ADVERTISEMENT

ಅಕ್ರಮ ವಿದ್ಯುತ್ ಲೈನ್ ಗೆ ರೈತರ ಭೂಮಿ ವಶ; ಆರೋಪ

ಧರ್ಮಪುರಿಯಿಂದ ಆರಂಭವಾಗಿ ಶಿರಾದಲ್ಲಿ ಮುಗಿಯುವ ಪವರ್ ಗ್ರಿಡ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:37 IST
Last Updated 22 ಮಾರ್ಚ್ 2017, 9:37 IST

ವಿಜಯಪುರ: ತಮಿಳುನಾಡಿನ ಧರ್ಮಪುರಿಯಿಂದ ಆರಂಭಗೊಂಡು ತುಮಕೂರು ಜಿಲ್ಲೆಯ ಶಿರಾ ಬಳಿಯಲ್ಲಿ ಕೊನೆಗೊಳ್ಳಬೇಕಾಗಿರುವ ಪವರ್ ಗ್ರಿಡ್‌  ಲೈನ್ ಗಳ ಕಾಮಗಾರಿಯಲ್ಲಿ ಕೇಂದ್ರ ಸರ್ಕಾರದ ನೀತಿ ನಿಯಮಾವಳಿ ಗಾಳಿಗೆತೂರಿ ಅಕ್ರಮವಾಗಿ ಮಾಡುತ್ತಿದೆ ಎಂದು ದೂರಲಾಗಿದೆ.

ಕೂಡಲೇ ಕಾಮಗಾರಿ ನಿಲ್ಲಿಸಿ ಅಧಿಕೃತವಾಗಿ ಅನುಮತಿ ನೀಡಿರುವ ಭಾಗದಲ್ಲಿ ಕಾಮಗಾರಿ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ ಒಳಗೊಂಡಂತೆ ಹಲವು ಮುಖಂಡರು ಒತ್ತಾಯಿಸಿದ್ದಾರೆ.

ವಿಜಯಪುರ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ  ಶಿವಪ್ಪ ಮಾತನಾಡಿ, ಕೇಂದ್ರ ವಿದ್ಯುತ್ ಪ್ರಾಧಿಕಾರದಿಂದ  ಟೆಂಡರ್ ಪಡೆದುಕೊಂಡಿರುವ ಕೋಸ್ಟಲ್ ಎನರ್ಜಿನ್ ಮತ್ತು ಆ್ಯಂಡ್ ಭಾರತ್ ಸಂಸ್ಥೆಗಳ ಗುತ್ತಿಗೆದಾರರು ಟೆಂಡರ್ ನಲ್ಲಿ ಸೂಚಿಸಿರುವಂತಹ ಮಾರ್ಗ ಕೈಬಿಟ್ಟು, ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವ ಭಾಗದಲ್ಲಿ ರೈತರ ವಿರುದ್ಧ ಪೊಲೀಸರ  ದೌರ್ಜನ್ಯ ನಡೆಸಿ, ಭೂಮಿ ಕಸಿದುಕೊಂಡು  ವಿದ್ಯುತ್ ಲೈನ್ ಗಳನ್ನು ಅಳವಡಿಸಲಾಗುತ್ತಿದೆ ಎಂದು ದೂರಿದರು.

ವಾಸ್ತವವಾಗಿ ತಮಿಳುನಾಡಿನ ಅರಿಯಲೂರು ಜಿಲ್ಲೆಯ ಉದಯಾರ್ ಪಾಲಯಂ ತಾಲ್ಲೂಕಿನ ಪಾಪಕ್ಕುಡಿ ಸೌತ್ ಗ್ರಾಮದಿಂದ ಆರಂಭವಾಗುವ ಕಾಮಗಾರಿ ಸೇಲಂ– ಮಧುಗಿರಿವರೆಗೆ 765 ಕೆ.ವಿ.ಎಸ್.ಸಿ. ಲೈನ್, ಕುದ್ದಲೂರು, ಸೇಲಂ, ಧರ್ಮಪುರಿ, ವಿಲ್ಲಾಪುರಂ, ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ  ಮೂಲಕ ಹಾದು ಹೋಗಿ ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಕಾಮಗಾರಿ ಪ್ರಾರಂಭವಾಗಬೇಕು.

ನಂತರ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಸುಲೇಕುಪ್ಪಕಾವಲ್ ಗ್ರಾಮದಲ್ಲಿ ಹಾದುಹೋಗಿ ಗುಬ್ಬಿ ತಾಲ್ಲೂಕಿನ ಕಲ್ಲಿಪಾಳ್ಯದ ನಂತರ ತುಮಕೂರು ತಾಲ್ಲೂಕಿನ ನಾರಾಯಣಕೆರೆ ಗ್ರಾಮದಲ್ಲಿ ಪ್ರಾರಂಭವಾಗಿ ಕನಕಪುರ ತಾಲ್ಲೂಕಿನ ಯಲಚವಾಡಿ ಗ್ರಾಮದ ಮೂಲಕ ರಾಮನಗರ ತಾಲ್ಲೂಕಿನ ಗೋಪಲ್ಲಿ, ಮಾಗಡಿ ತಾಲ್ಲೂಕಿನ ಅತ್ತಿನಗೆರೆ, ನಂತರ ತುಮಕೂರು ಜಿಲ್ಲೆಯ ಕರಜಿಗೆರೆ ಅರಿಯೂರು ಗ್ರಾಮದ ಮುಖಾಂತರ ಕೆಂಪನದೊಡ್ಡೇರಿ ಗ್ರಾಮದಲ್ಲಿ ಕಾಮಗಾರಿ ಕೊನೆಗೊಳ್ಳಬೇಕು.

ಕಾಮಗಾರಿಯಲ್ಲಿ ಎಸ್.ಸಿ, ಡಿ.ಸಿ. ಲೈನ್ ಗಳು ಒಟ್ಟಿಗೆ ಹಾದುಹೋಗಬೇಕು ಆದರೆ, ಡಿ.ಸಿ ಲೈನ್ ಮಾತ್ರ ಹಾದುಹೋಗುತ್ತಿದೆ. ಎಸ್.ಸಿ ಲೈನ್  ಕೋಲಾರ ಜಿಲ್ಲೆ  ಮಾಲೂರು ತಾಲ್ಲೂಕಿನಲ್ಲಿ ತಿರುವು ಪಡೆದು, ಶಿಡ್ಲಘಟ್ಟ  ದೇವನಹಳ್ಳಿ, ದೊಡ್ಡಬಳ್ಳಾಪುರದ ಮೂಲಕ ಲೈನ್ ಗಳನ್ನು ಎಳೆಯಲಾಗುತ್ತಿದೆ. 

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು, ರೈತರಿಗೆ ಅನ್ಯಾಯ ಆಗದಂತೆ ಮನವಿ ಮಾಡಲಾಗಿದೆ. ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಸುತ್ತಮುತ್ತಲಿನ 30ಕಿ.ಮೀ. ದೂರದಲ್ಲಿ ಭಾರಿ ವಿದ್ಯುತ್ ಲೈನ್ ಅಳವಡಿಕೆ ಮಾಡುವಂತಿಲ್ಲ. ಆದರೂ ಕಾಮಗಾರಿ ನಡೆಯುತ್ತಿದೆ ಎಂದು ದೂರಿದ್ದಾರೆ.

ಚಕಾರ ಎತ್ತಿಲ್ಲ: ವಿಮಾನ ನಿಲ್ದಾಣ ಪ್ರಾಧಿಕಾರ ಈ ಕುರಿತು ಚಕಾರ ಎತ್ತಿಲ್ಲ. ಕೋಲಾರ, ಮಾಲೂರು, ಶಿಡ್ಲಘಟ್ಟ, ದೇವನಹಳ್ಳಿ, ದೊಡ್ಡಬಳ್ಳಾಪುರ ಭಾಗದ ಶಾಸಕರು ಶಾಮೀಲಾಗಿರುವ ಶಂಕೆಯಿದ್ದು ಉತ್ತರಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. 

ರೈತ ಸಂಘದ  ಗೋಪಾಲಸ್ವಾಮಿ, ಆರ್‌ಟಿಇ  ಕಾರ್ಯಕರ್ತ ವಿನೋದ್ ಕುಮಾರ್ ಗೌಡ, ರೈತ ಸಂಘದ ಉಪಾಧ್ಯಕ್ಷ ಚನ್ನಹಳ್ಳಿ ನಾರಾಯಣಸ್ವಾಮಿ, ಕರವೇ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸೈಪುಲ್ಲಾ ಮತ್ತಿತರರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.