ADVERTISEMENT

ರಂಗಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 11:00 IST
Last Updated 4 ಜುಲೈ 2017, 11:00 IST

ವಿಜಯಪುರ: ರಂಗ ಕಲೆಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಾಗ ಮಾತ್ರವೇ ಕಲೆಯೊಂದಿಗೆ ಭಾಷೆಯು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಲಾವಿದ ಕೃಷ್ಣಪ್ಪ ಹೇಳಿದರು. ಇಲ್ಲಿನ ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ  ‘ಕನ್ನಡ ದೀಪ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಟಿವಿ ಧಾರಾವಾಹಿಗಳ ಹಾವಳಿಯಿಂದ ನಶಿಸುತ್ತಿರುವ ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸಲು ನಾಗರಿಕರ ಪ್ರೋತ್ಸಾಹ ಅಗತ್ಯ. ರಂಗಭೂಮಿ ಕಲೆ ಪ್ರತಿಯೊಬ್ಬರ ಮನಸ್ಸು ಪರಿವರ್ತನೆ ಮಾಡುತ್ತದೆ ಎಂದರು.

ಹಿರಿಯ ಮುಖಂಡ ಬಿ.ಕೆ.ಶಿವಪ್ಪ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ರಂಗಭೂಮಿ ಕ್ಷೇತ್ರ ಅವುಗಳನ್ನು ಬಿತ್ತುವ ಕೆಲಸ ಮಾಡುತ್ತಿದೆ. ರಂಗಭೂಮಿ ಎಲ್ಲ ಕಲೆಗಳ ಪಿತಾಮಹನಂತಿದೆ. ಜಾಗತೀಕರಣದ ಪ್ರಭಾವದಿಂದ ರಂಗಭೂಮಿ ಕಲೆ ಹಾಗೂ ಕಲಾವಿದರು ಕ್ಷೀಣಿಸುತ್ತಿದ್ದಾರೆ.  ಕಲಾವಿದರಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ರಂಗಭೂಮಿ ಕಲೆ ಉಳಿಯುತ್ತದೆ ಎಂದರು.

ADVERTISEMENT

ಕನ್ನಡ ಕಲಾವಿದರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ರಾಜಗೋಪಾಲ್ ಮಾತನಾಡಿ, ಆಧುನಿಕತೆ ಬೆಳೆದಂತೆ ವೃತ್ತಿ ರಂಗಭೂಮಿ ಕುಸಿಯುತ್ತಿದೆ.  ಅವುಗಳನ್ನು ಉಳಿಸಿ, ಬೆಳೆಸುವತ್ತ ಕಲಾವಿದರು ಮತ್ತು ಕಲಾಪ್ರೇಕ್ಷಕರು ಚಿಂತನೆ ನಡೆಸಬೇಕಿದೆ ಎಂದರು.

ತಾಲ್ಲೂಕು ಬಿಜೆಪಿ  ಮಹಿಳಾ ಘಟಕದ ಅಧ್ಯಕ್ಷ ಬೂದಿಗೆರೆ ನಾಗವೇಣಿ ಮಾತನಾಡಿ, ಇಡೀ ರಾಷ್ಟ್ರದಲ್ಲಿಯೇ ರಂಗ ನಾಟಕಗಳ ಬೆಳವಣಿಗೆಗೆ ಡಾ.ಗುಬ್ಬಿ ವೀರಣ್ಣನವರ ಕೊಡುಗೆ ಮಹತ್ತರವಾದುದಾಗಿದೆ. ಸಾಮಾಜಿಕ ಬದುಕಿನ ನೈಜತೆಗಳನ್ನು ರಂಗ ಪ್ರಯೋಗದ ಮೂಲಕ ಜನಸಾಮಾನ್ಯರಿಗೆ ಅರಿವು ಮೂಡಿಸುವಂತಹ ಮಹತ್ವದ ಸಾಧನೆಯನ್ನು ಅವರು ಮಾಡಿದ್ದಾರೆ ಎಂದರು.

ಕಸಾಪ ತಾಲ್ಲೂಕು ಉಪಾಧ್ಯಕ್ಷ ಡಾ.ವಿ.ನಾ.ರಮೇಶ್, ಕಾರ್ಯದರ್ಶಿ ಪರಮೇಶ್, ಟೌನ್ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ, ವಿಜಯಕುಮಾರ್, ಮನೋಹರ್, ದೇವರಾಜಪ್ಪ,  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.