ADVERTISEMENT

ಸಾವಿರಾರು ರೈತರಿಂದ ಸಾಲಮನ್ನಾಕ್ಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 10:01 IST
Last Updated 9 ಸೆಪ್ಟೆಂಬರ್ 2017, 10:01 IST

ದೊಡ್ಡಬಳ್ಳಾಪುರ: ರೈತರ ಸಾಲ ಮನ್ನಾ ಚಳವಳಿ ಅಂಗವಾಗಿ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಸಾವಿರಾರು ರೈತರು ಸಾಲ ಮನ್ನಾಗೆ ಒತ್ತಾಯಿಸಿ ತಹಶೀಲ್ದಾರ್‌ ಮೂಲಕ ಅರ್ಜಿ ಸಲ್ಲಿಸಿದರು. ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಅರ್ಜಿಗಳನ್ನು ಸಲ್ಲಿಸಲು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕರೆ ನೀಡಿತ್ತು.

ತಾಲ್ಲೂಕು ಕಚೇರಿಯಲ್ಲಿ ನೂಕುನುಗ್ಗಲು ಉಂಟಾಗುವುದನ್ನು ತಡೆಯಲು ತಾಲ್ಲೂಕು ಕಚೇರಿ ಆವರಣದಲ್ಲಿ ಅರ್ಜಿ ಸ್ವೀಕೃತಿಗಾಗಿ ಪ್ರತ್ಯೇಕ ಕೇಂದ್ರಗಳನ್ನು ತೆರೆಯಲಾಗಿತ್ತು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಕೆ.ಪಿ.ಕುಮಾರ್ ಮಾತನಾಡಿ, ಮಳೆ ಕೊರತೆಯಿಂದಾಗಿ ಬರಗಾಲದಿಂದ ರೈತರು ಬೆಳೆ ಬೆಳೆಯುವುದೇ ಕಷ್ಟವಾಗಿದೆ. ಕೃಷಿ ಪರಿಕರಗಳ ಮೇಲೂ ಸರ್ಕಾರ ತೆರಿಗೆ ಹೇರಿದ್ದು, ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಆಗಸ್ಟ್ 30 ರಂದು ಪ್ರತಿಯೊಬ್ಬ ರೈತರಿಂದ ವೈಯಕ್ತಿಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ರೈತರ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು. ಅಂದು ಅರ್ಜಿ ಸಲ್ಲಿಸದೇ ಇರುವ ರೈತರು ಇಂದು ತಾಲ್ಲೂಕು ಕಚೇರಿ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದರು.

ADVERTISEMENT

ಹೆಚ್ಚಿನ ಸಾಲು ಇರುವುದರಿಂದ ಸೋಮವಾರವೂ ಅರ್ಜಿ ಸ್ವೀಕರಿಸಲು ವ್ಯವಸ್ಥೆ ಮಾಡುವಂತೆ ತಾಲ್ಲೂಕು ಆಡಳಿತವನ್ನು ಕೋರಲಾಗಿದೆ. ಪ್ರತಿಯೊಬ್ಬ ರೈತರಿಂದ ವೈಯಕ್ತಿಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ರೈತರ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸಲಾಗುತ್ತಿದೆ. ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ರವಾನಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಸನ್ನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎನ್.ಸತೀಶ್, ರೈತ ಸಂಘದ ಪದಾಧಿಕಾರಿಗಳಾದ ವಸಂತಕುಮಾರ್, ಕಾಡನೂರು ಮೂರ್ತಿ, ಹರೀಶ್, ರಂಗಪ್ಪ ಬಿಸುವನಹಳ್ಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.