ADVERTISEMENT

ಅಸಮರ್ಪಕ ಕರ್ತವ್ಯ ನಿರ್ವಹಣೆ ವಜಾಕ್ಕೆ ಆಗ್ರಹ

ದೇವನಹಳ್ಳಿ ಪುರಸಭೆ ಸಭಾಂಗಣದಲ್ಲಿ ಬಜೆಟ್ ಕುರಿತ ಚರ್ಚೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 10:59 IST
Last Updated 28 ಜನವರಿ 2017, 10:59 IST

ದೇವನಹಳ್ಳಿ : ಪುರಸಭೆ ಆಡಳಿತದಲ್ಲಿ ಸಮರ್ಪಕ ಕರ್ತವ್ಯ ನಿರ್ವಹಿಸದಿದ್ದರೆ ಎಲ್ಲಾ ಸಿಬ್ಬಂದಿ ಖಾಲಿ ಮಾಡಿ ಎಂದು ಪುರಸಭೆ ಸದಸ್ಯ ಜಿ.ಎನ್. ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು. ದೇವನಹಳ್ಳಿ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿ ಅವರು ಮಾತನಾಡಿದರು.

ವಿಮಾನ ನಿಲ್ದಾಣದಿಂದ ತಾಲ್ಲೂಕಿನ ಕಾರಹಳ್ಳಿ ಪ್ರೆಸ್ಟೇಜ್ ಕಂಪೆನಿಯವರಿಗೆ ಕಾವೇರಿ ನೀರೋ ಅಥವಾ ತ್ಯಾಜ್ಯ ಸಂಸ್ಕರಣ ನೀರು ಪೂರೈಕೆಗೋ ಹಾಕಿರುವ ಪೈಪ್ ಲೈನ್ ಕಾಮಗಾರಿಯಿಂದ ದುರಸ್ತಿ ಕಂಡ ರಸ್ತೆ ಹದಗೆಟ್ಟಿದೆ.

ಯಾವುದೇ ರೀತಿಯ ಹಣ ಪಾವತಿಸದೆ ಕಾಮಗಾರಿ ಎಂದರೆ ಅಧಿಕಾರದಲ್ಲಿ ಜವಾಬ್ದಾರಿ ಇರುವವರು ಏನು ಮಾಡುತ್ತಿದ್ದರು. ಪುರಸಭೆ ಅನುಮತಿ ಪಡೆಯದೆ ಕೆಲಸ ಮಾಡಲಾಗಿದೆ ಎಂದರು. ಸದಸ್ಯ ವೈ.ಸಿ.ಸತೀಶ್ ಧ್ವನಿಗೂಡಿಸಿ ಮಾತನಾಡಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಗಿತಗೊಳಿಸಲು ಯಾಕೆ ಮುಂದಾಗಿಲ್ಲ. ಅಧಿಕಾರಿಗಳ ಗಮನಕ್ಕಾಗಲಿ, ಅಧ್ಯಕ್ಷರ ಗಮನಕ್ಕಾಗಲಿ ಬಂದಿಲ್ಲ. ಶಾಸಕರ ಗಮನಕ್ಕೂ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಎಂಜಿನಿಯರ್‌ ಗಜೇಂದ್ರ ಹಾಗೂ ಮುಖ್ಯಾಧಿಕಾರಿ ಅಂಬಿಕಾ ಮಾತನಾಡಿ, ವಿಷಯ ತಿಳಿಯುತ್ತಿಂದ್ದಂತೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ, ಕಾಮಗಾರಿ ಸ್ಥಳ ಪರಿಶೀಲಿಸಿ 36 ಸಾವಿರ ಮತ್ತು ದಂಡವನ್ನು ಪಾವತಿಸುವಂತೆ ಸೂಚಿಸಲಾಗಿದೆ ಎಂದು ಸಮಜಾಯಿಸಿ ನೀಡಿದರು.

ಕಳೆದ ಬಾರಿ ನಡೆದ ಸಭೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿರುವ ಕೋಳಿ ಮತ್ತು ಕುರಿ ಮಾಂಸದ ಅಂಗಡಿ ಎಷ್ಟಿದೆ ಎಂದು ಪಟ್ಟಿಮಾಡಿ  ಎಲ್ಲಾ ಅಂಗಡಿಗಳಿಗೂ ಒಂದೆಡೆ ಜಾಗ ಕಲ್ಪಿಸಲು ಪುರಸಭೆ ಸ್ವತ್ತನ್ನು ಗುರುತಿಸುವಂತೆ ತಿಳಿಸಿದ್ದರೂ ಈವರೆಗೆ ಆಗಿಲ್ಲ, ಪುರಸಭೆ ವ್ಯಾಪ್ತಿಯ ಒಟ್ಟು 23 ವಾರ್ಡ್‌ಗಳಲ್ಲಿನ ಬಡಾವಣೆಯ ಅಂಚೆ ವಿಳಾಸ ಗುರುತಿಸಲು ಯಾವ ಬೀದಿ, ಯಾವ ರಸ್ತೆಗಳೆಂಬ ನಾಮಪಲಕಗಳಿಲ್ಲ. ಪುರಸಭೆ ವ್ಯಾಪ್ತಿಯಲ್ಲಿ ಎರಡು ನೀರು ಸಂಗ್ರಹಣೆಯ ಕುಂಟೆಗಳಿವೆ, ನಿಲೇರಿ ಮತ್ತು ಟೆಂಟ್ ಸಿನಿಮಾಮಂದಿರದ ಬಳಿ ಇರುವ ಸ್ವತ್ತು ಗುರುತಿಸಿ ನಾಮಫಲಕ ಹಾಕಿಲ್ಲ ಎಂದರು.

ಒಂದು ತಿಂಗಳಿಂದ ಕಸ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲ, ಸಿಬ್ಬಂದಿ ಯಾವ ಕೆಲಸ ಮಾಡುತ್ತಿದ್ದಾರೆ ಸಮರ್ಪಕ ನೀರು ಪೂರೈಕೆಗೆ ಯಾವ ರೀತಿ ಕ್ರಮ ಕೈಗೊಂಡಿದ್ದೀರಿ ಎಂದು ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು.

ಮುಖ್ಯಾಧಿಕಾರಿ ಅಂಬಿಕಾ ಮತ್ತು ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಕುಡಿಯುವ ನೀರು ಪ್ರತಿ ವಾರಕ್ಕೊಮ್ಮೆ ಪೂರೈಕೆಯಾಗುತ್ತಿದೆ. ದಿನ ಬಿಟ್ಟು ದಿನಕ್ಕೆ ಉಪ್ಪು ನೀರು ಬಿಡಲಾಗುತ್ತಿದೆ. ಸದ್ಯಕ್ಕೆ ಸುಧಾರಣೆಯಾಗುತ್ತಿದ್ದರೂ ತಾಲ್ಲೂಕಿನ ಬೆಟ್ಟಕೋಟೆ ಕೆರೆಯಲ್ಲಿ 15 ಕೊಳವೆ ಬಾವಿ ಕೊರೆಯಿಸಿ ಪೈಪ್ ಲೈನ್ ಮೂಲಕ ಪಟ್ಟಣದ ಮೂರು ಟ್ಯಾಂಕರ್ ತುಂಬಿಸುವ ಯೋಜನೆಗೆ ಬಯಪಾ ಅಧ್ಯಕ್ಷರು 3ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ನಗರೋತ್ಥಾನ ಯೋಜನೆಯಡಿ 4 ಕೋಟಿ ಅನುದಾನವಿದೆ.

ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ವಿಸ್ತರಿಸಲು ಬಯಪಾಗೆ 7.5ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. 20 ಪೌರ ಕಾರ್ಮಿಕರು ನಿರಂತರ ರಜೆ ಎಂದರೆ ಕಸ ನಿರ್ವಹಣೆ ಹೇಗೆ ಸಾಧ್ಯ. ಕರ್ತವ್ಯದ ಆಸಕ್ತಿ ಇಲ್ಲದಿದ್ದರೆ ಸೇವೆಯಿಂದ ಹೊರಗಿಟ್ಟು ಬೇರೆಯವರನ್ನು ನೇಮಿಸಿ. ಹಾಜರಾತಿಗೆ ಸಹಿ ಮಾಡಿ ಮನೆಯಲ್ಲಿ ಮಲಗಿರುವವರಿಗೆಲ್ಲಾ ಸಂಬಳ ನೀಡುವುದು ಎಷ್ಟು ಸೂಕ್ತ ಎಂದರು.

ಪರಿಸರ ಎಂಜಿನಿಯರ್‌ ಮತ್ತು ಹಿರಿಯ ಆರೋಗ್ಯ ನಿರೀಕ್ಷಕಿಯನ್ನು ಮುಖ್ಯಾಧಿಕಾರಿ ಕರೆಯಿಸಿ ಗೈರು ಹಾಜರಾಗಿರುವವರ ಪಟ್ಟಿ ಮಾಡಿ ತಕ್ಷಣ ನೋಟಿಸ್‌ ನೀಡಿ ಎಂದು ತಾಕೀತು ಮಾಡಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬೇಕರಿ ಮಂಜುನಾಥ್‌, ಸದಸ್ಯ ಎಂ.ಮೂರ್ತಿ, ಎಂ.ಕುಮಾರ್‌, ರವೀಂದ್ರ, ರತ್ನಮ್ಮ, ಶಾಂತಮ್ಮ, ಆಶಾರಾಣಿ, ಶಶಿಕುಮಾರ್‌, ವಿ.ಗೋಪಾಲ್, ಎಂ.ನಾರಾಯಣಸ್ವಾಮಿ, ಗಾಯಿತ್ರಿ, ಪುಷ್ಪ, ಭಾಗ್ಯಮ್ಮ ನಾಮಿನಿ ಸದಸ್ಯ ವೇಣುಗೋಪಾಲ್‌ ಕಂದಾಯ ನಿರೀಕ್ಷಕ ರಾಜೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.