ADVERTISEMENT

ಶೀಘ್ರ ಲಿಂಗ ನಿರ್ಧರಿತ ಗರ್ಭಧಾರಣೆ

ಹೆಣ್ಣು ಕರು ಪಡೆಯುವ ತಂತ್ರಜ್ಞಾನ: ಬಮುಲ್‌ನಿಂದ ದೇವನಹಳ್ಳಿಯಲ್ಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 9:13 IST
Last Updated 28 ಜುಲೈ 2015, 9:13 IST

ದೇವನಹಳ್ಳಿ: ಹಾಲು ಉತ್ಪಾದಕರ ಬಹು ನಿರೀಕ್ಷಿತ ಮಿಶ್ರ ತಳಿ ಹಸುಗಳಿಗೆ ಲಿಂಗ ನಿರ್ಧರಿತ ಗರ್ಭಧಾರಣೆ  ವಿರ್ಯಾಣು ಕಡ್ಡಿಗಳ ಪರಿಚಯಕ್ಕೆ ಅತಿಶೀಘ್ರ ಚಾಲನೆ ಸಿಗಲಿದೆ ಎಂದು ಬಮುಲ್ ನಿರ್ದೇಶಕ ಬಿ.ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಇರಿಗೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2014–15 ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನೀಡುತ್ತಿದ್ದ ಹಸುಗಳ ಗರ್ಭಧಾರಣೆಗೆ ಹೆಣ್ಣು ಮತ್ತು ಗಂಡು ಕರುಗಳಲ್ಲಿ ಯಾವುದು ಎಂದು ನಿರ್ಧರಿತವಾಗುತ್ತಿರಲಿಲ್ಲ.

ಆದರೆ ಲಿಂಗ ನಿರ್ಧರಿತ ಗರ್ಭಧಾರಣೆ ಹಲವು ಸಂಶೋಧನೆ ಹಾಗೂ ಪ್ರಯೋಗಾತ್ಮಕವಾಗಿ ಸಿದ್ಧಪಡಿಸಿ ಮೊದಲ ಬಾರಿಗೆ ಬಮುಲ್ ಒಕ್ಕೂಟದಿಂದ ದೇವನಹಳ್ಳಿ ತಾಲ್ಲೂಕಿನಲ್ಲಿ ಪರಿಚಯಿಸಲು ಮುಂದಾಗಿದೆ. ಅದಕ್ಕೆ ಪೂರಕವಾಗಿ ಒಂದು ಸಾವಿರ ಲಿಂಗ ನಿರ್ಧರಿತ ಕಡ್ಡಿಗೆ ಬೇಡಿಕೆ ಇಡಲಾಗಿದೆ.

ತಲಾ ಒಂದು ಕಡ್ಡಿ ಬೆಲೆ ಉತ್ಪಾದನಾ ವೆಚ್ಚ ₹890 ಆಗಿರುವುದರಿಂದ ಕೆಎಂಎಫ್ ಮತ್ತು ಬಮುಲ್ ಹಾಗೂ ಹಾಲು ಉತ್ಪಾದಕರ ಹಿತ ಗಮನಿಸಿ ಬೆಲೆ ನಿರ್ಧರಿಸಿದ ನಂತರ ಪರಿಚಯ ಆರಂಭವಾಗಲಿದೆ. ಪ್ರತಿಶತ ಶೇಕಡ 90 ರಷ್ಟು ಹೆಣ್ಣುಕರು ಪಡೆಯುವುದರ ಉದ್ದೇಶದ ಜತೆಗೆ ಮುಂದಿನ ಪೀಳಿಗೆಯಲ್ಲಿ ಹಾಲಿನ ಉತ್ಪಾದನೆ ಮತ್ತು ಹೆಣ್ಣು ಸಂತತಿ ಅಭಿವೃದ್ಧಿಗೊಳಿಸಿ ಹೈನು ಉದ್ಯಮ ವಿಸ್ತರಿಸುವ ಗುರಿ ಇದೆ ಎಂದರು.

ಶಿಬಿರ ಕಚೇರಿ ಉಪವ್ಯವಸ್ಥಾಪಕ ಗಂಗಯ್ಯ ಮಾತನಾಡಿ, ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳದ ಜತೆಗೆ ಗುಣಮಟ್ಟ ಕಾಯ್ದುಕೊಳ್ಳಬೇಕು ಉತ್ಪಾದನೆಗೆ ಅವಶ್ಯವಿದ್ದಲ್ಲಿ ಶಿಬಿರವತಿಯಿಂದ ತರಬೇತಿ ನೀಡಲಾಗುವುದು ಎಂದರು.

ಉಪವ್ಯವಸ್ಥಾಪಕ (ಪ.ವೈ) ಡಾ.ಶಿವಾಜಿನಾಯ್ಕ ಮಾತನಾಡಿ, ಮಿಶ್ರ ತಳಿಯ ಹಸುಗಳಲ್ಲಿ ಕಾಡುತ್ತಿರುವ ಕೆಚ್ಚಲು ಬಾವುವಿಗೆ ಕಾರಣಗಳು ಹಾಗೂ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿ ಸ್ಥಳಿಯವಾಗಿ ಲಭ್ಯವಾಗುವ ಲೋಳೆ ರಸ ಮತ್ತು ಅರಿಶಿನ ಹಾಗೂ ಸುಣ್ಣದ ಮಿಶ್ರಣಗಳಿಂದ ಈ ರೋಗ ತಡೆಗಟ್ಟಲು ಇದೊಂದು ಸರಳ ವಿಧಾನವಾಗಿದೆ.

ಶಿಬಿರದಲ್ಲಿ ಸಾಮಾನ್ಯ ಸಭೆಯಲ್ಲಿ ಉತ್ಪಾದಕರು ಭಾಗವಹಿಸಿದರೆ ಪ್ರತಿಯೊಂದು ಮಾಹಿತಿ ಸಿಗಲಿದೆ ಎಂದರು.  ಎಂಪಿಸಿಎಸ್ ಅಧ್ಯಕ್ಷ ಪ್ರಭಾಕರ್ ಮಾತನಾಡಿದರು. ಕಾರ್ಯನಿರ್ವಹಣಾಧಿಕಾರಿ ಚನ್ನಕೇಶವ ಅವರು ವಾರ್ಷಿಕ ವರದಿ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.