ADVERTISEMENT

ಆಯುಕ್ತರ ಅಸಹಕಾರ: ಬಿಜೆಪಿ ಪ್ರತಿಭಟನೆ

ಹೆಬ್ಬಗೋಡಿ ನಗರಸಭೆ ಅಭಿವೃದ್ಧಿ ಕಾರ್ಯ ನನೆಗುದಿಗೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 7:02 IST
Last Updated 19 ಜನವರಿ 2017, 7:02 IST
ಆನೇಕಲ್‌ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆಯ ಆಯುಕ್ತರ  ಅಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿ ನಗರಸಭೆಯ ಸದಸ್ಯರು ಪ್ರತಿಭಟನೆ ನಡೆಸಿದರು
ಆನೇಕಲ್‌ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆಯ ಆಯುಕ್ತರ ಅಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿ ನಗರಸಭೆಯ ಸದಸ್ಯರು ಪ್ರತಿಭಟನೆ ನಡೆಸಿದರು   

ಆನೇಕಲ್‌ : ಹೆಬ್ಬಗೋಡಿ ನಗರಸಭೆಯ ಆಯುಕ್ತರ ಅಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ನಗರಸಭೆಯಲ್ಲಿ ಆಡಳಿತ ನಡೆಸುವುದೇ ಕಷ್ಟವಾಗಿದೆ. ಯಾವುದೇ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಆಡಳಿತ ಪಕ್ಷ ಬಿಜೆಪಿಯ ನಗರಸಭಾ ಸದಸ್ಯರು ನಗರಸಭೆ ಕಚೇರಿ ಎದುರು ಪ್ರತಿಭಟಿಸಿದರು.

ಹೆಬ್ಬಗೋಡಿ ನಗರಸಭೆಯ ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ ಮಾತನಾಡಿ, ಪೌರಾಯುಕ್ತರಾಗಿ ಕೃಷ್ಣಮೂರ್ತಿ ಅವರು ಅಧಿಕಾರ ವಹಿಸಿಕೊಂಡ ನಂತರ ನಗರಸಭಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕಾಮಗಾರಿಗಳ ಬಗ್ಗೆ ಮಾಹಿತಿ ಕೇಳಿದರೆ ಉಪಾಧ್ಯಕ್ಷರಿಗೆ ಮಾಹಿತಿ ನೀಡುವ ಅವಶ್ಯಕತೆಯಿಲ್ಲ ಎಂದು ಹೇಳುತ್ತಾರೆ. ಸಾಮಾನ್ಯ ಸದಸ್ಯರಿಗೂ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವುದು ಪೌರಾಯುಕ್ತರ ಕರ್ತವ್ಯ. ಆದರೆ ಉಪಾಧ್ಯಕ್ಷರಿಗೂ ಯಾವುದೇ ಮಾಹಿತಿ ನೀಡದೇ ಕತ್ತಲಿನಲ್ಲಿ ಇಡಲಾಗುತ್ತಿದೆ ಎಂದು ದೂರಿದರು.

ಮೂಲಸೌಲಭ್ಯಕ್ಕಾಗಿ ನಗರಸಭೆಯಲ್ಲಿ ₹ 7 ಕೋಟಿ ಅನುದಾನವಿದ್ದು, ಪ್ರತಿ ವಾರ್ಡ್‌ಗೆ ₹18 ಲಕ್ಷ ಅನುದಾನ ಬಿಡುಗಡೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಜಿಲ್ಲಾಧಿಕಾರಿ ಅನುಮತಿ ಪಡೆದು ಬಿಡುಗಡೆ ಮಾಡಲಾಗುವುದು ಎಂದು ಹೇಳುತ್ತಾ  ಕಾಲ ಕಳೆಯುತ್ತಿದ್ದಾರೆ. ಇದುವರೆಗೂ ಒಂದು ಬಿಡಿಗಾಸು ಬಿಡುಗಡೆಯಾಗಿಲ್ಲ. ಜನರಿಗೆ ಭರವಸೆ ನೀಡಿ ಗೆದ್ದ ಸದಸ್ಯರು ಜನರ ಕೆಲಸಗಳನ್ನು ಮಾಡಿಸದೇ ಮುಖ ತೋರಿಸುವುದು ಹೇಗೆ ಎಂದರು. ನಗರಸಭೆ ಸದಸ್ಯೆ ಸುಮಿತ್ರಾ ಮಾತನಾಡಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ವಿ.ಶಿವಪ್ಪ ಮಾತನಾಡಿ, ಅಧಿಕಾರಿಗಳು ಹಾಗೂ ಸದಸ್ಯರು ಒಗ್ಗೂಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಆದರೆ ಹೆಬ್ಬಗೋಡಿಯಲ್ಲಿ ಅಧಿಕಾರಿಗಳ ದರ್ಬಾರಿನಲ್ಲಿ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಲ್ಲ ಎಂದರು.

ನಗರಸಭೆ ಸದಸ್ಯರಾದ ನಂದಿನಿ,  ಪುಷ್ಪಾ, ಗಿರಿಜಾ, ಮಂಜುಳ, ಕೃಷ್ಣಪ್ಪ, ಅಂಬರೀಷ್, ಜಯಶ್ರೀ, ಮಂಜುನಾಥ್, ಶಾರದ ಓಬಲೇಶ್, ಸುಜಾತ ಹರೀಶ್, ರತ್ನ ಜಯರಾಮ್, ಬಿಜೆಪಿ ಮುಖಂಡರಾದ ಮುರುಗೇಶ್, ಪಟೇಲ್ ನಾಗರಾಜು, ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.