ADVERTISEMENT

ಪಾರಂಪರಿಕ ದವನ ಬೆಳೆ ಇಳಿಮುಖ

ಅಂತರ್ಜಲ ಕುಸಿತ, ಬೆಳೆಗಾರರು ಕಂಗಾಲು – ಎಣ್ಣೆ ಉತ್ಪಾದನೆಯೂ ಕುಸಿಯುವ ಆತಂಕ

​ಪ್ರಜಾವಾಣಿ ವಾರ್ತೆ
Published 4 ಮೇ 2017, 9:57 IST
Last Updated 4 ಮೇ 2017, 9:57 IST
ದೇವನಹಳ್ಳಿ ಪಟ್ಟಣದ ಪ್ರಸನ್ನಹಳ್ಳಿ ಬಳಿ ರೈತ ಬೆಳೆದಿರುವ ದವನ ಬೆಳೆ
ದೇವನಹಳ್ಳಿ ಪಟ್ಟಣದ ಪ್ರಸನ್ನಹಳ್ಳಿ ಬಳಿ ರೈತ ಬೆಳೆದಿರುವ ದವನ ಬೆಳೆ   

ದೇವನಹಳ್ಳಿ: ಪಾರಂಪರಿಕ ಔಷಧಿಯುಕ್ತ ದವನ ಬೆಳೆ ಅಂತರ್ಜಲ ಕುಸಿತದಿಂದಾಗಿ ಇಳಿಮುಖವಾಗುತ್ತಿದ್ದು ದವನ ಬೆಳೆಗಾರರು ಕಂಗಾಲಾಗಿದ್ದಾರೆ.
ತಂಪು ಹವಾಮಾನಕ್ಕೆ ಸೂಕ್ತ ಬೆಳೆಯಾಗಿರುವ ದವನಕ್ಕೆ ಅತ್ಯಧಿಕ ಬಂಡವಾಳದ ಅವಶ್ಯಕತೆ ಇಲ್ಲ, ಮೂರುವರೆಯಿಂದ ನಾಲ್ಕು ತಿಂಗಳ ಅಲ್ಪಾವಧಿಯಲ್ಲಿ ಸರಳ ವಿಧಾನದಲ್ಲಿ ಬೆಳೆಯಬಹುದಾದ ಬೆಳೆಗೆ ಕೊಟ್ಟಿಗೆ ಹಾಗೂ ನೀರು ಪ್ರಮುಖ, ಫೆಬ್ರವರಿ ತಿಂಗಳಿನಿಂದಲೇ  ಹೆಚ್ಚುತ್ತಿರುವ ಉಷ್ಣಾಂಶದಿಂದ ದವನ ಬೆಳೆ ಇಳುವರಿಯ ಜತೆಗೆ ಎಣ್ಣೆ ಉತ್ಪಾದನೆಯ ಗಣನೀಯವಾಗಿ ಕುಸಿತವಾಗುತ್ತಿದೆ ಎಂಬುದು ಬೆಳೆದಾರರ ಮತ್ತು ಎಣ್ಣೆ ಭಟ್ಟಿ ಮಾಲೀಕರ ಅತಂಕ.

ಸುಗಂಧ ಸಹಿತವಾಗಿ ಹೂವು ಮತ್ತು ಎಲೆಗಳು ತೈಲದಂಶ ಹೆಚ್ಚು ಹೊಂದಿರುವುದರಿಂದ ಇದರ ಎಣ್ಣೆಯನ್ನು ಸುಗಂಧ ದ್ರವ್ಯ, ಸೌಂದರ್ಯವರ್ಧಕ, ಔಷಧಿತಯಾರಿಕೆ ಮತ್ತು ಬೆಲೆ ಬಾಳುವ ಪಾನಿಯಗಳಲ್ಲಿ ಹೆಚ್ಚು ಬಳಕೆಯಾಗುವುದರಿಂದ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು ಉತ್ಪಾದನೆ ಇಳಿಮುಖವಾಗಿ ಬೇಡಿಕೆ ಹೆಚ್ಚಳವಾಗಿದೆ ಎನ್ನುತ್ತಾರೆ ತೊಟಗಾರಿಕೆ ಇಲಾಖೆ ಅಧಿಕಾರಿಗಳು.

ದವನ ಬೆಳೆಗೆ ಡಿಸೆಂಬರ್ ತಿಂಗಳು ನಾಟಿಗೆ ಪ್ರಾಶಸ್ತ್ಯವಿದ್ದರೂ ಈ ಒಂದೆ ಬೆಳೆ ಎರಡು ಬಾರಿ ಕೊಯ್ಲು ಮಾಡಬಹುದು, ನಿಗದಿತ ಸಮಯದ ನಂತರವು ದವನ ನಾಟಿ ಮಾಡಿದರೆ ಇಳುವರಿ  ಕಡಿಮೆಯಾದರು ಹಾನಿ  ಆಗಲ್ಲ, ಬೆಳೆಗೆ ನೀರುಣಿಸದಿದ್ದರೆ ಹಾನಿ  ತಪ್ಪಲ್ಲ ಎಂಬುದು ಬೆಳೆಗಾರರ ಅಭಿಪ್ರಾಯ.

ತಾಲ್ಲೂಕಿನಲ್ಲಿ ಪಾರಂಪರಿಕ ದವನ  ಬೆಳೆಗಾರರ ಶೇಕಡವಾರು ಸಂಖ್ಯೆ ಕಡಿಮೆಯಾಗಿದ್ದಾರೆ ಕೇವಲ ಭಟ್ಟಿ ಮಾಲೀಕರಿಗೆ ದವನ ಬೆಳೆ ಅವಶ್ಯಕವಾಗಿದ್ದು ಭಟ್ಟಿ ಮಾಲೀಕರು ದವನ ಬೆಳೆಗಾರರ ಮನವೊಲಿಸಿ ಟನ್ ಲೆಕ್ಕದಲ್ಲಿ ಬೆಳೆ ಬೆಳೆದುಕೊಡುವಂತೆ ಮುಂಗಡ ಹಣ ನೀಡುತ್ತಾರೆ, ಕೆಲವು ರೈತರು ಮಾತ್ರ ದವನ ಬೆಳೆದು ನೇರವಾಗಿ ಭಟ್ಟಿ ಮಾಲೀಕರಿಗೆ ಮಾರಾಟ ಮಾಡುತ್ತಾರೆ.

ದವನ ಬೆಳೆಯುತ್ತಿರುವ ರೈತರಿಗೆ ತೋಟಗಾರಿಕೆ ಇಲಾಖೆವತಿಯಿಂದ ಯಾವುದೇ  ರೀತಿಯಿಂದ ಪ್ರೊತ್ಸಾಹ ಧನ ನೀಡಿಲ್ಲ, 2013ರಲ್ಲಿ ಹೆಕ್ಟರ್‌ಗೆ ₹ 20 ರಿಂದ 30 ಸಾವಿರ ಪ್ರೋತ್ಸಾಹ ಧನ ಹೊರತು ಪಡಿಸಿ ಈವರೆವಿಗೂ ನೀಡಿಲ್ಲ, ಫಾಲಿ ಹೌಸ್‌ಗಳಲ್ಲಿ ಮಣ್ಣು ಪರೀಕ್ಷೆ ನಡೆಸಿ ಯಾವ ಬೆಳೆ ಸೂಕ್ತ ಎಂಬುದನ್ನು ಮಾಹಿತಿ ನೀಡಲು ಒಂದು ವರ್ಷದಿಂದ ಹರಸಾಹಸಪಡುತ್ತಿದ್ದೇನೆ, ಈವರೆಗೂ ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನುತ್ತಾರೆ ರೈತ ಕೃಷ್ಣಮೂರ್ತಿ.

ಕಳೆದ ನವಂಬರ್ ತಿಂಗಳಲ್ಲಿ ಗರಿಷ್ಠ ಮುಖ ಬೆಲೆ ನೋಟು ಅಮಾನ್ಯ ಮತ್ತು ನಂತರದ ವಹಿವಾಟಿನ ಕಡಿಮೆ ಹಣ ಬಳಕೆಯಿಂದ ಅನೇಕ ರೈತರು ಬೆಳೆ ನಾಟಿ ಮಾಡಲು ಹಿಂಜರಿಕೆ ಒಂದೆಡೆಯಾದರೆ ಯಾವುದೆ ಕ್ಷಣದಲ್ಲಿ ಕೊಳವೆ ಬಾವಿಗಳಲ್ಲಿರುವ ಅಂತರ್ಜಲ ಕ್ಷಿಣಿಸಬಹುದೆಂಬ ಭಯದಿಂದ ಅನೇಕ ರೈತರು ಕೈಬಿಟ್ಟಿದ್ದಾರೆ ಎನ್ನುತ್ತಾರೆ ಬೆಳೆಗಾರ ಮಹೇಶ್ .

ಪ್ರಸ್ತುತ ಬೇಸಿಗೆಯಲ್ಲಿ ಭಟ್ಟಿಯಲ್ಲಿ ಬೆಂದ ದವನ ಎಣ್ಣೆ ಇಳುವರಿಗೆ ಸಕಾಲ, ದವನ ಪ್ರತಿ ಟನ್‌ಗೆ 1 ರಿಂದ 1.2 ಕೆ.ಜಿ ಎಣ್ಣೆ ಮಾತ್ರ ಇಳುವರಿ ಕನಿಷ್ಠ  8 ಗಂಟೆ ಭಟ್ಟಿಯಲ್ಲಿ ಬೇಯಿಸಲೇಬೇಕು, ದವನ ಒಂದು ಟನ್‌ಗೆ ಗುಣಮಟ್ಟ ಆಧರಿಸಿ ₹ 10 ರಿಂದ 12  ಸಾವಿರ ದರವಿದೆ ಎಂಬುದು ಬೆಳೆಗಾರರ ಹೇಳಿಕೆ .
ದವನ ಪ್ರತಿ ಕೆ.ಜಿ ಎಣ್ಣೆಗೆ ಪ್ರಸ್ತುತ ಮಾರುಕಟ್ಟೆ ಮೌಲ್ಯ ₹ 28 ರಿಂದ ₹ 30 ಸಾವಿರವಿದೆ, ಕಳೆದ ವರ್ಷಕ್ಕಿಂತ ಈ ದರ ಕಡಿಮೆಯಾಗಿದೆ ಎನ್ನಲಾಗಿದೆ.

35 ಸಾವಿರಕ್ಕಿಂತ ಮೇಲ್ಪಟ್ಟು ದರ ಹೆಚ್ಚಾದರೆ ಲಾಭಸಿಗಲಿದೆ ಕೊಯ್ಲಿ, ಸಾಗಾಣಿಕೆ, ಕಾರ್ಮಿಕರ ಕೂಲಿ, ಎಷ್ಟು ಇದೆ ಖರ್ಚು, 500 ಕೆ.ಜಿ ದಾಸ್ತಾನು ಮಾಡಿಕೊಂಡಿದ್ದೇವೆ, ಉತ್ತಮ ದರ ಸಿಗುವವರೆಗೂ ಮಾರಾಟ ಮಾಡಲ್ಲ ಎನ್ನುತ್ತಾರೆ ಬೆಳೆಗಾರ ಹಾಗೂ ಭಟ್ಟಿ ಮಾಲೀಕ ಮಹೇಶ್ .

*
ಪ್ರಸ್ತುತ ತಾಲ್ಲೂಕಿನಲ್ಲಿ 35 ರಿಂದ 40 ಎಕರೆ ದವನ ಬೆಳೆ ವಿಸ್ತೀರ್ಣವಿದ್ದರೂ ಬೇರೆ ತಾಲ್ಲೂಕುಗಳಿಂದ ಖರೀದಿಸಿ ಎಣ್ಣೆ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ.
-ಜಿ.ಮಂಜುನಾಥ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೆಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT