ADVERTISEMENT

ಪರ್ಯಾಯ ಬೆಳೆಯತ್ತ ರೈತರ ಚಿತ್ತ

ಕೆ.ನರಸಿಂಹ ಮೂರ್ತಿ
Published 23 ಜುಲೈ 2017, 9:35 IST
Last Updated 23 ಜುಲೈ 2017, 9:35 IST
ಹಗರಿಬೊಮ್ಮನಹಳ್ಳಿಯಲ್ಲಿ ಬಿತ್ತನೆ ಬೀಜಗಳೊಂದಿಗೆ ಜಮೀನಿನ ಕಡೆ ಚಕ್ಕಡಿಯಲ್ಲಿ ಹೊರಟ ರೈತ ಕುಟುಂಬ
ಹಗರಿಬೊಮ್ಮನಹಳ್ಳಿಯಲ್ಲಿ ಬಿತ್ತನೆ ಬೀಜಗಳೊಂದಿಗೆ ಜಮೀನಿನ ಕಡೆ ಚಕ್ಕಡಿಯಲ್ಲಿ ಹೊರಟ ರೈತ ಕುಟುಂಬ   

ಬಳ್ಳಾರಿ: ತುಂಗಭದ್ರಾ ಜಲಾಶಯದಲ್ಲಿ 22 ಟಿಎಂಸಿ ಅಡಿಗಿಂತಲೂ ಹೆಚ್ಚು ನೀರು ಶೇಖರವಾಗಿದ್ದರೂ, ಮೊದಲ ಅವಧಿಯ ಬೆಳೆಗಳಿಗೆ ನೀರು ದೊರಕುವ ಸಾಧ್ಯತೆ ಕಡಿಮೆಯಾದ ಮೇರೆಗೆ ಜಿಲ್ಲೆಯ ರೈತರು, ಪ್ರಮುಖವಾಗಿ ಭತ್ತ ಬೆಳೆಯುವ ರೈತರು ಪರ್ಯಾಯ ಬೆಳೆಗಳನ್ನು ಬೆಳೆಯಲು ನಿರ್ಧರಿಸಿದ್ದಾರೆ.

ಈಗಾಗಲೇ ತಡವಾಗಿರುವುದ ರಿಂದ, ನೀರು ದೊರೆತರೂ, ದೀರ್ಘಾ ವಧಿ ಭತ್ತದ ತಳಿಯಾದ ಸೋನಾ ಮಸೂರಿಯನ್ನು ಕೈಬಿಟ್ಟು, ಅಲ್ಪಾವಧಿಯ ಕಾವೇರಿ ಸೋನಾ, ನೆಲ್ಲೂರು ಸೋನಾ, ಆರ್‌.ಎನ್‌.ಆರ್‌, ಗಂಗಾವತಿ ಸೋನಾ ಮತ್ತು ಜಿಎನ್‌ವಿ 10–30 ತಳಿಗಳನ್ನು ಬಿತ್ತನೆ ಮಾಡಲೂ ಕೆಲವರು ಚಿಂತಿಸುತ್ತಿದ್ದಾರೆ. ಸೋನಾ ಮಸೂರಿ ಹೆಚ್ಚು ಬೆಳೆಯುತ್ತಿದ್ದ ಸಿರುಗುಪ್ಪ ತಾಲ್ಲೂಕಿನ ಹಲವು ರೈತರು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ.

ಸಜ್ಜೆ, ರಾಗಿ, ಸೂರ್ಯಕಾಂತಿ: ಇತ್ತೀಚೆಗೆ ಮೂರ್ನಾಲ್ಕು ದಿನ ಮಳೆ ಸುರಿದ ಪರಿ ಣಾಮ ಜಿಲ್ಲೆಯ ಬಹುತೇಕ ತಾಲ್ಲೂಕು ಗಳಲ್ಲಿ ರೈತರು ಬಿತ್ತನೆ ಚಟುವಟಿಕೆಯನ್ನು ನಡೆಸಿದ್ದರು. ಆದರೆ ಮಳೆ ನಿಂತ ಪರಿ ಣಾಮ ಮುಂದೇನು ಎಂಬ ಆತಂಕ ಅವ ರಲ್ಲಿ ಮನೆ ಮಾಡಿದೆ.

ADVERTISEMENT

ಇಂಥ ಸನ್ನಿವೇಶ ದಲ್ಲಿ ಬರಗಾಲದ ಹೊಡೆತವನ್ನು ತಾಳಿ ಕೊಳ್ಳುವ, ಕಡಿಮೆ ತೇವಾಂಶದಲ್ಲೂ ಬದುಕಿ ಉಳಿಯಬಲ್ಲ ರಾಗಿ, ಸಜ್ಜೆ, ನವಣೆ, ಸೂರ್ಯಕಾಂತಿಯನ್ನು ಬೆಳೆಯು ವುದು ಕ್ಷೇಮಕರ. ಈ ಬೆಳೆಗಳ ನಡುವೆ ತೊಗರಿ, ಹುರುಳಿಯನ್ನೂ ಬೆಳೆಯಲು ರೈತರಿಗೆ ಸಲಹೆ ನೀಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌ ‘ಪ್ರಜಾವಾಣಿ’ಗೆ ಶನಿವಾರ ತಿಳಿಸಿದರು.

ಮೇವು ದೊರಕುವುದಿಲ್ಲ: ಕಿರುಧಾನ್ಯಗಳನ್ನು ಬೆಳೆದರೆ ತಮ್ಮ ಜಾನುವಾರು ಗಳಿಗೆ ಮೇವು ದೊರಕುವುದಿಲ್ಲ ಎಂಬ ಆತಂಕವನ್ನೂ ರೈತರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೆಕ್ಕೆ ಜೋಳವನ್ನು ಬೆಳೆಯುವ ಆಸಕ್ತಿ ತೋರಿದ್ದಾರೆ. ಪೂರ್ಣ ಪ್ರಮಾಣ ದಲ್ಲಿ ಮೆಕ್ಕೆ ಜೋಳವನ್ನು ಬಿತ್ತನೆ ಮಾಡು ವುದರಿಂದಲೂ ನಷ್ಟವಾಗುವ ಸಾಧ್ಯತೆ ಇರುವುದರಿಂದ, ಅಲ್ಪಪ್ರಮಾಣದಲ್ಲಿ ಮಾತ್ರ ಬೆಳೆಯಲು ತಿಳಿಸಲಾಗಿದೆ ಎಂದರು.

ಭತ್ತ ಬಿತ್ತದಿರಲು ರೈತರಲ್ಲಿ ಮನವಿ
ಬಳ್ಳಾರಿ: ತುಂಗಭದ್ರಾ ಜಲಾಶಯ ದಲ್ಲಿ ನೀರು ಕಡಿಮೆ ಇರುವುದರಿಂದ ರೈತರು ಭತ್ತ ಬಿತ್ತನೆ ಮಾಡಬಾರದು ಎಂದು ರೈತ ಮುಖಂಡ ಜಿ.ಪುರುಷೋತ್ತಮಗೌಡ ಮನವಿ ಮಾಡಿದರು. ಮೊದಲ ಅವಧಿಯ ಬೆಳೆಗೆ ನೀರು ದೊರಕಲು ಜಲಾಶಯದಲ್ಲಿ ಕನಿಷ್ಠ ಪಕ್ಷ 50 ಟಿಎಂಸಿ ನೀರು ಸಂಗ್ರಹಗೊಳ್ಳಬೇಕು.

ಆದರೆ ಈಗ ಆ ಪರಿಸ್ಥಿತಿ ಇಲ್ಲ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿಷಾದಿಸಿದರು. ಜಲಾಶಯದಲ್ಲಿ ಅಗತ್ಯ ಪ್ರಮಾಣದ ನೀರು ಸಂಗ್ರಹವಾಗದಿದ್ದರೆ ಸರ್ಕಾರವು ತುಂಗಾ ಜಲಾಶಯದಿಂದ 10 ಟಿಎಂಸಿ ನೀರು ತರಲು ಪ್ರಯತ್ನಿಸ ಬೇಕು ಎಂದರು.

ಕೂರಿಗೆ ಮೂಲಕ ರೈತರು ಭತ್ತವನ್ನು ಬಿತ್ತನೆ ಮಾಡಿದರೆ ಸರ್ಕಾರದಿಂದ ಪ್ರತಿ ಎಕರೆಗೆ 1600 ಪ್ರೋತ್ಸಾಹ ಧನ ದೊರಕುತ್ತದೆ. ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ. ಹೀಗಾಗಿ ನಾಟಿ ಪದ್ಧತಿಯನ್ನು ಕೈಬಿಡಬೇಕು ಎಂದರು. ರೈತರಾದ ಶರಣಗೌಡ, ವೀರೇಶ, ಸದಾಶಿವರೆಡ್ಡಿ, ಡಿ.ಶಿವಯ್ಯ, ಶ್ರೀಧರ್, ಮೂರ್ತಿ, ರಾಮಾವತಾರ ಇದ್ದರು.

ಅಲ್ಪಾವಧಿ ಬೆಳೆಗೆ ಹೆಚ್ಚು ನೀರು ಕಂಟಕ!
ಸಿರುಗುಪ್ಪ ತಾಲ್ಲೂಕಿನಲ್ಲಿ ಭತ್ತ ಬೆಳೆಯುತ್ತಿದ್ದ ಜಮೀನುಗಳಲ್ಲಿ ಅಲ್ಪಾವಧಿ ಪರ್ಯಾಯ ಬೆಳೆಗಳನ್ನು ಬೆಳೆಯುವುದು ಕೂಡ ಕಷ್ಟಕರ ಮತ್ತು ನಷ್ಟದಾಯಕವಾಗಿದೆ. ‘ನೀರಿನ ಕೊರತೆಯಿಂದಾಗಿ ಎರಡು ವರ್ಷದ ಹಿಂದೆ ಎಳ್ಳು, ಸೂರ್ಯಕಾಂತಿ ಮತ್ತು ಬಿಳಿಜೋಳವನ್ನು ಬಿತ್ತನೆ ಮಾಡಿದ್ದೆ. ಅದೇ ಸಮಯದಲ್ಲಿ ಪಕ್ಕದ ಜಮೀನಿನ ರೈತರು ಕಾಲುವೆ ನೀರು ಬಳಸಿ ಭತ್ತವನ್ನು ಬೆಳೆದಿದ್ದರು.

ಅದಕ್ಕಾಗಿ ಜಮೀನಿನಲ್ಲಿ ನೀರು ನಿಲ್ಲಿಸಿದ್ದರು. ಪರಿಣಾಮವಾಗಿ ನನ್ನ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳು ಕೈಗೆ ಹತ್ತಲಿಲ್ಲ. ಬಿತ್ತನೆಗೆ ಮಾಡಿದ್ದ ಖರ್ಚಿನ ಹಣ ಕೂಡ ದೊರಕಲಿಲ್ಲ’ ಎಂದು ಸಿರುಗುಪ್ಪ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ರೈತ ರಾಜೇಗೌಡ ತಿಳಿಸಿದರು.

‘ಹಿಂದಿನ ವರ್ಷ  ಸಾಸಿವೆಯನ್ನು ಬಿತ್ತನೆ ಮಾಡಿದ್ದೆ. ಕೈಗೆಟುಕಿದ್ದ ಅಲ್ಪ ಪ್ರಮಾಣದ ಬೆಳೆಗೆ ನಿರೀಕ್ಷಿತ ದರ ದೊರಕದೆ ನಷ್ಟ ಉಂಟಾಯಿತು. ಹೀಗಾಗಿ ಭತ್ತ ಬೆಳೆಯುವುದೋ, ಪರ್ಯಾಯ ಬೆಳೆ ಬೆಳೆಯುವುದೋ ಎಂಬ ಗೊಂದಲ ಇನ್ನೂ ಮುಂದುವರಿದಿದೆ’ ಎಂದರು,

* * 

ಸಿರುಗುಪ್ಪ ತಾಲ್ಲೂಕಿನ ಮುದ್ದಟನೂರು ರೈತರು ಪರ್ಯಾಯ ಬೆಳೆಗಳಾದ ಸಜ್ಜೆ, ರಾಗಿ, ನವಣೆ ಬೆಳೆಯಲು ಮುಂದಾಗಿದ್ದಾರೆ
ಶರಣಪ್ಪ ಮುದುಗಲ್
ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.