ADVERTISEMENT

ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 7:39 IST
Last Updated 22 ಮಾರ್ಚ್ 2017, 7:39 IST

ಬಳ್ಳಾರಿ: ಪರಿಶಿಷ್ಟ ಜಾತಿ ಸಮುದಾಯದ ಸರ್ಕಾರಿ ನೌಕರರ ಮುಂಬಡ್ತಿ ಮೀಸ­ಲಾತಿ­ಯನ್ನು ರದ್ದುಪಡಿಸಿ ಸುಪ್ರೀಂ­ಕೋರ್ಟ್‌ ಹೊರಡಿಸಿರುವ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರವು ಮರು ಪರಿಶೀಲನೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ಮಂಗಳ­ವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಸುಪ್ರೀಂಕೋರ್ಟ್ ನೀಡಿರುವ ಆದೇಶವು ಪರಿಶಿಷ್ಟ ಸಮುದಾಯದ ಸರ್ಕಾರಿ ನೌಕರರಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ, ಈ ಆದೇಶವನ್ನು ಮರು ಪರಿಶೀಲಿಸಬೇಕೆಂದು ಕೋರಿ ರಾಜ್ಯ ಸರ್ಕಾರವು ಕೂಡಲೇ ಅರ್ಜಿ­ಯನ್ನು ಸಲ್ಲಿಸಬೇಕು.

ಆದೇಶದಲ್ಲಿನ ನ್ಯೂನತೆ ಸರಿದೂಗಿಸಲು ರಾಜ್ಯ ಸರ್ಕಾರವು ಮುಂಬಡ್ತಿಯಲ್ಲಿ ಮೀಸ­ಲಾತಿ ಕಲ್ಪಿಸುವ ಹೊಸ ನಿಯಮಾವಳಿಯ ಮಸೂದೆಗೆ ತಿದ್ದುಪಡಿ ತರಬೇಕು. ತಿದ್ದುಪಡಿ ಮಸೂದೆಗೆ ಸಚಿವ ಸಂಪುಟದ ಒಪ್ಪಿಗೆಯೂ ಪಡೆಯಬೇಕು ಎಂದು ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಕಪ್ಪಗಲ್ಲು ಓಂಕಾರಪ್ಪ ಕೋರಿದರು.

ಮರು ಪರಿಶೀಲನೆ ಅರ್ಜಿ ಸಲ್ಲಿಸುವಾಗ ಪೂರಕ ದಾಖಲೆಯನ್ನು ಸಲ್ಲಿಸಬೇಕು. ವಾದ ಮಂಡಿಸಲು ಸಮರ್ಥವಾದ ವಕೀಲರನ್ನು ನಿಯೋ­ಜನೆ ಮಾಡಬೇಕು ಆಗ್ರಹಿಸಿದರು.

ಲೋಕಸಭೆಯಲ್ಲಿ ನನೆಗುದಿಗೆ ಬಿದ್ದಿರುವ ಬಡ್ತಿ ಮೀಸಲಾತಿ ಮಸೂದೆ­ಯನ್ನು ಜಾರಿಗೆ ತರಲು ಅನುಚ್ಛೇದ 117ನೇ ತಿದ್ದುಪಡಿ ವಿಧೇಯಕವನ್ನು ಈ ಬಾರಿಯ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಬೇಕು.

ನ್ಯಾಯಾಲಯಗಳ ದೌರ್ಜನ್ಯದಿಂದ ಮೀಸಲಾತಿ ಸಂರಕ್ಷಣೆಗೆ ಮೀಸಲಾತಿ ವಿಧೇಯಕಗಳನ್ನು ಸಂವಿಧಾನದ 9ನೇ ಅನುಬಂಧದಲ್ಲಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.

ಸಮಿತಿಯ ಪದಾಧಿಕಾರಿಗಳಾದ ಗ್ಯಾನಪ್ಪ ಬಡಿಗೇರ, ಡಿ.ಎಚ್‌.­ಹುಸೇ­ನಪ್ಪ, ತಿಪ್ಪೇಸ್ವಾಮಿ, ಎಚ್‌.ಎಂ.­ರಾಜೇಶ, ಸಾವಿತ್ರಮ್ಮ, ಮುಖಂಡರಾದ ಡಿ.ಎಚ್‌.­ಹನುಮೇಶಪ್ಪ, ರಮೇಶ, ಶ್ರೀನಿವಾಸ, ಕಪ್ಪಗಲ್ಲು ಹುಲಿಯಪ್ಪ, ದುರ್ಗಮ್ಮ, ಜಿ.ಶಿವಕುಮಾರ, ಬಸವರಾಜ, ವೀರೇಶ, ಲಿಂಗಪ್ಪ, ಶಶಿಕುಮಾರ, ಮಲ್ಲಿಕಾರ್ಜುನ, ಯೋಗರಾಜ, ರವಿಕುಮಾರ, ರಾಜ, ನರೇಂದ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT