ADVERTISEMENT

ಟ್ಯಾಂಕರ್ ನೀರು ಪೂರೈಕೆ; ನಳನಳಿಸುತ್ತಿರುವ ಗಿಡ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:17 IST
Last Updated 17 ಏಪ್ರಿಲ್ 2017, 7:17 IST

ಕೂಡ್ಲಿಗಿ:  ತಾಲ್ಲೂಕಿನ ರಸ್ತೆ ಬದಿ ಗಿಡಗಳು ಬಿಸಿಲ ಬೇಗೆಗೆ ಸೊರಗಿ ಒಣಗದಂತೆ  ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಟ್ಯಾಂಕರ್‌ಗಳ ನೀರು ಹಾಕಿ ನಳ ನಳಿಸುವಂತೆ ಮಾಡುತ್ತಿದೆ.ಕಳೆದ ಮುಂಗಾರು ಆರಂಭದ ಜೂನ್ ತಿಂಗಳಲ್ಲಿ ಅರಣ್ಯ ಇಲಾಖೆಯಿಂದ ಕೂಡ್ಲಿಗಿ  ಸೇರಿದಂತೆ ತಾಲ್ಲೂಕಿನ  ಕೊಟ್ಟೂರು ಪಟ್ಟಣ, ಶಿವಪುರ ಮತ್ತು ಬಡೇಲಡಕು ಗ್ರಾಮಗಳ ರಸ್ತೆಗಳ ಬದಿಯಲ್ಲಿ ಐದು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆ, ಗಾಂಧೀ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ, ಸಂತೆ ಮೈದಾನ, ಶ್ರೀ ನಗರ ಸೇರಿದಂತೆ ವಿವಿಧೆಡೆ 1200 ಗಿಡ ನೆಡಲಾಗಿತ್ತು.

ಗಿಡಗಳನ್ನು ನೆಟ್ಟ ದಿನದಿಂದ ಆಕ್ಟೋಬರ್‌ವರೆಗೆ ಬಿದ್ದಿದ್ದ ಅಲ್ಪ ಮಳೆಯಿಂದ ಗಿಡಗಳು ಚಿಗುರಿ ಚೆನ್ನಾಗಿ ಬೆಳೆಯಲಾರಂಭಿಸಿದ್ದವು. ಆದರೆ ನವೆಂಬರ್‌ದಿಂದ ಮಳೆ ಬಾರದಿರುವುದರಿಂದ ಗಿಡಗಳು ನೀರಿನ ಕೊರತೆ ಹಾಗೂ ಫೆಬ್ರುವರಿ ತಿಂಗಳಿನಿಂದ ಆರಂಭವಾದ ಬಿಸಿಲಿನ ಪ್ರಖರತೆಗೆ ಗಿಡಗಳು ಒಣಗುವ ಆತಂಕ ಎದುರಾಗಿತ್ತು. ಜೊತೆಗೆ ಕೀಟ ಬಾಧೆ ಕೂಡ ಕಾಡಲಾರಂಬಿಸಿದ್ದವು.  ಇದನ್ನು ಗಮನಿಸಿದ ಅರಣ್ಯ ಇಲಾಖೆ ಆಧಿಕಾರಿಗಳು ಟ್ಯಾಂಕರ್ ಮೂಲಕ ನೀರುಣಿಸಿ ಗಿಡಗಳ ರಕ್ಷಣೆಗೆ ಮುಂದಾದರು.

ಒಮ್ಮೆ ಗಿಡ ನೆಟ್ಟ ಮೇಲೆ ಮೂರು ಬಾರಿ ಮಾತ್ರ ನೀರು ಬಿಡುವ ಅವಕಾಶವಿರುತ್ತದೆ. ಆದರೆ ತಾಲ್ಲೂಕಿನ ಆರಣ್ಯ ಅಧಿಕಾರಿಗಳು ಪರಿಸರ ಕಾಳಜಿಯಿಂದ  ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು 10 ದಿನಕ್ಕೊಮ್ಮೆ ನೀರು ಬಿಡುವ ಮೂಲಕ ಗಿಡಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದು, ಎಲೆ ತಿನ್ನುವ ಕೀಟಗಳಿಂದ ಗಿಡಗಳನ್ನು ರಕ್ಷಿಸಲು ಕೀಟ ನಾಶಕವನ್ನೂ ಸಿಂಪಡಿಸುತ್ತಿದ್ದಾರೆ.

ADVERTISEMENT

ದನ, ಕರು, ಮೇಕೆಗಳಿಂದ ರಕ್ಷಿಸಲು ಗಿಡಗಳ ಸುತ್ತ ಮುಳ್ಳಿನ ಕಂಟೆ ಕಟ್ಟಲಾಗಿದೆ. ಇದರಿಂದ ಪಟ್ಟಣದ ಪ್ರಮುಖ ರಸ್ತೆಯ ಎರಡು ಬದಿಯಲ್ಲಿ ನೆಟ್ಟಿರುವ ಬೇವು, ಬತ್ತಿ, ಹರಳೆ ಗಿಡಗಳು  ನಳ ನಳಿಸುತ್ತಿವೆ.  ಉತ್ತಮ ಮಳೆ ಬಂದರೆ ಗಿಡಗಳು  ಉತ್ತಮವಾಗಿ ಬೆಳೆಯಲಿವೆ.  ಸಿಬ್ಬಂದಿ ಟ್ಯಾಂಕರ್‌ಗಳಲ್ಲಿ ಗಿಡಗಳಿಗೆ ನೀರುಣಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಆದರೆ ಸಾರ್ವಜನಿಕರು ಸಹ ತಾವು ಬಳಸಿ ವ್ಯರ್ಥವಾದ ನೀರನ್ನು ಎಲ್ಲೆಂದರೆ ಅಲ್ಲಿ ಚಲ್ಲದೆ ಗಿಡಗಳ ಬುಡಕ್ಕೆ ಹಾಕಬೇಕು ಎನ್ನುತ್ತಾರೆ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.