ADVERTISEMENT

ದಶಕ ಕಳೆದರೂ ಬಾರದ ನೀರು!

ಕುಂಟುತ್ತಿದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಈಗಾಗಲೇ ₹ 1.53 ಕೋಟಿ ಖರ್ಚು

ಕೆ.ನರಸಿಂಹ ಮೂರ್ತಿ
Published 15 ಏಪ್ರಿಲ್ 2018, 5:57 IST
Last Updated 15 ಏಪ್ರಿಲ್ 2018, 5:57 IST
ದಶಕ ಕಳೆದರೂ ಬಾರದ ನೀರು!
ದಶಕ ಕಳೆದರೂ ಬಾರದ ನೀರು!   

ಬಳ್ಳಾರಿ: ತಾಲ್ಲೂಕಿನ ನೆಲ್ಲೂಡಿ ಸೇರಿದಂತೆ ಆರು ಗ್ರಾಮಗಳಲ್ಲಿ ಹತ್ತು ವರ್ಷದ ಹಿಂದೆ ಆರಂಭವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.

ಈ ಅವಧಿಯಲ್ಲಿ ಈ ಗ್ರಾಮಗಳ ಜನ ಎರಡು ವಿಧಾನಸಭೆ ಚುನಾವಣೆಗಳನ್ನು ಕಂಡಿದ್ದಾರೆ. ಮೂರನೇ ಚುನಾವಣೆ ಹೊಸ್ತಿಲಲ್ಲಿದೆ. ಆದರೆ ಯೋಜನೆ ಮಾತ್ರ ನನೆಗುದಿಗೆ ಬಿದ್ದಿದೆ. ₹2.26 ಕೋಟಿ ವೆಚ್ಚದ ಈ ಯೋಜನೆಗೆ ಈಗಾಗಲೇ ₹ 1.53 ಕೋಟಿ ಖರ್ಚು ಮಾಡಲಾಗಿದೆ. ಆದರೂ ಯೋಜನೆಯ ನೀರು ಬಂದಿಲ್ಲ.

ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿರುವ 30 ಯೋಜನೆಗಳ ಪೈಕಿ ಬಾಕಿ ಉಳಿದಿರುವ ಏಕೈಕ ಯೋಜನೆ ಇದು.ತಾಲ್ಲೂಕಿನ ಕುಡಿತಿನಿಗೆ ನೀರು ಪೂರೈಸುವ ಯೋಜನೆ 2009ರಲ್ಲಿ ಆರಂಭವಾಗಿ ಪೂರ್ಣಗೊಂಡಿದ್ದರೂ ನೀರು ಪೂರೈಕೆ ಆರಂಭವಾಗಿಲ್ಲ. ಹಡಗಲಿ ತಾಲ್ಲೂಕಿನ 31 ಹಳ್ಳಿಗಳಿಗೆ ನೀರು ಪೂರೈಸುವ ನಾಲ್ಕು ಯೋಜನೆಗಳು ಹಿಂದಿನ ವರ್ಷ ಜೂನ್‌ನಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ಇನ್ನೂ ಮುಂದುವರಿದಿದೆ.

ADVERTISEMENT

3 ವರ್ಷದಿಂದ ಬಾಕಿ: ಕೂಡ್ಲಿಗಿ ತಾಲ್ಲೂಕಿನ 72 ಗ್ರಾಮಗಳಿಗೆ ನೀರು ಪೂರೈಸುವ ₹130 ಕೋಟಿ ವೆಚ್ಚದ ಯೋಜನೆಯು ಮೂರು ವರ್ಷದ ಹಿಂದೆಯೇ ಜಾರಿಯಾಗಿದೆ. ಮೊದಲ ಹಂತದಲ್ಲಿ ₹ 72 ಕೋಟಿ ಬಿಡುಗಡೆಯಾಗಿದೆ, 200 ಕಿ.ಮೀ ಉದ್ದ ಪೈಪ್‌ಲೈನ್‌ ಅಳವಡಿಸಬೇಕಾಗಿದ್ದು, ಇದುವರೆಗೆ ಕೇವಲ 50 ಕಿ.ಮೀ ಮಾತ್ರ ಅಳವಡಿಸಲಾಗಿದೆ.

‘ತಾಲ್ಲೂಕಿನ ಶಿವಪುರ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಅಳವಡಿಕೆ ಕಾರ್ಯ ಸ್ಥಗಿತಗೊಂಡಿದೆ. ಟ್ಯಾಂಕ್‌ಗಳ ನಿರ್ಮಾಣ ಕಾರ್ಯ ಮುಗಿಯುವ ಹಂತದಲ್ಲಿದೆ. 24 ಲಕ್ಷ ಲೀಟರ್‌ಸಂಗ್ರಹ ಸಾಮರ್ಥ್ಯದ ತೊಟ್ಟಿಗಳ ನಿರ್ಮಾಣ ಕಾರ್ಯವೂ ಚಾಲನೆಯಲ್ಲಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಾರ್ಗದಪ್ಪ ತಿಳಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ 28 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ 2017ರಲ್ಲಿ ಪೂರ್ಣಗೊಳ್ಳಬೇಕಾಗಿದ್ದು, ಕಾಮಗಾರಿಗಳು ಅಪೂರ್ಣಗೊಂಡಿವೆ. ಹೊಸಪೇಟೆ ತಾಲ್ಲೂಕಿನ 15 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯೂ ಪೂರ್ಣಗೊಂಡರೂ ನೀರು ಪೂರೈಕೆ ಆರಂಭವಾಗಿಲ್ಲ. ಎಂಟು ಹಳ್ಳಿಗಳನ್ನು ಒಳಗೊಂಡ ಎರಡು ಯೋಜನೆಗಳು ಬಾಕಿ ಉಳಿದಿವೆ.

ಕೆರೆ, ಜಲಾಶಯದ ಹಿನ್ನೀರು ಮೂಲ: ಬಳ್ಳಾರಿ: ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ತುಂಗಭದ್ರಾ ಜಲಾಶಯದ ಹಿನ್ನೀರು ಮತ್ತು ಕೆರೆಗಳನ್ನು ಅವಲಂಬಿಸಿವೆ. ಪೂರ್ಣಗೊಂಡಿರುವ ಯೋಜನೆಗಳು ಜಲಾಶಯದಲ್ಲಿ ನೀರಿದ್ದರೆ ಮಾತ್ರ ಜನರಿಗೆ ಪೂರೈಸುತ್ತವೆ. ಕೆರೆಗಳು ಒಣಗಿದರೆ ಆ ವ್ಯಾಪ್ತಿಯ ಹಳ್ಳಿಗಳಿಗೂ ನೀರು ಪೂರೈಕೆ ಬಂದ್‌ ಆಗುತ್ತದೆ. ಹೀಗಾಗಿ ವರ್ಷದ 9 ತಿಂಗಳು ಮಾತ್ರ ನೀರು ಪೂರೈಕೆ ಖಚಿತ. ಉಳಿದ ತಿಂಗಳಲ್ಲಿ ಜನರ ಪರದಾಟ ತಪ್ಪಿದ್ದಲ್ಲ.

2007–08ರಿಂದ ಆರಂಭವಾದ ಯೋಜನೆಗಳಿಗೆ ಮೊದಲು ವಿಶ್ವಬ್ಯಾಂಕ್‌ ನೆರವು ದೊರಕಿತ್ತು, ನಂತರ ಕೇಂದ್ರದ ಅನುದಾನದ ಜೊತೆಗೆ ರಾಜ್ಯ ಸರ್ಕಾರವೂ

ದನಿ ಎತ್ತದ ಶಾಸಕರು: ಬಳ್ಳಾರಿ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕುರಿತು ಜಿಲ್ಲೆಯ ಬಹುತೇಕ ಶಾಸಕರು ದನಿ ಎತ್ತಿದ ನಿದರ್ಶನಗಳು ಕಡಿಮೆ. ಜಿಲ್ಲಾ ಪಂಚಾಯ್ತಿ ಸಭೆಗಳಲ್ಲಿ ಸದಸ್ಯರು ಯೋಜನೆಗಳ ಜಾರಿ ವಿಳಂಬವಾಗಿರುವ ಬಗ್ಗೆ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಅವರಿಗೆ ಬೆಂಬಲ ದೊರಕಿದ್ದೂ ಕಡಿಮೆ.

2019ರ ಫೆಬ್ರುವರಿ ಗಡುವು: ಸಿಇಒ

ಬಳ್ಳಾರಿ: ‘ಬಾಕಿ ಇರುವ ಎಲ್ಲ ಯೋಜನೆಗಳನ್ನು ಫೆಬ್ರುವರಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರಿಗೆ ಗಡುವು ನೀಡಲಾಗಿದೆ. ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಕೊಳವೆಬಾವಿ ನೀರೇ ಪರ್ಯಾಯ

ಬಳ್ಳಾರಿ: ‘ಗ್ರಾಮದಲ್ಲಿ ಎರಡು ಕೊಳವೆಬಾವಿಗಳಿಂದ ದಿನವೂ ನೀರು ಪೂರೈಕೆಯಾಗುತ್ತಿದೆ. 3 ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ
ಸ್ಥಾಪಿಸಲಾಗಿದೆ. ನಮಗೆ ನೀರಿನ ಕೊರತೆ ಇಲ್ಲ. ಬಹುಗ್ರಾಮ ಯೋಜನೆ ಬಗ್ಗೆ ಗೊತ್ತಿಲ್ಲ’ ಎಂದು ತಾಲ್ಲೂಕಿನ ನೆಲ್ಲೂಡಿ ಗ್ರಾಮದ ಬಿ.ಉಮೇಶ್‌ ತಿಳಿಸಿದರು. ಕುಡಿತಿನಿಯಲ್ಲೂ ಕುಡಿಯುವ ನೀರಿನ ಕೆರೆಯ ನೀರನ್ನೇ ಅವಲಂಬಿಸಲಾಗಿದೆ.

ನೀರಿಗೆ ಪರದಾಡುತ್ತಿದ್ದಾರೆ...

ತಾಲ್ಲೂಕಿನ ಜನರಿಗೆ ಶುದ್ಧ ನೀರು ಕೊಡಬೇಕು ಎಂಬ ಆಶಯದಿಂದ ಆರಂಭವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಳೀಯ ಶಾಸಕರ ಇಚ್ಚಾಶಕ್ತಿ ಕೊರತೆಯಿಂದ ಕುಂಟುತ್ತ ಸಾಗಿದೆ. ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ – ಜಿ. ಕಾರಪ್ಪ, ಅಧ್ಯಕ್ಷ. ಜೆಡಿಎಸ್ ತಾಲ್ಲೂಕು ಘಟಕ. ಕೂಡ್ಲಿಗಿ

ಆರಂಭವಾಗಿದ್ದೇ ಸಾಧನೆ!
ಬಳ್ಳಾರಿ: ದಶಕದಿಂದ ಕುಡಿಯುವ ನೀರಿನ ಯೋಜನೆಗಳು ಕುಂಟುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ, ‘ನಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆಗಳನ್ನು ಆರಂಭಿಸಿದ್ದೇ ಸಾಧನೆ. ಆದರೆ ಅವುಗಳನ್ನು ಮುಂದುವರಿಸುವ ಕಾರ್ಯ ಹಿಂದಿನ ಐದು ವರ್ಷದಲ್ಲಿ ಸಮರ್ಪಕವಾಗಿ ನಡೆಯಲೇ ಇಲ್ಲ’ ಎಂದು ದೂರಿದರು.

**

ಒಂದು ತಿಂಗಳಿಂದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲು ಆಗಿಲ್ಲ. ಹೀಗಾಗಿ ಕುಡಿಯುವ ನೀರಿನ ಯೋಜನೆ ಕುರಿತು ಸದ್ಯಕ್ಕೆ ಮಾಹಿತಿ ಇಲ್ಲ – 
ಪಿ.ಟಿ.ಪರಮೇಶ್ವರ ನಾಯ್ಕ, ಹಡಗಲಿ ಶಾಸಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.