ADVERTISEMENT

‘ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಸಲ್ಲದು’

ಚನ್ನಮ್ಮನ ಕಿತ್ತೂರು ಬಳಿಯ ತಿಗಡೊಳ್ಳಿಯಲ್ಲಿ 5ದಿನ ಪಂಚಕಲ್ಯಾಣ ಮಹೋತ್ಸವ ಸಡಗರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:28 IST
Last Updated 8 ಫೆಬ್ರುವರಿ 2017, 9:28 IST

ಚನ್ನಮ್ಮನ ಕಿತ್ತೂರು: ‘ದೇವರ ಹೆಸರಿನಲ್ಲಿ ಜಾತ್ರೆ ಮಾಡಿ ಸಂತೋಷ ಪಡುತ್ತೇವೆ. ಆದರೆ ಅದೇ ದೇವರ ಹೆಸರಲ್ಲಿ ಮೂಕ ಪ್ರಾಣಿಗಳ ಬಲಿ ಕೊಡುವುದು ಸರಿಯಲ್ಲ, ಇಂಥ ಮೌಢ್ಯಾಚರಣೆ ತಪ್ಪಬೇಕಾಗಿದೆ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜ­ಗುಣಾನಂದ ಸ್ವಾಮೀಜಿ ಬಯಸಿದರು.

ತಾಲ್ಲೂಕಿನಲ್ಲಿ ತಿಗಡೊಳ್ಳಿ ಗ್ರಾಮ­ದಲ್ಲಿ ಭಗವಾನ್ 1008 ಶಾಂತಿನಾಥ ತೀರ್ಥಂಕರರ ಪಂಚಕಲ್ಯಾಣ ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಣ್ಣೆದುರಿಗೆ ಕಾಣುವ ಮನುಷ್ಯನ ಪ್ರೀತಿಸಲು ಹೋಗುವುದಿಲ್ಲ. ಆದರೆ ಕಾಣದ ದೇವರನ್ನು ಪ್ರೀತಿಸಲು ಹೋಗುತ್ತೇವೆ. ಇದು ಮಾನವನ ನಡೆ­ಯಾಗಿದ್ದು, ಕಣ್ಣಿಗೆ ಕಾಣುವ ಮನುಷ್ಯ­ನನ್ನು ಪರಸ್ಪರ ಪ್ರೀತಿ, ಗೌರವದಿಂದ ಕಾಣುವ ಗುಣ ಬೆಳೆಯಬೇಕಾಗಿದೆ’ ಎಂದರು.

‘ಜೈನ ಮುನಿಗಳು ತುಂಬಾ ಕಠೋರವಂತರು. ಅವರ ವೃತವಂತೂ ಮತ್ತಷ್ಟು ಕಠಿಣ. ಅಂಥ ಗಟ್ಟಿತನ, ನಿಷ್ಠುರತೆ ಇತರ ಜಾತಿ, ಜನಾಂಗದ ಸ್ವಾಮೀಜಿಗಳಲ್ಲಿ ಬರಬೇಕಿದೆ’ ಎಂದು ಹೇಳಿದರು.

ಸಿದ್ಧಸೇನ ಮಹಾರಾಜರು ಮಾತನಾಡಿ, ‘ನಡೆದಾಡುವ ಭೂಮಿಗೆ ಮತ್ತು ಸೇವಿಸುವ ಗಾಳಿಗೆ ಅಹಂಕಾರದ ಸೋಂಕಿರುವುದಿಲ್ಲ, ಆದರೆ ಮನುಷ್ಯನಲ್ಲಿದೆ. ಇದನ್ನು ತೊರೆದು ಆತ ನೆಮ್ಮದಿಯಿಂದ ಬಾಳಬೇಕು’ ಎಂದು ಸಲಹೆ ನೀಡಿದರು.

‘ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ ಭಾವನೆಗಳನ್ನು ಬಿಟ್ಟು ಬದುಕಿದರೆ ಮಹಾವೀರ ತೀರ್ಥಂಕರರು ಆಗುತ್ತಾರೆ. ಅದನ್ನು ಬಿಟ್ಟು ಎಲ್ಲಿಗೋ ತೆರಳಿ ಮುಡಿಕೊಟ್ಟು ಬಂದರೆ ಆಗುವುದಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

ಅಥಣಿ ತಾಲ್ಲೂಕಿನ ಸತ್ತಿ ಶ್ರೀಮಠದ ಮಲ್ಲಿಕಾರ್ಜುನ ದೇವರು, ಶುಭಂ ಭೈಯಾಜಿ, ವೃಷಭಸೇನ ಭೈಯಾಜಿ,  ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಹಾಂತೇಶ ದೊಡಗೌಡರ, ವಿ.ಕೆ. ಕಿವಡಸನ್ನವರ, ಈರಣ್ಣ ಮಾರಿಹಾಳ, ಜಯಪಾಲ ಸಾವಂತ, ದೇವೇಂದ್ರ ಪಾಟೀಲ, ಸುಕುಮಾರ ಪಾಟೀಲ, ಭೂಪಾಲ ಹಿತ್ತಲಕೇರಿ, ತವನಪ್ಪ ಹಿತ್ತಲಕೇರಿ, ಬಸವರಾಜ ಶಿರಗಾಪುರ, ಕಲ್ಲಪ್ಪ ಕ್ಯಾತನವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.