ADVERTISEMENT

ರಾಷ್ಟ್ರೀಯ ಹೆದ್ದಾರಿ 207 ಮೃತ್ಯುಕೂಪ– ಆರೋಪ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 9:56 IST
Last Updated 11 ಸೆಪ್ಟೆಂಬರ್ 2017, 9:56 IST
ದೇವನಹಳ್ಳಿ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ 207 ರ ಬೀರಸಂದ್ರ ಬಳಿಯ ರಸ್ತೆ
ದೇವನಹಳ್ಳಿ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ 207 ರ ಬೀರಸಂದ್ರ ಬಳಿಯ ರಸ್ತೆ   

ದೇವನಹಳ್ಳಿ: ಎಣಿಕೆಗೆ ಸಿಗದಷ್ಟು ಗುಂಡಿಗಳು, ಮಳೆ ನೀರು ತುಂಬಿ ಸವಾರರಿಗೆ ಗೊಂದಲ, ಅರಿಯದೆ ಗುಂಡಿಯಲ್ಲಿ ಬೀಳುತ್ತಿರುವ ದ್ವಿಚಕ್ರ ವಾಹನ ಸವಾರರು– ಇದು ದೇವನಹಳ್ಳಿ ತಾಲ್ಲೂಕಿನಿಂದ ದೊಡ್ಡಬಳ್ಳಾಪುರ ಕಡೆಯ ರಾಷ್ಟ್ರೀಯ ಹೆದ್ದಾರಿ 207 ರ ಮೃತ್ಯು ಕೂಪವಾಗುತ್ತಿರುವ ರಸ್ತೆಯ ಸದ್ಯದ ಸ್ಥಿತಿ.

ರಾಷ್ಟ್ರೀಯ ಹೆದ್ದಾರಿ 4 ರಸ್ತೆ ದಾಬಸ್‌ ಪೇಟೆಯಿಂದ ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಕೋಲಾರ ಹಾಗೂ ದೇವನಹಳ್ಳಿಯಿಂದ ಸೂಲಿಬೆಲೆ, ಹೊಸಕೋಟೆ, ಕೆ.ಆರ್‌.ಪುರ, ತಮಿಳುನಾಡಿನ ಹೊಸೂರು ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಇದನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಗಲ ಹೆಚ್ಚಿಸಲು 2011ರಲ್ಲಿ ಆಡಳಿತದಲ್ಲಿದ್ದ ಕೇಂದ್ರ ಸರ್ಕಾರ ಬಹುಕೋಟಿ ವೆಚ್ಚದ ರಸ್ತೆ ಅಭಿವೃದ್ಧಿಯನ್ನು ಕೈಗೆತ್ತಿಕೊಂಡು ಗುತ್ತಿಗೆದಾರರಿಗೆ ನೀಡಿತ್ತು.

ಭಾಗಶಃ ಕಾಮಗಾರಿ ನಡೆದು ಸ್ಥಗಿತಗೊಂಡಿದೆ. ಒಂದು ಕಡೆ ಸ್ಥಗಿತಗೊಂಡಿರುವ ಕಾಮಗಾರಿ, ಮತ್ತೊಂದೆಡೆ ಹಳೆಯ ರಸ್ತೆಯಲ್ಲಿ ಸಂಚರಿಸುವ ಬೃಹತ್‌ ಗಾತ್ರದ ಸರಕು ಸಾಗಾಣಿಕೆ ವಾಹನಗಳಿಂದ ರಸ್ತೆಯಲ್ಲಿ ಸಹಜವಾಗಿ ಡಾಂಬರ್‌ ಕಿತ್ತುಹೋಗಿದೆ.

ADVERTISEMENT

ಅವು ಬೃಹತ್‌ ಗಾತ್ರದ ಹೊಂಡಗಳಾಗಿ ಪರಿವರ್ತನೆಗೊಂಡು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ನಿತ್ಯ ಕಂಟಕವಾಗಿ ಪರಿಣಮಿಸಿದೆ ಎಂಬುದು ಸ್ಥಳೀಯರ ಆರೋಪ.

ಕಾಮಗಾರಿ ಆಂರಂಭದಲ್ಲಿ ಮೂರು ತಿಂಗಳಲ್ಲಿ ವೇಗದಲ್ಲಿ ನಡೆಯುತ್ತಿತ್ತು. ಪ್ರಸ್ತುತ ಸ್ಥಗಿತಗೊಂಡಿದೆ. ಹಳೆಯ ರಸ್ತೆಯಲ್ಲಿರುವ ಗುಂಡಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಚ್ಚುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಎಂದು ಬೀರಸಂದ್ರ ಗ್ರಾಮದ ಬೀರಪ್ಪ ದೂರಿದ್ದಾರೆ.

ಬೀರಸಂದ್ರ ಬಳಿ ಮತ್ತು ವಿಶ್ವನಾಥಪುರದ ಬಳಿಯ ರಸ್ತೆಯಲ್ಲಿ ಯಾವ ಮಟ್ಟದಲ್ಲಿ ಗುಂಡಿಗಳಿವೆ ಎಂಬುದು ಮಳೆ ಬಂದಾಗ ಚಾಲಕರಿಗೆ ಅರಿವಾಗುವುದಿಲ್ಲ. ಕಳೆದ ಒಂದು ವರ್ಷದಲ್ಲಿ ಅಂದಾಜು 68 ಕ್ಕೂ ಹೆಚ್ಚು ಅಪಘಾತವಾಗಿದೆ. ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ಅಕ್ಕಪಕ್ಕದ ಗ್ರಾಮದವರೇ ಹತ್ತುದಿನಗಳ ಹಿಂದೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಅನೇಕ ದ್ವಿಚಕ್ರ ವಾಹನ ಜಖಂ ಆಗಿವೆ ಎಂದು ಆಟೋಚಾಲಕ ಚಂದ್ರು ಹೇಳಿದ್ದಾರೆ.

ಮಹಾರಾಷ್ಟ್ರ, ಬೆಳಗಾವಿ, ದಾವಣಗೆರೆ ಮತ್ತು ಶಿವಮೊಗ್ಗ, ಚಿಕ್ಕಮಗಳೂರು, ತಿಪಟೂರು, ತುಮಕೂರು ಮಾರ್ಗವಾಗಿ ದಾಬಸ್‌ಪೇಟೆಯಿಂದ ದೇವನಹಳ್ಳಿ ಮೂಲಕ ವಿವಿಧೆಡೆ ಸಾಗುವ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ ವಾಹನಗಳು ನಗರ ಪ್ರವೇಶ ಮಾಡುವುದಿಲ್ಲ. ರಸ್ತೆ ವಿಸ್ತರಿಸದ ಕಾರಣ ದೇವನಹಳ್ಳಿಯಲ್ಲಿ ವಾಹನ ಸಂಚಾರ ಮಿತಿಮೀರುತ್ತಿದೆ ಎನ್ನುತ್ತಾರೆ ಬೆಂಗಳೂರು ಬಿಎಂಟಿಸಿ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜು.

ಇಲ್ಲಿನ ರಸ್ತೆಗಳು ಹದಗೆಟ್ಟಿವೆ. ಸೂಲಿಬೆಲೆ ಕಡೆ ಸಾಗುವ ರಸ್ತೆ ಕಿರಿದಾಗಿದೆ. ಗುಂಡಿಗಳಿಗೇನೂ ಕೊರತೆ ಇಲ್ಲ. ಗುಂಡಿಗಳನ್ನು ಪರಿಶೀಲಿಸಿ ಆಗಿಂದಾಗ ಮುಚ್ಚುವ ಕೆಲಸ ಮಾಡಬೇಕು. ವಾಹನ ಮಾಲೀಕರು ರಸ್ತೆ ತೆರಿಗೆ ಪಾವತಿಸುತ್ತಾರೆ ಎಂಬುದನ್ನು ಇಲಾಖೆ ಅರ್ಥ ಮಾಡಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.