ADVERTISEMENT

‘ಸರ್ವತೋಮುಖ ಅಭಿವೃದ್ಧಿಗೆ ಸಂಕಲ್ಪ ಮಾಡಿ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 11:17 IST
Last Updated 14 ಜುಲೈ 2017, 11:17 IST

ವಿಜಯಪುರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ, ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು  ಮುಖ್ಯಮಂತ್ರಿ ಅವರಿಗೆ ಮುಖಂಡ ಸಿ. ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಬೆಂಗಳೂರಿನ ಗೆದ್ದಲಹಳ್ಳಿಯ ಸ್ವಗೃಹದಲ್ಲಿ ಕಾಂಗ್ರೆಸ್ ಮುಖಂಡ ಬಿ.ಚೇತನ್ ಗೌಡ ನೇತೃತ್ವದಲ್ಲಿ ಬುಧವಾರ ವಿಜಯಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿಯ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ವಿಜಯಪುರವನ್ನು 1984 ರಲ್ಲೆ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆನ್ನುವ ಒತ್ತಾಯವನ್ನು ಸರ್ಕಾರದ ಮುಂದೆ ಮಂಡಿಸಲಾಗಿತ್ತು. ನೂತನ ತಾಲ್ಲೂಕುಗಳ ರಚನೆಗಾಗಿ ನೇಮಕ ಮಾಡಲಾಗಿದ್ದು ಹುಂಡೇಕರ್ ಸಮಿತಿಯು ತಾಲ್ಲೂಕು ರಚನೆ ಮಾಡುವ ಬಗ್ಗೆ ಅಗತ್ಯವಾಗಿದ್ದ ಅಂಕಿ ಅಂಶಗಳನ್ನು ನೀಡಿತ್ತು ಎಂದರು.

ADVERTISEMENT

‘ಇಂದು ದಿನನಿತ್ಯ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸುವ ಮೂಲಕ ಸರ್ಕಾರಕ್ಕೆ ಅಗತ್ಯವಾಗಿರುವ ವರಮಾನವು ಈ ಭಾಗದಿಂದ ಸಲ್ಲಿಕೆಯಾಗುತ್ತಿದೆ’ ಎಂದರು. ಹಿರಿಯ ಕಾಂಗ್ರೆಸ್ ಮುಖಂಡ ಬಿ.ಚೇತನ್ ಗೌಡ ಮಾತನಾಡಿ, ವಿಜಯಪುರದ ಮೂಲಕ ಬೆಂಗಳೂರು, ಹೈದ್ರಾಬಾದ್, ತಿರುಪತಿ, ಮುಂತಾದ ಕಡೆಗಳಿಗೆ ಉತ್ತಮ ಸಂಪರ್ಕ ಕಲ್ಪಿಸುವಂತಹ ರಸ್ತೆಯ ಸಂಪರ್ಕವಿದೆ. ಈ ಪಟ್ಟಣ ತಾಲ್ಲೂಕು ಕೇಂದ್ರಕ್ಕಿಂತಲೂ ವೇಗವಾಗಿ ಬೆಳವಣಿಗೆಯಾಗುತ್ತಿದೆ ಎಂದರು.

ವಿಜಯಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿಯ ಸಂಚಾಲಕ ಬಿ.ಕೆ.ಶಿವಪ್ಪ ಮಾತನಾಡಿ, ದೇವನಹಳ್ಳಿಯನ್ನು ಈಗಾಗಲೇ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಲಾಗಿದ್ದು, ಸ್ವಲ್ಪ ದಿನಗಳಲ್ಲೆ ಜಿಲ್ಲಾಡಳಿತ ಭವನ ಕಾರ್ಯನಿರ್ವಹಿಸಲು ಸಿದ್ಧಗೊಳ್ಳುತ್ತಿದೆ ಎಂದರು.

ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ವಿಚಾರದಲ್ಲಿ ಗೊಂದಲಗಳಿದ್ದವು. ವಿಜಯಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ, ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಪುರಸಭಾ ಸದಸ್ಯರುಗಳು, ಸೇರಿದಂತೆ ಎಲ್ಲರ ಒಕ್ಕೋರಲಿನ ಒತ್ತಾಯವಾಗಿದೆ.

ಇಲ್ಲಿನ ಜನರು ಕಂದಾಯ ಇಲಾಖೆಯು ಸೇರಿದಂತೆ ಬೇರೆ ಬೇರೆ ಇಲಾಖೆಗಳಲ್ಲಿನ ತಮ್ಮ ಕೆಲಸ ಕಾರ್ಯಗಳಿಗಾಗಿ ದಿನಗಟ್ಟಲೇ ವ್ಯರ್ಥಮಾಡಿಕೊಳ್ಳಬೇಕಾದಂತಹ ಸ್ಥಿತಿ ಇದ್ದು, ಈ ಸ್ಥಿತಿ ತಪ್ಪಬೇಕಾದರೆ ಉಪವಿಭಾಗಾಧಿಕಾರಿಗಳ ಕಚೇರಿ ವಿಜಯಪುರಕ್ಕೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾಜಿ ಎಸ್.ಸಿ. ಘಟಕದ ಅಧ್ಯಕ್ಷ ಚಿನ್ನಪ್ಪ, ಹೋರಾಟಗಾರ ಜಿ.ಟಿ. ಸದಾಶಿವರೆಡ್ಡಿ, ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕನ್ನಡ ಆಂಜಿನಪ್ಪ, ಜ್ಯೋತಿ ಬಸವರಾಜ್, ಮಾಜಿ ಪುರಸಭಾ ಸದಸ್ಯ ಟಿಲ್ಲರ್ ಮಂಜುನಾಥ್ ಹಾಜರಿದ್ದರು.

ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಅಧ್ಯಕ್ಷ ಎಸ್. ಮಂಜುನಾಥ್, ತೇಜಾ ಶ್ರೀನಿವಾಸ್, ಕರವೇ ಮಹೇಶ್ ಕುಮಾರ್, (ಪ್ರವೀಣ್ ಕುಮಾರ್ ಶೆಟ್ಟಿ ಬಣ), ವಿ.ರಾ. ಶಿವಕುಮಾರ್ (ಟಿ.ಎ. ನಾರಾಯಣಗೌಡರ ಬಣ) ದೇವರಾಜಪ್ಪ, ಮಾನವ ಹಕ್ಕುಗಳ ಪ್ರಚಾರ ಸಮಿತಿ ತಾಲ್ಲೂಕು ಅಧ್ಯಕ್ಷ ರಾಜಗೋಪಾಲ್, ಮುನಿಕೃಷ್ಣಪ್ಪ ಪಾಲ್, ಮುನಿರಾಜು, ವೆಂಕಟೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.