ADVERTISEMENT

ಕಚೇರಿಗಳಲ್ಲಿ ಮಹಿಳಾ ಸಮಿತಿ ರಚಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 10:04 IST
Last Updated 16 ಜುಲೈ 2017, 10:04 IST

ಬೆಳಗಾವಿ: ‘ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ (ತಡೆ, ನಿಷೇಧ ಹಾಗೂ ಪರಿಹಾರ) ಕಾಯ್ದೆ – 2013ರಡಿ’ ಮಹಿಳೆಯರು ಕೆಲಸ ಮಾಡುವ ಕಚೇರಿಗಳಲ್ಲಿ ಸಮಿತಿಗಳನ್ನು ರಚಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಹಿಳೆಯರು ಇರುವ ಹಾಗೂ 10ಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಸಮಿತಿಗಳನ್ನು ರಚಿಸಬೇಕೆಂದು 2013ರ ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ. ಆದರೆ, ಇದುವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಇಂತಹ ಒಂದೂ ಸಮಿತಿ ರಚನೆಯಾಗಿಲ್ಲ ಎಂದು ವಿಷಾದಿಸಿದರು.

ಕಚೇರಿಯ ಸಿಬ್ಬಂದಿ ಹಾಗೂ ಎನ್‌ಜಿಒ ಸದಸ್ಯರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಬೇಕು. ಇದರ ಅಧ್ಯಕ್ಷತೆಯನ್ನು ಮಹಿಳೆಯರಿಗೆ ನೀಡಬೇಕು. ಕಚೇರಿಗಳಲ್ಲಿ ಏನಾದರೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದರೆ, ಮಹಿಳೆಯರು ಮುಕ್ತವಾಗಿ ಈ ಸಮಿತಿ ಮುಂದೆ ತಮ್ಮ ದೂರನ್ನು ದಾಖಲು ಮಾಡಲು ಅವಕಾಶವಿರಬೇಕು ಎಂದರು.
ಸಮಿತಿಯನ್ನು ರಚಿಸದಿದ್ದರೆ ಕಚೇರಿಯ ಮುಖ್ಯಸ್ಥರಿಗೆ ₹50,000 ವರೆಗೆ ದಂಡ ವಿಧಿಸಬಹುದಾಗಿದೆ. ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್‌ ಕೂಡ ಆದೇಶ ನೀಡಿತ್ತು. ಈ ನಿಟ್ಟಿನಲ್ಲಿ ಸಮಿತಿ ರಚಸದೇ ಇರುವುದು ನ್ಯಾಯಾಂಗ ನಿಂದನೆ ಕೂಡ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕಾಲಮಿತಿಯಲ್ಲಿ ಇತ್ಯರ್ಥವಾಗಿಲ್ಲ: ಅತ್ಯಾಚಾರ ಪ್ರಕರಣಗಳನ್ನು ಐದು ತಿಂಗಳಿನಲ್ಲಿ ಹಾಗೂ ಪೋಕ್ಸೊ ಪ್ರಕರಣಗಳನ್ನು ಒಂದು ವರ್ಷದಲ್ಲಿ ಇತ್ಯರ್ಥಪಡಿಸಬೇಕೆಂದು ಕಾನೂನು ಹೇಳುತ್ತದೆ. ಆದರೆ, ರಾಜ್ಯದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ವಿಚಾರಣೆ ಕಾಲಮಿತಿಯೊಳಗೆ ಪೂರ್ಣಗೊಳ್ಳುತ್ತಿಲ್ಲ ಎಂದು ಉಗ್ರಪ್ಪ ವಿಷಾದಿಸಿದರು.
ರಾಜ್ಯದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿನ್ನೆ ಮೊನ್ನೆದಲ್ಲ. 70 ವರ್ಷದ ಸ್ವಾತಂತ್ರ್ಯದ ನಂತರವೂ ಅವರಿಗೆ ನ್ಯಾಯ ದೊರಕಿಸಿಕೊಡದಿರುವುದು ವಿಪರ್ಯಾಸದ ಸಂಗತಿ ಎಂದರು.

ಜಿಲ್ಲಾಧಿಕಾರಿ ಎನ್‌.ಜಯರಾಮ್‌ ಮಾತನಾಡಿ,  37 ಇಲಾಖೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದೇವೆ. ಇನ್ನು ಮುಂದೆ ಸಭೆಯ ಸೂಚನೆಯಂತೆ ತಾಲ್ಲೂಕು ಮಟ್ಟದ ಕಚೇರಿಗಳಲ್ಲೂ ಸಮಿತಿ ರಚಿಸಲಾಗುವುದು ಎಂದರು.

ಸಿಇಒ ತರಾಟೆ: ನರೇಗಾ ಯೋಜನೆಯಡಿ ಅರಣ್ಯೀಕರಣ ಮಾಡಲು ಎಷ್ಟು ಅನುದಾನ ಇದೆ ಎನ್ನುವುದನ್ನು ತಿಳಿಸುವಲ್ಲಿ ವಿಫಲರಾದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್‌ ಆರ್‌. ಅವರನ್ನು ಉಗ್ರಪ್ಪ ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಆರ್‌. ರವಿಕಾಂತೇಗೌಡ ಮಾತನಾಡಿ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಹಾಗೂ ಡಿಎನ್‌ಎ ಸಂಬಂಧಿಸಿದ ವರದಿಗಳು ವಿಳಂಬವಾಗಿ ನಮ್ಮ ಕೈಸೇರುತ್ತವೆ. ಹೀಗಾಗಿ ಚಾರ್ಜ್‌ಶೀಟ್‌ ಸಲ್ಲಿಸಲು ವಿಳಂಬವಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.

ಮಹಿಳಾ ದೌರ್ಜನ್ಯ ನಿಯಂತ್ರಿಸುವ ಸಮಿತಿ ಸದಸ್ಯ ಕೆ.ಬಿ.ಶಾಣಪ್ಪ, ಶರಣಪ್ಪ ಮಟ್ಟೂರ,  ಲೀಲಾ ಸಂಪಿಗೆ,  ಎಚ್‌. ಆರ್‌.ರೇಣುಕಾ, ಪ್ರಭಾ, ಜ್ಯೋತಿ, ಕೆ. ಎಸ್‌.ವಿಮಲಾ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ ಶಶಿಧರ ಕುರೇರ, ನಗರ ಪೊಲೀಸ್‌ ಆಯುಕ್ತ ಟಿ.ಜಿ. ಕೃಷ್ಣಭಟ್, ಡಿಸಿಪಿ ಅಮರನಾಥ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಉಮಾ ಸಾಲಿಗೌಡರ, ಬಿಮ್ಸ್ ನಿರ್ದೇಶಕ ಕಳಸ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.