ADVERTISEMENT

ರೈತ ಸಂಘ, ಗ್ರಾಮಸ್ಥರ ಮುತ್ತಿಗೆ

ಗ್ರಾಮ ಜೀವನಕ್ಕೆ ಎರವಾದ ಸುವಾನ್‌ ಮೆದುಕಬ್ಬಿಣ ಕಾರ್ಖಾನೆ: ಆರೋಪ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:04 IST
Last Updated 9 ಜನವರಿ 2017, 8:04 IST
ಜಾನೆಕುಂಟೆ ತಾಂಡಾ (ಬಳ್ಳಾರಿ ತಾ.): ಗ್ರಾಮ ಜೀವನಕ್ಕೆ ಎರವಾಗಿದೆ ಎಂದು ದೂರಿ ಇಲ್ಲಿನ ಸುವಾನ್ ಮೆದುಕಬ್ಬಿಣ ಕಾರ್ಖಾನೆಯ ಆವರಣದಲ್ಲಿ ಭಾನುವಾರ ರೈತ ಸಂಘ ಮುಖಂಡರ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
 
ಕಪ್ಪು ಹೊಗೆಯಿಂದ ತುಂಬಿದ್ದ ಕಾರ್ಖಾನೆಯ ಒಳಾಂಗಣಕ್ಕೆ ಗ್ರಾಮಸ್ಥರು, ಮುಖಂಡರು ಪ್ರವೇಶಿಸುತ್ತಿದ್ದಂತೆಯೇ ಉತ್ಪಾದಕ ಚಟುವಟಿಕೆಯನ್ನು ಸ್ಥಗಿತ ಗೊಳಿಸಲಾಯಿತು. ಅಲ್ಲಿದ್ದ ಗಣಿಕಲ್ಲಿನ ರಾಶಿ ಹಾಗೂ ಪುಡಿರಾಶಿಯ ಪ್ರದೇಶಕ್ಕೆ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. 
 
ತಾಂಡಾದಿಂದ ಅನತಿ ದೂರದಲ್ಲಿ ಇರುವ ಕಾರ್ಖಾನೆಯಿಂದ ಹೊರಬರುವ ಹೊಗೆ, ದೂಳಿನಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದೆ. ಕಾರ್ಖಾನೆ ಸ್ಥಾಪಿಸುವ ಮುನ್ನ ಕೈಗೊಳ್ಳ ಬೇಕಾದ ನಿಯಮವನ್ನು ಗಾಳಿಗೆ ತೂರ ಲಾಗಿದೆ. ಕಾರ್ಖಾನೆಯಿಂದ ದೂಳು ಹೊರಹೋಗದಂತೆ ತಡೆಯಲು ಬೃಹತ್‌ ಕಾಂಪೌಂಡ್‌ ನಿರ್ಮಿಸಿಲ್ಲ. ಹೀಗಾಗಿ, ಗ್ರಾಮಸ್ಥರ ಆರೋಗ್ಯದ ಮೇಲೂ ವ್ಯತಿ ರಿಕ್ತ ಪರಿಣಾಮ ಬೀರಿದೆ ಎಂದು ಬೆಳ ಗಲ್ ಗ್ರಾ.ಪಂಚಾಯಿತಿ ಗಂಗೂನಾಯ್ಕ ದೂರಿದರು. 
 
ಧೂಳಿನಿಂದಾಗಿ, ಸುತ್ತಲಿನ ಪ್ರದೇ ಶದ ಬೆಳೆ ಸಂಪೂರ್ಣ ನಾಶವಾಗಿದೆ. ಏಳು ವರ್ಷದಿಂದ ಈವರೆಗೆ ಬೆಳೆನಷ್ಟ ಪರಿಹಾರ ನೀಡುವಂತೆ ಕೋರಿದರೂ ಪ್ರಯೋಜನವಾಗಿಲ್ಲ. ಪೊಲೀಸರನ್ನು ಬಳಸಿಕೊಂಡು ರೈತರನ್ನು ಬೆದರಿಸುವ ಹುನ್ನಾರಗಳೂ ನಡೆಯುತ್ತಿವೆ ಎಂದು ಆರೋಪಿಸಿದರು. 
 
ತಾಲ್ಲೂಕಿನ ಬೆಳಗಲ್, ಬೆಳಗಲ್ ತಾಂಡಾ, ಜಾನೆಕುಂಟೆ, ಜಾನೆಕುಂಟೆ ತಾಂಡಾ ಹಾಗೂ ಹರಗಿನಡೋಣಿ ಗ್ರಾಮಗಳ ನಿರುದ್ಯೋಗಿ ಯುವಜನರಿಗೆ ಕೆಲಸ ಸಿಗಬಹುದು ಎಂಬ ಆಸೆಯೂ ಕಮರಿದೆ. ಸ್ಥಳೀಯರನ್ನು ಬಿಟ್ಟು ಅನ್ಯರಾಜ್ಯಗಳ ಸಿಬ್ಬಂದಿಯನ್ನು ನೇಮಿಸ ಲಾಗಿದೆ ಎಂದು ದೂರಿದರು.
 
ಮೆದುಕಬ್ಬಿಣ ಕಾರ್ಖಾನೆಗಳಿಂದ ಬರುವ ಧೂಳಿನಿಂದಾಗುವ ದುಷ್ಪರಿಣಾ ಮಗಳ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು ‘ಫ್ಯಾಕ್ಟರ್ರೀ ಮಾಲೀಕ್ರು, ರಾಜಕೀಯ ಪಕ್ಸದೋರು ಒಂದಾಗಿ ಬಿಟ್ಟಾರ್ರೀ. ನಮ್ ಗೋಳ್ ಕೇಳೋರಿ ಲ್ದಾಂಗ ಅಗೇತ್ರಿ. ಧೂಳ್‌ನಿಂದ ಉಬ್ಸ, ಸುಸ್ತು, ಕೆಮ್ಮು, ದಮ್ಮು, ಕ್ಯಾನ್ಸರ್‌ ಎದು ರಾಗ್ಯವ್ರೀ. ಚಿಕ್‌ ವಯಸಿನ್ಯಾಗ ಮಕ್ಳು ತಲಿ ನೋವು, ಮಂಡಿ ನೋವು ಅನ್ನಾಕ ತ್ತ್ಯಾವ್ರೀ. ಅವ್ರ ಮುಂದಿನ್ ಜೀವನಾ ಹೆಂಗ್ ಅಂತಾ ಚಿಂತೆ ಅತ್ತೈತ್ರೀ’ ಎಂದು ಲಕ್ಷ್ಮಿಬಾಯಿ ಹೇಳಿದರು. 
 
ಒಳಚರಂಡಿ, ಶುದ್ದ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿಕಾರ್ಯ ಈವರೆಗೂ ನಡೆದಿಲ್ಲ. ಈ ಕುರಿತು ಬೆಳ ಗಲ್ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿ ಸಿದರೂ ಪ್ರಯೋಜನವಾಗಿಲ್ಲ ಎಂದು ಸೀತಾ ಬಾಯಿ ದೂರಿದರು.
 
ಪ್ರಯೋಜನವಿಲ್ಲ: ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅರ್ಜಿ ಸಲ್ಲಿಸಿದರೂ ಸುತ್ತಮುತ್ತಲಿನ ಪ್ರದೇಶದ ಯುವಕರಿಗೆ ಕಾರ್ಖಾನೆಗಳಲ್ಲಿ ಕೆಲಸ ದೊರೆತಿಲ್ಲ ಎಂದು ಗ್ರಾಮದ ಯುವಕ ಚಂದ್ರನಾಯ್ಕ ಆರೋಪಿಸಿದರು.
 
ರೈತ ಸಂಘದ ಪದಾಧಿಕಾರಿಗಳಾದ ದರೂರು ಪುರುಷೋತ್ತಮಗೌಡ, ಶಾನ ವಾಸಪುರ ಶರಣನಗೌಡ, ಗಂಗಾ ಧಾರ ವಾಡ್ಕರ್, ಮಲ್ಲಿಕಾರ್ಜುನ ನಾಯ್ಕ ನೇತೃತ್ವ ವಹಿಸಿದ್ದರು.
 
ಗ್ರಾಮಸ್ಥರಾದ ವಾಲಿಬಾಯಿ, ನೀಲಿ ಬಾಯಿ, ಸಂಕ್ರನಾಯ್ಕ, ಪ್ರವೀಣನಾಯ್ಕ, ಸುನಿಲ್‌ ನಾಯ್ಕ, ಚೇತನ ನಾಯ್ಕ, ಆಸಿಕ್ ನಾಯ್ಕ, ಭೀಮಾನಾಯ್ಕ, ಧರ್ಮಾ ನಾಯ್ಕ, ರಾಜಾನಾಯ್ಕ, ಶ್ರೀಕಾಂತ, ಮಲ್ಲಿಕಾರ್ಜುನ ನಾಯ್ಕ, ಪ್ರಕಾಶನಾಯ್ಕ, ಪಾಂಡುನಾಯ್ಕ, ಭೋಜನಾಯ್ಕ, ಎಸ್‌. ರಾಮನಾಯ್ಕ ಇದ್ದರು.  
 
**
‘ದೂಳ್‌ನ್ಯಾಗ  ಜೀವನಾ  ಸಾಗೇತ್ರಿ...’
‘ಮನಿಯಾಗಿನ ಮುಸುರಿ ತಿಕ್ಕಿದ ಪಾತ್ರಿ, ಒಗೆದ ಬಟ್ಟೆ, ಕುಡ್ಯೋ ನೀರಿನೊಳಗ ದೂಳ್ ಕುಂತೈತ್ರೀ. ಹೀಂಗಾದ್ರ ಹ್ಯಾಂಗ್ರಿ ಜೀವನಾ ಮಾಡೋದ್...’
ತಾಂಡಾದ ಮಹಿಳೆಯರು ತಮ್ಮ ಅಳಲು ತೋಡಿಕೊಂಡ ಪರಿಯಿದು. ಗ್ರಾಮದ ಸುತ್ತ ಇರುವ ಮೆದುಕಬ್ಬಿಣ ಕಾರ್ಖಾನೆಗಳಿಂದ ಬರುವ ಧೂಳಿನ ದುಷ್ಪರಿಣಾಮಗಳ ಕುರಿತು ಅವರು ಸುದ್ದಿಗಾರರ ಮುಂದೆ ಭಾನುವಾರ ಎಳೆಎಳೆಯಾಗಿ ಬಿಚ್ಚಿಟ್ಟರು.
 
‘ಕಾರ್ಖಾನೆ ಸುರುವಾದ್‌ ದಿನದಿಂದ್ಲೂ ಮನಿಯಾಗ ಧೂಳ್‌ ತುಂಬೇತಿ. ಹಬ್ಬದ್‌ ವ್ಯಾಳೆ ಚೀಲಗಟ್ಟಲೇ ದೂಳ್‌ ತೆಗದೀವಿ. ಹತ್‌ ವರ್ಸದಿಂದ್ ಮನಿ ಒಳಗ, ಹೊರಗ ಎಲ್ಲೆಲ್ಲೂ ದೂಳ್‌ ಅದಾರೀ’ ಎಂದು ತಮ್ಮ ಕಪ್ಪು ಮಸಿ ಮೆತ್ತಿದ ಕೈಗಳನ್ನು ತೋರಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.