ADVERTISEMENT

ತ್ಯಾಜ್ಯಮಯ ಈ ಬಸ್‌ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 16 ಮೇ 2017, 7:13 IST
Last Updated 16 ಮೇ 2017, 7:13 IST

ಕೊಟ್ಟೂರು:  ಮಳೆಗಾಲ ಬಂತೆಂದರೆ ಸಾಕು ಪಟ್ಟಣದ ಬಸ್ ನಿಲ್ದಾಣ, ತೇರುಬಯಲು, ಬಳ್ಳಾರಿ ಕ್ಯಾಂಪ್ ಹಾಗು ಮೂಲೇರ ಓಣಿಯ ಕೆಳಬಾಗದ ಜನರು ಚಲಿಕೆ, ಪುಟ್ಟಿ, ಪೊರಕೆ ಸಿದ್ಧ ಮಾಡಿಕೊಂಡು ಹರಡಿರುವ ಕಲುಷಿತ ನೀರು ಹಾಗೂ ತ್ಯಾಜ್ಯ ವಸ್ತುಗಳನ್ನು ಸಾಗಿಸುತ್ತಾ ಸ್ಥಳೀಯ ಆಡಳಿತಕ್ಕೆ ಹಿಡಿ ಶಾಪ ಹಾಕುವುದು ಇಂದಿಗೂ ನಿಂತಿಲ್ಲ.

ಭಾನುವಾರ ರಾತ್ರಿ ಸುರಿದ ಮಳೆಯಿಂದ ಬಸ್ ನಿಲ್ದಾಣದ ಒಳ ಆವರಣಕ್ಕೆ ನುಗ್ಗಿದ ತ್ಯಾಜ್ಯದಿಂದ ಬಸ್‌ಗಳು ಒಳಹೋಗಲು ಸಾಧ್ಯವಾಗದ ಕಾರಣ ಪ್ರಯಾಣಿಕರು ಬಸ್ ಏರಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಈ ಸಮಸ್ಯೆಯನ್ನು ಇಲ್ಲಿನ ನಿವಾಸಿಗಳು ಹಾಗು ಬಸ್ ನಿಲ್ದಾಣಾಧಿಕಾರಿಗಳು ಸುಮಾರು ಹತ್ತಾರು ವರ್ಷಗಳಿಂದ ಎದುರಿಸುತ್ತಲೇ ಬಂದಿದ್ದರೂ ಇದುವರೆಗೂ ಸಮಸ್ಯೆ ಪರಿಹರಿಸುವಲ್ಲಿ ಯಾವೊಬ್ಬ ಅಧಿಕಾರಿಗಳು, ಜನ ಪ್ರತಿನಿಧಿಗಳು ಮುಂದಾಗದೇ ಇರುವುದು ಈ ಭಾಗದ ನಾಗರೀಕರ ದೌರ್ಭಾಗ್ಯವಾಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸಾಕಷ್ಟು ಬಾರಿ ಸ್ಥಳಿಯ ಆಡಳಿತಕ್ಕೆ ಮನವಿಯನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ADVERTISEMENT

ಅರಬಾವಿ-ಚಳ್ಳಕೆರೆ ಹೆದ್ದಾರಿ ಪಟ್ಟಣದ ಮಧ್ಯ ಹಾದು ಹೋದ ನಂತರ ರಸ್ತೆಯ ಮೇಲ್ಮಟ್ಟ ಎತ್ತರಿಸಿದ ಕಾರಣ ಸ್ವಲ್ಪ ಮಳೆಯಾದರೆ ಸಾಕು ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗುತ್ತದೆ. ಚರಂಡಿಗಳು ನೀರಿನಿಂದ ತುಂಬಿದಾಗ ರಸ್ತೆ ಮತ್ತು ಚರಂಡಿ ವ್ಯತ್ಯಾಸ ಗೊತ್ತಾಗದೆ.

ಸಾಕಷ್ಟು ಜನ ಚರಂಡಿಗೆ ಬಿದ್ದು ಗಾಯಗೊಂಡ ಉದಾಹರಣೆಗಳು ಇವೆ. ಸಂಗ್ರಹವಾದ ನೀರನ್ನು ಸಾಗಿಸಿದ ಮೇಲೆ ಹರಡಿರುವ ತ್ಯಾಜ್ಯ ಹಾಗು ದುರ್ನಾತದಿಂದ ಪ್ರಯಾಣಿಕರು ತೀವ್ರ ಮುಜುಗರಕ್ಕೀಡಾಗಬೇಕಾಗುತ್ತದೆ. ಮಳೆಯಾದರೇ ಸಾಕು ಕೆರೆ ತುಂಬದಿದ್ದರೂ ಈ ಬಸ್‌ ನಿಲ್ದಾಣವಂತು ಖಂಡಿತ ತುಂಬುತ್ತದೆ’ ಎಂದು ಎಚ್.ಎಂ.ರವಿಕೀರ್ತಿ ಹೇಳುತ್ತಾರೆ

‘ಪಟ್ಟಣ ಹಾಗೂ ಬಸ್‌ ನಿಲ್ದಾಣ ಸೇರಿದಂತೆ ಒಳ ಚರಂಡಿ ವ್ಯವಸ್ಧೆ ಕಲ್ಪಿಸದೇ ಇರುವುದರಿಂದ ಮಳೆಗಾಲದಲ್ಲಿ ಪಟ್ಟಣದ ಬಹುತೇಕ ಪ್ರದೇಶಗಳು ತ್ಯಾಜ್ಯಮಯವಾಗುವುದು ಸಾಮಾನ್ಯವಾಗಿದೆ. ಹಾಗಾಗಿ ಸ್ಧಳೀಯ ಆಡಳಿತ ಒಳ ಚರಂಡಿ ವ್ಯವಸ್ಧೆ ಕಲ್ಪಿಸಲು ಮುಂದಾಗಬೇಕು’ ಎಂದು ಸಕ್ರಿಗೌಡರ ವೀರೇಂದ್ರ ಪಾಟೀಲ್‌ ಒತ್ತಾಯಿಸುತ್ತಾರೆ.

‘ನಿಲ್ದಾಣದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಶಾಸಕರು ಹಾಗೂ ಸ್ಧಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ’ ಎಂದು ಕೂಡ್ಲಿಗಿ ಡಿಪೋ ವ್ಯವಸ್ಧಾಪಕ ಪ್ರದೀಪ್‌ ಕುಮಾರ್‌ ತಿಳಿಸಿದ್ದಾರೆ.

*

ಬಸ್‌ ನಿಲ್ದಾಣದಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಶಾಸಕರು ಹಾಗೂ ಸ್ಧಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ
ಪ್ರದೀಪ್‌ ಕುಮಾರ್‌
ಕೂಡ್ಲಿಗಿ ಡಿಪೋ ವ್ಯವಸ್ಧಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.