ADVERTISEMENT

ಡೆಂಗಿಗೆ ಮೂರನೇ ಬಲಿ, ಗ್ರಾಮಸ್ಥರ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 5:16 IST
Last Updated 6 ಸೆಪ್ಟೆಂಬರ್ 2017, 5:16 IST

ಮರಿಯಮ್ಮನಹಳ್ಳಿ: ‘ಹದಿನೈದು ದಿನದಾಗ ಮನ್ಯಾಗ ಎಲ್ರ ಕೈಯಾಗ ಆಡ್ತಾ ಆಡ್ತಾ ಇದ್ದ  ಎಲ್ಡು ಮಕ್ಕಳು ಜ್ವರ ಅಂತ ಕೈಬಿಟ್ಟು ಹೋದ್ರೆ ಹೆಂಗಮಾಡೋದಪ್ಪ ನೀವೇ ಹೇಳಿ, ಕಬ್ಬು ಕಡೆದು ಕೂಲಿನಾಲಿ ಜೀವನ ಮಾಡೋ ನಾವು, ಸಾಲಸೋಲ ಮಾಡಿ ತೋರಿಸಿದರೂ ಮಕ್ಕಳು ಉಳಿಲಿಲ್ಲ ಅಂದ್ರ ಯಾರಿಗೆ ಹೇಳೋಣಾ ನಮ್‌ ಕಷ್ಟ....’

ಇದು ಮರಿಯಮ್ಮನಹಳ್ಳಿ ತಾಂಡಾದ 17ನೇ ವಾರ್ಡ್‌ನಲ್ಲಿ ಮಂಗಳವಾರ ಶಂಕಿತ ಡೆಂಗಿ ಜ್ವರದಿಂದ ಮೃತಪಟ್ಟ ಐದು ವರ್ಷದ ಬಾಲಕಿ ದಿವ್ಯಾಳ ತಂದೆ, ತಾಯಿ ಸೇರಿದಂತೆ ಕುಟುಂಬ ವರ್ಗ ರೋಧಿಸುತ್ತಿದ್ದ ದೃಶ್ಯ ಎಂತಹವರಿಗೂ ಕರಳು ಕಿವುಚುವಂತಿತ್ತು.

ಇದೇ ಮನೆಯಲ್ಲಿ ಹದಿನೈದು ದಿನದ ಹಿಂದೆ ಬಾಲಕ ಪ್ರವೀಣ್‌ ನಾಯ್ಕ್ (3) ಸಹ ಇದೇ ಶಂಕಿತ ಡೆಂಗಿ ಜ್ವರದಿಂದ ಮೃತಪಟ್ಟಿದ್ದು, ಆ ಬಾಲಕನ ಸಾವಿನ ನೋವು ಮಾಸುವ ಮುನ್ನಾ ಮತ್ತೊಂದು ಘಟನೆ ಜರುಗಿರುವುದರಿಂದ ಕುಟುಂಬ ವರ್ಗದ ರೋಧನ ಮುಗಿಲು ಮುಟ್ಟಿತ್ತು.

ADVERTISEMENT

ಜೊತೆಗೆ ಇದೇ ಮನೆಯಲ್ಲಿ ಮತ್ತೊಂದು ಬಾಲಕ ಸಹ ಶಂಕಿತ ಜ್ವರದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮನೆಯ ಸದಸ್ಯರು ತಿಳಿಸಿದರು. ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಜ್ವರದ ಬಾಧೆ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಕೆ.ಎಚ್‌.ನಾಯ್ಕ್‌ ಮಾತನಾಡಿ, ತಾಂಡಾದಲ್ಲಿ ಶಂಕಿತ ಡೆಂಗಿ ಜ್ವರದಿಂದ ಒಂದೇ ಮನೆಯಲ್ಲಿ ಎರಡು ಮಕ್ಕಳು ಮೃತಪಟ್ಟಿರುವುದು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಈ ಬಗ್ಗೆ ವೈದ್ಯಾಧಿಕಾರಿಗಳಿಗೆ ಹದಿನೈದು ದಿನದ ಹಿಂದೆಯೇ ಸೂಕ್ತ ಕ್ರಮಕೈಗೊಂಡು ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯುವಂತೆ ತಿಳಿಸಿದ್ದರೂ ಮುಂದಾಗಿಲ್ಲ. ಅಲ್ಲದೆ ಪಟ್ಟಣ ಪಂಚಾಯ್ತಿಯಿಂದ ಈಗಾಗಲೇ ಸ್ವಚ್ಛಗೆ ಆದ್ಯತೆ ಹಾಗೂ ನಿತ್ಯ ಫಾಗಿಂಗ್‌ ಸಹ ಮಾಡಿಸಲಾಗುತ್ತಿದೆ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಜಶೇಖರ ರೆಡ್ಡಿ ಮಾತನಾಡಿ, ಮೃತಪಟ್ಟ ಐದು ವರ್ಷದ ಮಗು ದಿವ್ಯಾಳಿಗೆ ಶಂಕಿತ ಡೆಂಗಿ ಜ್ವರ ಇದ್ದರೂ ಕಾರಣ ಶಂಕಿತ ಡೆಂಗಿ ಜ್ವರ ಅಲ್ಲ, ಉಸಿರಾಟದ ತೊಂದರೆ (ಆ್ಯಸ್ಪರೇಶನ್‌) ಕಾರಣ. ನಾಲ್ಕೈದು ದಿನದಿಂದ ಜ್ವರದಿಂದ ಬಳಲುತ್ತಿದ್ದ ಸೋಮವಾರ ಹೊಸಪೇಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುವಿನ ಬಿಳಿರಕ್ತಕಣಗಳ ಸಂಖ್ಯೆ 40 ಸಾವಿರ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಮಂಗಳವಾರ ಬೆಳಿಗ್ಗೆ ಮಗುವಿಗೆ ಎರಡು ಬಾರಿ ವಾಂತಿಯಾಗಿದ್ದು, ಉಸಿರಾಟದ ತೊಂದರೆಯಾಗಿದ್ದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಕರೆದೊಯ್ಯಲು ತಿಳಿಸಿದ್ದಾರೆ. ಮಗುವಿನ ಹೊಟ್ಟೆಯಲ್ಲಿದ್ದ ಆಹಾರ ಅಥವಾ ನೀರು ಶ್ವಾಸನಾಳಕ್ಕೆ ಅಡ್ಡ ಬಂದಿದ್ದರಿಂದ ಉಸಿರಾಟಕ್ಕೆ ತೊಂದರೆಯಾಗಿದ್ದು, ಪ್ರಯಾಣದ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.