ADVERTISEMENT

ಮಾದರಿಯಾದ ಮೂಕ ಯುವಕರು!

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 8:57 IST
Last Updated 23 ಡಿಸೆಂಬರ್ 2017, 8:57 IST
ಕೂಡ್ಲಿಗಿ ತಾಲ್ಲೂಕಿನ ನಿಂಬಳಗೆರೆ ಗ್ರಾಮದ ಮೂಕ ಯುವಕರಾದ ಕಿರಣ್ ಕುಮಾರ್ ಹಾಗೂ ಮಂಜುನಾಥ ರೇಷ್ಮೆ ಸೊಪ್ಪು ಕತ್ತರಿಸುವ ಕಾಯಕದಲ್ಲಿ ತೊಡಗಿದ್ದರು.
ಕೂಡ್ಲಿಗಿ ತಾಲ್ಲೂಕಿನ ನಿಂಬಳಗೆರೆ ಗ್ರಾಮದ ಮೂಕ ಯುವಕರಾದ ಕಿರಣ್ ಕುಮಾರ್ ಹಾಗೂ ಮಂಜುನಾಥ ರೇಷ್ಮೆ ಸೊಪ್ಪು ಕತ್ತರಿಸುವ ಕಾಯಕದಲ್ಲಿ ತೊಡಗಿದ್ದರು.   

ಎ.ಎಂ. ಸೋಮಶೇಖರಯ್ಯ.

ಕೂಡ್ಲಿಗಿ: ಇವರಿಗೆ ಮಾತು ಬರುವುದಿಲ್ಲ. ಆದರೆ ಮಾತು ಬಲ್ಲವರು ಬೆರಗಾಗುವಂತೆ ರೇಷ್ಮೆ ಕೃಷಿಯಲ್ಲಿ ಸೈ ಎನ್ನಿಸಿಕೊಂಡಿದ್ದಾರೆ. ತಾಲ್ಲೂಕಿನ ನಿಂಬಳಗೆರೆ ಗ್ರಾಮದ ಕಿರಣ ಕುಮಾರ ಹಾಗೂ ಮಂಜುನಾಥ ಮೌನದ ಜೊತೆಗೇ ಸಾಧನೆಯ ಹಾದಿಯಲ್ಲಿ ನಡೆದಿದ್ದಾರೆ.

ಅವಿವಾಹಿತರಾಗಿರುವ ಈ ಯವಕರ ತಂದೆ ಬೆನಕಶೆಟ್ಟಿ ನಾಗರಾಜ ತಮ್ಮ 6 ಎಕರೆ ಜಮೀನಿನ ಪೈಕಿ ಎರಡು ಎಕರೆಯಲ್ಲಿ ಕಳೆದ 30 ವರ್ಷಗಳಿಂದಲೂ ರೇಷ್ಮೆ ಬೆಳೆಯುತ್ತಿದ್ದರು. ಮಕ್ಕಳ ಆಸಕ್ತಿಯನ್ನು ಗಮನಿಸಿದ ಅವರು 6 ಎಕರೆಯಲ್ಲೂ ರೇಷ್ಮೆ ಬೆಳೆಯಲು ಮುಂದಾದರು ಎಂಬುದು ವಿಶೇಷ.

ADVERTISEMENT

3 ಎಕರೆಯಲ್ಲಿ ಎಂ–5 ಹಾಗೂ ಉಳಿದ 3 ಎಕರೆಯಲ್ಲಿ ಇ1 ತಳಿಯ ರೇಷ್ಮೆ ಹಾಕಿದ್ದು, ಇತ್ತೀಚೆಗೆ ಒಂದು ಎಕರೆಯಷ್ಟು ರೇಷ್ಮೆಗೆ ಹನಿ ನೀರಾವರಿ ಅಳವಡಿಸಿದ್ದಾರೆ. ಹೊಲದಲ್ಲಿಯೇ 59 ಅಡಿ ಉದ್ದ ಹಾಗೂ 19 ಅಡಿ ಅಗಲದ ಮನೆಯನ್ನು ನಿರ್ಮಿಸಿದ್ದಾರೆ.

ರೇಷ್ಮೆ ಹುಳು ಸಾಕಣೆಗೆ ಅಧುನಿಕ ಅಟ್ಟವನ್ನು ಹಾಕಿಕೊಂಡಿದ್ದಾರೆ. ಅದರಿಂದ ಕೆಲಸವೂ ಕಡಿಮೆಯಾಗಿ ಸೊಪ್ಪು ಹಾಗೂ ಸಮಯದ ಉಳಿತಾಯವಾಗುತ್ತಿದ್ದು, ಪ್ರತಿ ತಿಂಗಳು ಕನಿಷ್ಟ ₨ 2 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಬೈಕ್ ಚಾಲನೆಯಲ್ಲೂ ಸೈ ಎನ್ನಿಸಿಕೊಂಡಿರುವ ಅವರು ದೂರದ ರಾಮನಗರದ ಮಾರು ಕಟ್ಟೆಗೆ ಹೋಗಿ ರೇಷ್ಮೆಗೂಡು ಮಾರಾಟ ಮಾಡಿ ಬರುತ್ತಾರೆ.

ಕಿರಣ್ ಕುಮಾರ್ ಎಸ್‌ಎಸ್‌ಎಲ್‌ಸಿ ಹಾಗೂ ಮಂಜುನಾಥ್ 6ನೇ ತರಗತಿವರೆಗೆ ಓದಿದ್ದು, ಇಬ್ಬರೂ ಬರವಣಿಗೆ ಕಲಿತಿದ್ದಾರೆ. ದಿನ ಪತ್ರಿಕೆಗಳನ್ನು ಓದುವುದು ಮತ್ತು ಟಿವಿ ನೋಡುವ ಮೂಲಕ ದಿನದ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಾರೆ.

* * 

ಮಗಳು ಸೇರಿ ನನ್ನ ಮೂರು ಮಕ್ಕಳಿಗೆ ಮಾತು ಬಾರದು ಎಂದು ಯಾವತ್ತು ಅನಿಸಲೇ ಇಲ್ಲ. ಅವರು ಬೇರೆಯವರಿಗಿಂತ ಉತ್ತಮವಾಗಿ ಕೃಷಿ ಕೆಲಸ ಮಾಡುತ್ತಿರುವುದೇ ಅದಕ್ಕೆ ಕಾರಣ
ಬೆನಕನಶೆಟ್ಟಿ ನಾಗರಾಜ, ರೈತ, ನಿಂಬಳಗೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.