ADVERTISEMENT

ಮುಖ್ಯಮಂತ್ರಿ ಭೇಟಿ– ಸಹಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 9:03 IST
Last Updated 27 ಜುಲೈ 2017, 9:03 IST

ದೇವನಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 28ರಂದು ದೇವನಹಳ್ಳಿ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ದಲಿತ ಮುಖಂಡರು ಪಕ್ಷಾತೀತವಾಗಿ ಸಹಕರಿಸಬೇಕು ಎಂದು ಉಪ ವಿಭಾಗಾಧಿಕಾರಿ ಜಗದೀಶ್ ತಿಳಿಸಿದರು. ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ದಲಿತ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ದಲಿತ ಸಮುದಾಯ ಒಮ್ಮತವಾಗಿ ನಿರ್ಣಯಿಸಿದಂತೆ ಮುಖಂಡರಾದ ಗುರಪ್ಪ, ಸಿದ್ಧಾರ್ಥ, ಎಂ. ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಮುಖಂಡರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಇರಲಿದೆ. ಪಾಸ್ ವ್ಯವಸ್ಥೆ ಇದ್ದು ಆಕಸ್ಮಿಕ ಪಾಸ್ ಇಲ್ಲದಿದ್ದರೂ ಸ್ಥಳಿಯ ಇಲಾಖಾ ಅಧಿಕಾರಿಗಳ ಮೂಲಕ ಪ್ರವೇಶಕ್ಕೆ ಅವಕಾಶ ದೊರಕಿಸಲಾಗುತ್ತದೆ ಎಂದು ಹೇಳಿದರು.

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಬಹುದಿನಗಳ ಕನಸು ನನಸಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಒಂದೆರಡು ಬಾರಿ ಉದ್ಘಾಟನೆ ಭಾಗ್ಯ ಆಗಿರಲಿಲ್ಲ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಅಂದರೆ 14 ಅಡಿ ಎತ್ತರದ ಡಾ. ಬಿ.ಆರ್.ಅಂಬೇಡ್ಕರ್ ಕಂಚಿನ ಪ್ರತಿಮೆ ಒಂದು ಕೋಟಿ ವೆಚ್ಚದಲ್ಲಿ ಪ್ರತಿಷ್ಠಾಪಿಸಲಾಗಿದ್ದು ಲೋಕಾರ್ಪಣೆಯಾಗುತ್ತಿದೆ ಎಂದರು.

ADVERTISEMENT

ರಾಜ್ಯದ ಸಚಿವರು, ಸಂಸದರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಾಲ್ಕನೇ ಬಾರಿಗೆ ತಾಲ್ಲೂಕಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕಿ ಇಲ್ಲದೆ ಘನತೆ ಗೌರವ ಕಾಯ್ದುಕೊಳ್ಳಬೇಕು. ಅಹಿತಕರ ಘಟನೆಗೆ ಅವಕಾಶ ನೀಡದಂತೆ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಮುನಿನರಸಿಂಹಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ವಿಮಾನ ನಿಲ್ದಾಣಕ್ಕೆ ಫಲವತ್ತಾದ 4,350 ಎಕರೆ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಬೇರೆ ಕಡೆ ರೈತರು 50 ಮತ್ತು 53ರಡಿಯಲಿ ಅರ್ಜಿ ಸಲ್ಲಿಸಿದ್ದು ಸರ್ಕಾರ ನಗರ ವ್ಯಾಪ್ತಿಯಿಂದ 18 ಕಿ.ಮೀ. ಸಾಗುವಳಿ ಪತ್ರ ನೀಡದಂತೆ ತಡೆಹಿಡಿದಿದೆ. ಶಾಸಕರು ಇದನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ತರಬೇಕು ಎಂದು ಅವರು ಹೇಳಿದರು .

ತಹಶೀಲ್ದಾರ್ ಜಿ.ಎ. ನಾರಾಯಣಸ್ವಾಮಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸಮೂರ್ತಿ, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.