ADVERTISEMENT

ಶಾಶ್ವತ ನೀರಾವರಿ ಸರ್ಕಾರಗಳ ನಿರ್ಲಕ್ಷ್ಯ

ನೀರಿನ ತೀವ್ರ ಬವಣೆ ಕುರಿತಂತೆ ಛಾಯಾಚಿತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 8:53 IST
Last Updated 30 ಜನವರಿ 2017, 8:53 IST
ಶಾಶ್ವತ ನೀರಾವರಿ ಸರ್ಕಾರಗಳ ನಿರ್ಲಕ್ಷ್ಯ
ಶಾಶ್ವತ ನೀರಾವರಿ ಸರ್ಕಾರಗಳ ನಿರ್ಲಕ್ಷ್ಯ   

ದೊಡ್ಡಬಳ್ಳಾಪುರ: ‘ಬಯಲು ಸೀಮೆಯ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಎಲ್ಲ ರಾಜಕೀಯ ಪಕ್ಷಗಳ ಚುನಾಯಿತ ಜನಪ್ರತಿನಿಧಿಗಳು ತಮ್ಮ ಹಕ್ಕೋತ್ತಾಯಗಳನ್ನು ಸೂಕ್ತ ವೇದಿಕೆಯಲ್ಲಿ ಮಂಡಿಸುತ್ತಿಲ್ಲ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಆಂಜನೇಯರೆಡ್ಡಿ ಹೇಳಿದರು.

ಅವರು ನಗರದ ಪ್ರವಾಸಿ ಮಂದಿರ ಆವರಣದಲ್ಲಿ ಬಯಲು ಸೀಮೆ ಜಿಲ್ಲೆಗಳಲ್ಲಿ ನೀರಿನ ಬವಣೆ ಕುರಿತ ಛಾಯಾಚಿತ್ರಗಳ ಪ್ರದರ್ಶನನಕ್ಕೆ ಚಾಲನೆ ನೀಡಿ ಮಾತನಾಡಿದರು.
2016ರ ಮಾರ್ಚ್‌ನಲ್ಲಿ ಬೆಂಗಳೂರಿಗೆ ಟ್ರ್ಯಾಕ್ಟರ್‌ ರ್‌್ಯಾಲಿ ನಡೆಸಿದಾಗ ಮುಖ್ಯಮಂತ್ರಿ ನೀಡಿದ್ದ ಎಲ್ಲ ಭರವಸೆಗಳು ಈಗ ಸುಳ್ಳಾಗಿದೆ. ಪ್ರತಿ ತಾಲ್ಲೂಕುಗಳಲ್ಲೂ ನೀರಿನ ತೀವ್ರ ಬವಣೆ ಕುರಿತಂತೆ ಛಾಯಾಚಿತ್ರಗಳ ಪ್ರದರ್ಶನ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಮತ್ತೆ ಇದೇ ಮಾರ್ಚ್‌ ವೇಳೆಗೆ ಮತ್ತೊಂದು ಬೃಹತ್‌ ರ್‌್ಯಾಲಿ ನಡೆಸುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬಯಲು ಸೀಮೆ ಜಿಲ್ಲೆಗಳ ಜನರ ಬೇಡಿಕೆಯನ್ನು ಮನವರಿಕೆ ಮಾಡಿಕೊಡಲಾಗುವುದು ಎಂದರು.

ಜಾರಿಗೆ ತಂದಿಲ್ಲ: ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನದಿಗಳ ಹೆಸರುಗಳು ಇವೆ, ಸಾಲು ಸಾಲು ಕೆರೆಗಳಿವೆ. ಆದರೆ ಯಾವುದರಲ್ಲೂ ನೀರಿಲ್ಲ. ರಾಜ್ಯ ಸರ್ಕಾರ 70 ವರ್ಷಗಳಲ್ಲಿಯೇ ಈ ಜಿಲ್ಲೆಗಳಿಗೆ ಯಾವುದೇ ನೀರಾವರಿ ಯೋಜನೆಯನ್ನು ಜಾರಿಗೆ ತಂದೇ ಇಲ್ಲ.  ಹೀಗಾಗಿ ನೀರಿನ ಬವಣೆಯಿಂದ ಈ ಜಿಲ್ಲೆಗಳ ಜನರು ಪಡುತ್ತಿರುವ ಬವಣೆಗಳನ್ನು ಎಲ್ಲ ಜನರಿಗೂ ತಿಳಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಛಾಯಾ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಶಾಶ್ವತ ನೀರಾವರಿಗಾಗಿ ಎಲ್ಲ ರೀತಿಯ ಹೋರಾಟಗಳನ್ನು ನಡೆಸಲಾಗಿದೆ. ಆದರೆ ಯಾವುದೇ ಸರ್ಕಾರಗಳು ಸಹ ಪ್ರಮಾಣಿಕ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ದೂರಿದರು.

ಕೃಷ್ಣಾ–ಪೆನ್ನಾರ್‌ ನದಿ ಜೋಡಣೆ ಯೋಜನೆಗೆ ಎಲ್ಲ ರೀತಿಯ ಅನುಮತಿಗಳು ದೊರೆತಿದ್ದರು ಸಹ ರಾಜ್ಯ ಸರ್ಕಾರ ಇದರ ಅನುಷ್ಟಾನಕ್ಕೆ ಮುಂದಾಗುತ್ತಿಲ್ಲ. ಬಯಲು ಸೀಮೆಗೆ ಪ್ರತ್ಯೇಕ ನೀರಾವರಿ ನಿಗಮ ಸ್ಥಾಪನೆ ಮಾಡಲು ಒತ್ತಾಯಿಸುತ್ತಲೇ ಬರಲಾಗುತ್ತಿದೆ. ಆದರೆ ಇದುವರೆಗೂ ಈ ಬಗ್ಗೆ ಒಂದು ಬಾರಿ ಮುಖ್ಯಮಂತ್ರಿಗಳು ಈ ಕುರಿತಂತೆ ಚರ್ಚಿಸಲು ಒಂದು ಸಭೆಯನ್ನು ಕರೆದಿಲ್ಲ. ಮಾರ್ಚ್‌ನಲ್ಲಿ ಟ್ರ್ಯಾಕ್ಟರ್‌ ರ್‌್ಯಾಲಿ ನಡೆಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಯಂತೆ ಬಯಲು ಸೀಮೆಗೆ ನೀರಾವರಿ ಸೌಲಭ್ಯಗಳಿಗಾಗಿ ತಜ್ಞರ ಸಮಿತಿ ರಚನೆ, ಯೋಜನೆಗಳ ಅನುಷ್ಠಾನಕ್ಕೆ ಸಮನ್ವಯ ಸಮಿತಿ ಈ ಎಲ್ಲವು ಸಹ ಕಾಗದದಲ್ಲಿಯೇ ಉಳಿದಿದೆ ಹೊರತು ವಾಸ್ತವದಲ್ಲಿ ಯಾವುದೂ ಜಾರಿಗೆ ಬಂದಿಲ್ಲ ಎಂದರು. 
  
ದೊಡ್ಡಬಳ್ಳಾಪುರ ತಾಲ್ಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷೆ ಕೆ.ಸುಲೋಚನಮ್ಮ ವೆಂಕಟರೆಡ್ಡಿ ಮಾತನಾಡಿ, ಪ್ರತಿ ಬಾರಿಯು ಶಾಶ್ವತ ನೀರಾವರಿ ಹೋರಾಟಗಳು ತೀವ್ರವಾದಾಗಲೆಲ್ಲ ಸರ್ಕಾರಗಳು ಭರವಸೆ ನೀಡುವ ಮೂಲಕ ಹೋರಾಟವನ್ನು ದಾರಿತಪ್ಪಿಸುವ ಕೆಲಸಗಳನ್ನೇ ಮಾಡುತ್ತ ಬರುತ್ತಿವೆ ಎಂದರು.
ನೀರಾವರಿ ಹೋರಾಟ ಸಮಿತಿ ದೊಡ್ಡಬೆಳವಂಗಲ ಹೋಬಳಿ ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ಮೂರು ವರ್ಷಗಳು ಕಳೆದರೂ ಸಹ ಕೇವಲ 50 ಕಿ.ಮೀ ಕೆಲಸವಾಗಿದೆ. ಇದೇ ವೇಗದಲ್ಲಿ ಕೆಲಸ ನಡೆದರೆ ಈ ಭಾಗಕ್ಕೆ ನೀರು ತಲುಪಲು 25 ವರ್ಷಗಳು ಬೇಕಾಗಲಿದೆ ಎಂದರು.

ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ ನಾಯ್ಕ್‌, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಹ.ರಾಮಕೃಷ್ಣ, ಕರುನಾಡ ಸೇನೆ ಅಧ್ಯಕ್ಷ ಶ್ರೀನಿವಾಸ್‌ ತೆರದಾಳ್‌, ಕರವೇ (ಪ್ರವಿಣ್‌ಶೆಟ್ಟಿ ಬಣ) ಜಿಲ್ಲಾ ಅಧ್ಯಕ್ಷ ರಾಜಘಟ್ಟ ರವಿ, ಕರವೇ (ಕನ್ನಡಿಗರ ಬಣ) ತಾಲ್ಲೂಕು ಅಧ್ಯಕ್ಷ ಕೇಶವ, ರಾಜ್ಯ ರೈತ ಸಂಘ ಮುಖಂಡರಾದ ಮುತ್ತೇಗೌಡ, ಸತೀಶ್‌, ರವಿ, ಪರಮೇಶಿ, ಟಿ.ಜಿ.ಮಂಜುನಾಥ್‌,ರೋಹಿತ್‌ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.