ADVERTISEMENT

ಸುಟ್ಟು ಕರಕಲಾದ 800 ಮಾವಿನ ಮರಗಳು

ಹೊಸಪೇಟೆ ಸಮೀಪ ಕಾಳಘಟ್ಟ ಗಡ್ಡಿ ಮಠದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅನಾಹುತ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 10:38 IST
Last Updated 28 ಫೆಬ್ರುವರಿ 2017, 10:38 IST

ಹೊಸಪೇಟೆ: ಆಕಸ್ಮಿಕ ಬೆಂಕಿ ಅನಾಹುತಕ್ಕೆ ಸುಮಾರು 30 ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಮಾವಿನ ತೋಟ ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ಕಾಳಘಟ್ಟ ಗಡ್ಡಿ ಮಠದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಬೆಂಕಿಗೆ 600 ಮಾವಿನ ಮರಗಳು, ಸುಮಾರು 150ರಿಂದ 200 ಬೇವಿನ ಗಿಡ, ಬಿದಿರು ಹಾಳಾಗಿದೆ. ಪಕ್ಷಿ ಸಂಕುಲಕ್ಕೆ ಹಾನಿಯಾಗಿದೆ ಎಂದು ನಾಗೇನಹಳ್ಳಿ ಶಾಖಾ ಮಠದ ಭಕ್ತ ಶ್ರೀನಿವಾಸ ದೇವರಮನೆ ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಧ್ಯಾಹ್ನ ಮೂರುವರೆ ಗಂಟೆಗೆ ಹೊತ್ತಿಕೊಂಡಿದ್ದ ಬೆಂಕಿ ಕೆಲವೇ ನಿಮಿಷಗಳಲ್ಲಿ ಎಲ್ಲೆಡೆ ವ್ಯಾಪಿಸಿದ್ದರಿಂದ ಮರಗಳು ಸಂಪೂರ್ಣ ಸುಟ್ಟು ಹೋಗಿವೆ. ನದಿಗೆ ಹೊಂದಿಕೊಂಡಂತೆ ಮಠ ಇದೆ. ಮೀನು ಹಿಡಿಯುವವರು ಈ ಕೃತ್ಯ ಎಸಗಿರುವ ಶಂಕೆ ಇದೆ. ಮಂಗಳವಾರ ಈ ಕುರಿತು ಪೊಲೀಸರಿಗೆ ದೂರು ಕೊಡಲಾಗುವುದು’ ಎಂದು ಹೇಳಿದರು.

ಶಟರ್‌ ಮುರಿದು ದೋಚಿದ ಕಳ್ಳರು
ಹೊಸಪೇಟೆ ನಗರದ ಹಳೆ ಬಸ್‌ ನಿಲ್ದಾಣ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮಾರಾಟ ಮಳಿಗೆಯ ಶೆಟರ್‌ ಮುರಿದು ₹5.80 ಲಕ್ಷ ನಗದು ದೋಚಿಕೊಂಡು ಹೋಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಗೋವಿಂದ ಎಂಬುವರಿಗೆ ಸೇರಿದ ಪ್ರಭಾತ್‌ ಎಲೆಕ್ಟ್ರಾನಿಕ್‌ ಮಳಿಗೆಯಲ್ಲಿ ಈ ಘಟನೆ ನಡೆದಿದೆ. ಕಳ್ಳರು ಲಾಕರ್‌ನಲ್ಲಿ ಇಟ್ಟಿದ್ದ ನಗದು ಹಣವನ್ನು ಮಾತ್ರ ಕದ್ದೊಯ್ದಿದ್ದಾರೆ. ಎರಡು ವಾರಗಳಲ್ಲಿ ನಡೆದ ವ್ಯಾಪಾರದ ಹಣವನ್ನು ಲಾಕರ್‌ನಲ್ಲಿ ಇಟ್ಟಿದ್ದರು.

ಸೋಮವಾರ ಮಳಿಗೆ ತೆರೆಯಲು ಬಂದಾಗ ಶಟರ್‌ ಮುರಿದದ್ದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳಿಗೆ ಬಳಿ ಇದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.