ ಸಾಧನಾ ಸಮಾವೇಶದ ಪೂರ್ವಸಿದ್ಧತೆಗಳನ್ನು ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ ಪರಿಶೀಲಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್‌.ಆಂಜನೇಯುಲು ಮತ್ತು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಇದ್ದಾರೆ
ಬಳ್ಳಾರಿಯ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಸೆ.12ರಂದು ನಡೆಯಲಿರುವ ಬಳ್ಳಾರಿ ಅಭಿವೃದ್ಧಿ ಮತ್ತು ಸಾಮಾಜಿಕ ಸಾಧನಾ ಸಮಾವೇಶದ ಪೂರ್ವಸಿದ್ಧತೆಗಳನ್ನು ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ ಪರಿಶೀಲಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್‌.ಆಂಜನೇಯುಲು ಮತ್ತು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಇದ್ದಾರೆ   

ಬಳ್ಳಾರಿ: ‘ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಕಂಕಣಬದ್ಧವಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ ಜಾರಿಗೊಳಿಸಿದ ಕಾರ್ಯಕ್ರಮಗಳ ಕುರಿತ ಸಾಧನಾ ಸಮಾವೇಶ 12ರಂದು ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ’ ಎಂದು ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ ತಿಳಿಸಿದರು.

ಸಮಾವೇಶ ನಡೆಯಲಿರುವ ನಗರದ ಮುನ್ಸಿಪಲ್‌ ಕಾಲೇಜು ಮೈದಾನಕ್ಕೆ ಶನಿವಾರ ಸಂಜೆ ಭೇಟಿ ನೀಡಿ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಯ–ಬಸವ ಕಾಲುವೆ ಅಭಿವೃದ್ಧಿಗಾಗಿ ₹450 ಕೋಟಿ ಅನುದಾನ ಮೀಸಲಿಟ್ಟಿದ್ದು, ಸುಮಾರು 16 ಆಣೆಕಟ್ಟುಗಳನ್ನು ಆಧುನೀಕರಿಸಲಾಗುವುದು.

ಆ ಕುರಿತು ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಬಲದಂಡೆ ಕಾಲುವೆಯನ್ನು  ₹330 ಕೋಟಿ ವೆಚ್ಚದಲ್ಲಿ 120 ಕಿ.ಮೀ ಆಧುನೀಕರಣ ಮಾಡಲಾಗುತ್ತದೆ’ ಎಂದರು. ‘ಸರ್ಕಾರ ಸಹಕಾರ ಕ್ಷೇತ್ರದ ಸಾಲ ಮನ್ನಾ ಮಾಡಿದ್ದರಿಂದ ಜಿಲ್ಲೆಯ ರೈತರು 70 ಸಾವಿರ ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ. ರೈತರ ₨ 350 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಜಿಲ್ಲೆಯಲ್ಲಿ 20 ಸಾವಿರ ಮಂದಿಗೆ ಪ್ರೋತ್ಸಾಹ ಧನ ನೀಡಲಾಗಿದೆ’ ಎಂದರು.

ADVERTISEMENT

ಉದ್ಯಾನಗಳ ಲೋಕಾರ್ಪಣೆ: ‘41 ಉದ್ಯಾನಗಳ ಲೋಕಾರ್ಪಣೆ ಎಂದು ಜಿಲ್ಲಾಡಳಿತ ಹೇಳಿದ್ದರೂ, ಹೊಸ ಉದ್ಯಾನಗಳು ಬಹಳ ಇಲ್ಲ. ಹಲವು ಉದ್ಯಾನಗಳ ಕಾಂಪೌಂಡ್‌ಗಳನ್ನು ಆಧುನೀಕರಿಸಲಾಗುತ್ತಿದೆ ಅಷ್ಟೇ’ ಎಂದು ಹೇಳಿದ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವರು, ‘ನಗರದಲ್ಲಿರುವ ಉದ್ಯಾನ ಗಳ ಪೈಕಿ 40ರಷ್ಟನ್ನು ಆಧುನೀಕರಣ ಗೊಳಿಸಲಾಗುತ್ತಿದೆ, ಕೆಲವು ಹೊಸ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆ ಕುರಿತು ಟೆಂಡರ್‌ ಕರೆಯಲಾಗಿದೆ’ ಎಂದರು,

ರಾಜ್ಯದಲ್ಲೇ ಮೊದಲು: ಏಳು ದಶಕಗಳ ಬಳಿಕ ಇದೇ ಮೊದಲ ಬಾರಿಗೆ, ಅಕ್ರಮ ಸಕ್ರಮ ಯೋಜನೆಯಲ್ಲಿ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ರಾಜ್ಯದಲ್ಲೇ ಜಿಲ್ಲೆಯ ಅತಿ ಹೆಚ್ಚು ಮಂದಿಗೆ ಈ ಸೌಲಭ್ಯ ದೊರಕಲಿರು ವುದು ವಿಶೇಷ’ ಎಂದರು.

9000 ಮಂದಿಗೆ ನಿವೇಶನ: ‘ನಗರದ ಮುಂಡಿರಿಗಿ ಮತ್ತು ಹಲಕುಂದಿ ಪ್ರದೇಶದ 296,96 ಎಕರೆ ಪ್ರದೇಶದಲ್ಲಿ ₨ 600 ಕೋಟಿ ವೆಚ್ಚದಲ್ಲಿ ಆಶ್ರಯ ಬಡಾವಣೆಯನ್ನು ನಿರ್ಮಿಸಲಾಗುವುದು. ಅರ್ಜಿ ಸಲ್ಲಿಸಿರುವವರ ಪೈಕಿ 9 ಸಾವಿರ ಅರ್ಹರನ್ನು ಗುರುತಿಸಲಾಗಿದೆ. ಅವರೆಲ್ಲರಿಗೂ ಹಕ್ಕುಪತ್ರ ನೀಡಲಾಗುವುದು’ ಎಂದರು.

‘ಜಿಲ್ಲೆಯ 1,52 ಲಕ್ಷ ಮಂದಿಗೆ ಅಡುಗೆ ಅನಿಲ ಸೌಲಭ್ಯ ದೊರೆತಿಲ್ಲ. ಜಿಲ್ಲಾ ಖನಿಜ ನಿಧಿಯಿಂದ 1 ಲಕ್ಷ ಮಹಿಳೆಯರಿಗೆ ಈ ಸೌಲಭ್ಯ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್‌.ಆಂಜನೇಯುಲು ಉಪಸ್ಥಿತರಿದ್ದರು.

ಸಿ.ಎಂ.ಗೆ ಮನವಿ ನೀಡಲು ಅವಕಾಶ
ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿಪತ್ರ ನೀಡಲು ಸಂಘ–ಸಂಸ್ಥೆಗಳ ಮುಖಂಡರಿಗೆ ಅವಕಾಶ ನೀಡಲಾಗುವುದು. ಆಸಕ್ತರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಅನುಮತಿ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ತಿಳಿಸಿದರು.

ಅಂಕಿ ಅಂಶ
3.42ಲಕ್ಷ ಜಿಲ್ಲೆಯ ಒಟ್ಟು ಫಲಾನುಭವಿಗಳು 

₹2,959 ಕೋಟಿ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.