ADVERTISEMENT

ರೈತರಿಗೆ ವರದಾನವಾದ ಕೃಷಿ ಹೊಂಡ

ವಾಗೀಶ ಕುರುಗೋಡು
Published 3 ಸೆಪ್ಟೆಂಬರ್ 2017, 6:29 IST
Last Updated 3 ಸೆಪ್ಟೆಂಬರ್ 2017, 6:29 IST

ಕುರುಗೋಡು: ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ತಮ್ಮ ಜಮೀನುಗಳಲ್ಲಿ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳಲ್ಲಿ ನೀರು ತುಂಬಿದೆ. ನೀರಾವರಿ ಜಮೀನು ಹೊಂದಿರುವ ರೈತರು ಮಾತ್ರ ಉತ್ತಮ ಬೆಳೆ ಬೆಳೆಳಿದ್ದರೆ, ಮಳೆಯಾಶ್ರಿತ ಭೂಮಿ ಹೊಂದಿದ ರೈತರು ಬೆಳೆ ಇಲ್ಲದೇ ಚಿಂತೆಗೀಡಾಗಿದ್ದರು.

ಸಕಾಲಕ್ಕೆ ಮಳೆಯಾದ ಪರಿಣಾಮ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆದ ವಿವಿಧ ಬೆಳೆಗಳಿಗೆ ಜೀವಕಳೆ ಬಂದಿದೆ. ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಿಕೊಂಡ ಕೃಷಿ ಹೊಂಡಗಳು ತುಂಬಿದ್ದು, ರೈತರು ಹರ್ಷಚಿತ್ತರಾಗಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. 63 ಅಡಿ ಉದ್ದ, 63 ಅಡಿ ಅಗಲ ಮತ್ತು 9 ಅಡಿ ಆಳದ ಅಳತೆಯಲ್ಲಿ ತಾಲ್ಲೂಕಿನಾದ್ಯಂತ ಒಟ್ಟು 148 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.

ಕೃಷಿ ಇಲಾಖೆಯಿಂದ ಫಲಾನುಭವಿ ರೈತರ ಪ್ರತಿ ಕೃಷಿ ಹೊಂಡಕ್ಕೆ (ಕೆಂಪು ಮಣ್ಣು)  ₹67 ಸಾವಿರ ಮತ್ತು ಕಪ್ಪು ಮಣ್ಣಿನ ಹೊಂಡಕ್ಕೆ ₹51 ಸಾವಿರ ಸಹಾಯಧನ ನೀಡಲಾಗಿದೆ. ಡೀಸೆಲ್ ಚಾಲಿತ ನೀರು ಎತ್ತುವ ಯಂತ್ರ ₹12 ರಿಂದ ₹16 ಸಾವಿರ, ಸ್ಪಿಂಕ್ಲರ್, ಉಪಕರಣ ₹4100 ರಂತೆ ರಿಯಾಯಿತಿ ದರದಲ್ಲಿ ಖರೀದಿಸಿದ್ದಾರೆ.

ADVERTISEMENT

ಮಳೆ ಕೊರತೆಯಿಂದ ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹವಾಗದೆ ಕಾಲುವೆಗಳಿಗೆ ನೀರು ತಡವಾಗಿ ಹರಿಸಿದ್ದಾರೆ. ಪ್ರಾರಂಭದಲ್ಲಿ ಸುರಿದ ಮುಂಗಾರು ಮಳೆಯನ್ನು ನಂಬಿ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತಿದ್ದ ಬೀಜ ಮೊಳಕೆ ಒಡೆದು ಗಿಡವಾಗುವ ಮೊದಲೇ ಮಳೆ ಮಾಯವಾಗಿತ್ತು. ಇದರಿಂದ ಉತ್ತಮ ಬೆಳೆಯ ನಿರೀಕ್ಷೆ ಹುಸಿಯಾಗಿತ್ತು. ರೈಷಿ ಇಲಾಖೆ ಜಾರಿಗೆ ತಂದಿರುವ ಕೃಷಿ ಹೊಂಡ ಯೋಜನೆ ಅನೇಕ ರೈತರ ಕೈಹಿಡಿದಿದೆ.

* * 

ಮಳೆಯಿಂದ ಕೃಷಿ ಹೊಂಡಗಳು ತುಂಬಿರುವುದರಿಂದ ಕಾಲುವೆ ನೀರು ಕಾಯದೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದೇವೆ. ಬರಗಾಲದಲ್ಲಿ ಕೃಷಿ ಹೊಂಡ ನಮ್ಮ ಪಾಲಿಗೆ ವರವಾಗಿ ಪರಿಣಮಿಸಿದೆ
ಸುಬ್ಬರಾವ್‌,ಫಲಾನುಭವಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.