ADVERTISEMENT

‘ಬಿಜೆಪಿಗಿಂತ ಕಾಂಗ್ರೆಸ್‌ ಉತ್ತಮ’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 8:56 IST
Last Updated 28 ಫೆಬ್ರುವರಿ 2018, 8:56 IST

ವಿಜಯಪುರ: ಕಾಂಗ್ರೆಸ್‌ನಲ್ಲಿ ಭಾಷಣಕಾರರ ಕೊರತೆ ಇದೆ. ಇಲ್ಲಿ ಕೆಲಸ ಮಾಡುವವರೇ ಹೆಚ್ಚು. ಅದೇ ಬಿಜೆಪಿಯಲ್ಲಿ ಕೆಲಸ ಮಾಡುವವರು ಸಿಗುವುದಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಚನ್ನರಾಯಪಟ್ಟಣ ಹೋಬಳಿ ಕೊಂಡೇನಹಳ್ಳಿ ಗ್ರಾಮದಲ್ಲಿ ಸೋಮವಾರ ಗ್ರಾಮ ವಾಸ್ತವ್ಯ ಹೂಡಿದ್ದ ಅವರು ಮಾತನಾಡಿದರು.

ಕಾಂಗ್ರೆಸ್ ಅಭಿವೃದ್ಧಿ ಕೇಳುವ ಪ್ರಧಾನಿಮೋದಿ ಅವರು, ವಿದೇಶಗಳಿಗೆ ಹೋಗಿ ಭಾರತದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಅವಕಾಶಗಳನ್ನು ಕಾಂಗ್ರೆಸ್ ಕಲ್ಪಿಸಿ ಕೊಟ್ಟಿದೆ ಎನ್ನುವುದನ್ನು ಮರೆಯಬಾರದು ಎಂದರು. ದೇಶದ ಹಿತಕ್ಕಾಗಿ ಪ್ರಾಣವನ್ನೇ ಬಲಿಕೊಟ್ಟ ಇಂದಿರಾ ಗಾಂಧಿ, ರಾಜೀವ್ ಗಾಂಧಿಯ ನಂತರ ಪ್ರಧಾನಮಂತ್ರಿಯಾಗುವ ಅವಕಾಶ ಸೋನಿಯಾ ಗಾಂಧಿ ಅವರಿಗೆ ಲಭಿಸಿತ್ತು. ಆದರೆ, ಆ ಹುದ್ದೆಯನ್ನು ತ್ಯಜಿಸಿ, ದೇಶಕ್ಕಾಗಿ ಕೆಲಸ ಮಾಡಿದ ಕುಟುಂಬದ ಇತಿಹಾಸ ಇರುವುದು ಕಾಂಗ್ರೆಸ್‌ನಲ್ಲಿ ಬಿಟ್ಟರೆ, ಬೇರೆ ಯಾವ ಪಕ್ಷದಲ್ಲೂ ಇಲ್ಲ ಎಂದರು.

ರಾಜ್ಯದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ದೇವನಹಳ್ಳಿ ಕ್ಷೇತ್ರದಲ್ಲಿ ಟಿಕೆಟ್ ಸಿಗುವ ವಿಶ್ವಾಸವಿದ್ದು, ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಪರಿಶಿಷ್ಟ ಜಾತಿ ಜಿಲ್ಲಾ ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೊಕೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎಲ್ಲ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿದೆ.

ADVERTISEMENT

ಅಭಿವೃದ್ಧಿ ಸಾಧನೆಯಲ್ಲಿ ಯಾವ ರಾಜ್ಯಕ್ಕೂ ಕಡಿಮೆ ಇಲ್ಲ. ಸಾಧನೆಗಳನ್ನು ಮನೆ,ಮನೆಗೆ ತಲುಪಿಸಬೇಕು. ಬೂತ್‌ ಮಟ್ಟದ ಅಧ್ಯಕ್ಷರು ಮತ್ತು ಸದಸ್ಯರು ಮನಸು ಮಾಡಿದರೆ ಎದುರಾಳಿಗಳನ್ನು ಸೋಲಿಸುವುದು ಕಷ್ಟದ ಕೆಲಸವೇನಲ್ಲ ಎಂದರು.

ಮುಖಂಡ ಭುವನಹಳ್ಳಿ ಮುನಿರಾಜು ಮಾತನಾಡಿ, ಪಕ್ಷ ನಿಷ್ಟೆ ಮತ್ತು ಸಂಘಟನೆ ದೃಷ್ಟಿಯಲ್ಲಿಟ್ಟುಕೊಂಡು ಹಳ್ಳಿಗಳಲ್ಲಿ ಉತ್ತಮ ಸಂಘಟನೆ ಮಾಡುತ್ತಿದೆ. ಬಿಜೆಪಿಯವರು ಮಾತನಾಡುವ ಮಾತುಗಳು ಕುಸಂಸ್ಕೃತಿಯನ್ನು ತೋರಿಸುತ್ತವೆ. ಇದು ಅವರ ನಡೆ, ನುಡಿ, ವ್ಯಕ್ತಿತ್ವ ತೋರಿಸುತ್ತದೆ. ಪದಗಳ ಬಳಕ್ಕೆ ಬಗ್ಗೆ ಹಿಡಿತವಿರಬೇಕು. ಕಾಂಗ್ರೆಸ್‌ಗೆ ಕಾರ್ಯಕರ್ತರು ಧೈರ್ಯದಿಂದ ಸಂಘಟಿತರಾಗಬೇಕು ಎಂದರು.

ವಿಎಸ್ಎಸ್ಎನ್. ನಿರ್ದೇಶಕ ಚಂದ್ರಪ್ಪ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಮುಖಂಡರಾದ ಲಕ್ಷ್ಮೀನರಸಿಂಹಸ್ವಾಮಿ, ವಿಎಸ್ಎಸ್ಎನ್ ಅಧ್ಯಕ್ಷ ಶಂಕರಪ್ಪ, ಚಂದ್ರಪ್ಪ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡೇವಿಡ್ ನಾರಾಯಣಸ್ವಾಮಿ, ಗೌಡ, ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್, ಭೈರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.