ADVERTISEMENT

ಪಕ್ಷಾಧಾರಿತ ಚುನಾವಣೆ ನಡೆಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 7:48 IST
Last Updated 4 ಜುಲೈ 2015, 7:48 IST

ಬೆಳಗಾವಿ: ಗ್ರಾಮ ಪಂಚಾಯ್ತಿಗೆ ಪಕ್ಷಾಧಾರಿತ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಕೆಜೆಪಿ ಸದಸ್ಯ ಬಿ.ಆರ್‌. ಪಾಟೀಲ ವಿಧಾನಸಭೆಯಲ್ಲಿ ಶುಕ್ರವಾರ ಆಗ್ರಹಿಸಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಮತ್ತು ಕೃಷಿ ಇಲಾಖೆಗಳ ಬೇಡಿಕೆ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ಗ್ರಾಮ ಮಟ್ಟದಲ್ಲಿ ನಡೆಯುವ ಚುನಾವಣೆಗಳನ್ನು ಪಕ್ಷಾತೀತ ಎಂದು ಕರೆದರೂ ಪಕ್ಷಗಳ ಪಾತ್ರ ಇರುತ್ತದೆ. ಪಕ್ಷಗಳನ್ನು ಪ್ರತಿನಿಧಿಸು ವವರೇ ಇರುತ್ತಾರೆ. ಅದ್ದರಿಂದಾಗಿ ಚುನಾವಣೆಯನ್ನು ಅಧಿಕೃತವಾಗಿ ಪಕ್ಷಾಧಾರಿತ ಎಂದು ಘೋಷಿಸಿದರೆ ಒಳಿತು ಎಂದು ಅವರು ಅಭಿಪ್ರಾಯಪಟ್ಟರು.

ಗ್ರಾಮೀಣ ಪಂಚಾಯ್ತಿ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಅನೇಕ ಗ್ರಾಮಗಳಲ್ಲಿ ಸದಸ್ಯ ರನ್ನು ತೀರ್ಥಯಾತ್ರೆಗೆ ಕರೆದೊಯ್ಯ ಲಾಗಿದೆ ಎಂದು ಹೇಳಿದರು. ಈ ಸಂದರ್ಭ ಮಧ್ಯ ಪ್ರವೇಶಿಸಿದ ಕೆ.ಎಸ್‌. ಪುಟ್ಟಣ್ಣಯ್ಯ, ಯಾವ ತೀರ್ಥ ಯಾತ್ರೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಪಾಟೀಲ, ‘ನನಗೆ ಗೊತ್ತಿರುವುದು ಕಾಶಿ, ರಾಮೇಶಾ್ವರ ತೀರ್ಥಯಾತ್ರೆ ಮಾತ್ರ’ ಎಂದರು.

ಗ್ರಾಮ ಪಂಚಾಯ್ತಿ ಚುನಾವಣೆ ಸುಧಾರಣೆಗಾಗಿ ಕೆ.ಆರ್‌. ರಮೇಶಕುಮಾರ್‌ ನೇತೃತ್ವದ ಸಮಿತಿ ಸಲ್ಲಿಸಿದ ವರದಿಯ ಶಿಫಾರಸುಗಳನ್ನು ಸಮಗ್ರವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಕೊರಿದ ಅವರು, ಚುನಾವಣೆ ವ್ಯವಸ್ಥೆಯಿಂದಾಗಿ ಗ್ರಾಮಗಳಲ್ಲಿ ದ್ವೇಷ, ಅಸೂಯೆ ಹೆಚ್ಚುತ್ತಿದೆ. ಅಭ್ಯರ್ಥಿಗಳು ಗೆಲುವಿಗೆ ಸಾಕಷ್ಟು ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಗ್ರಾಮ ಪಂಚಾಯ್ತಿಗಳು ವರ್ಗ, ಲಿಂಗ ಮತ್ತು ಸಮುದಾಯದ ಆಧಾರ ದಲ್ಲಿ ಕೆಲವೇ ಕೆಲವರ ಕಪಿಮುಷ್ಠಿಯಲ್ಲಿ ಸಿಲುಕಿವೆ. ಜನರ ಸಂಸತ್ತು ಎಂದು ಕರೆಸಿಕೊಳ್ಳುವ ಗ್ರಾಮ ಸಭೆಗಳಿಗೆ ಅರ್ಥವೇ ಇಲ್ಲದಂತಾಗಿದೆ. ಜನರೆಲ್ಲ ಜಮೀನಿಗೆ ಕೆಲಸಕ್ಕೆ ಹೋದಾಗ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯು ವವರನ್ನು ಸೇರಿಸಿ ಗ್ರಾಮ ಸಭೆ ನಡೆಸುವ ಅಧಿಕಾರಿಗಳು, ಕಾಟಾಚಾರಕ್ಕೆ ಸಭೆ ನಡೆಸುತ್ತಾರೆ. ಸಭೆಯ ನಡಾವಳಿಯನ್ನು ಪಿಡಿಓ, ಕಾರ್ಯದರ್ಶಿಯವರೇ ಸಲ್ಲಿಸುತ್ತಾರೆ ಎಂದು ಅವರು ತಿಳಿಸಿದರು.

ಬಡವರಿಗೆ ದನಿ ಇಲ್ಲದಂತಾಗಿದೆ. ಮಹಿಳೆಯರ ಸಮಸ್ಯೆಗಳಿಗೆ ಸ್ಪಂದನೆಯೇ ಇಲ್ಲದಂತಾಗಿದೆ. ಅಪ್ಪ, ಅಮ್ಮ ಮತ್ತು ಮಗನಿಗೆ ಮನೆ ನೀಡಿದ ನಿದರ್ಶನಗಳೂ ಇವೆ. ಕೆಲವೆಡೆ ಮಹಡಿ ಮನೆ ಕಟ್ಟಲೂ ಸರ್ಕಾರ ನೆರವು ನೀಡಿದೆ. ಈ ಕಾರಣ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯ ಸಂದರ್ಭ ನಿಷ್ಪಕ್ಷಪಾತ ಧೋರಣೆ ಅನುಸರಿಸುವಂತಾಗಬೇಕು ಎಂದು ಅವರು ತಿಳಿಸಿದರು.

ಹಳ್ಳಿಗಳಲ್ಲೂ ನೀರನ್ನು ಮಾರಾಟ ಮಾಡಲಾಗುತ್ತಿದೆ. ಅಂತರ್ಜಲ ಹೆಚ್ಚಳಕ್ಕೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಕೃಷಿ ಹೊಂಡಗಳನ್ನು ಕೇವಲ ದಾಖಲೆಯಲ್ಲಿ ನಿರ್ಮಿಸಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಪೂರೈಸುವ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಬಹುಗ್ರಾಮ ಯೋಜನೆ: ಕೆಲವು ವರ್ಷ ಗಳ ಹಿಂದೆ ಆರಂಭವಾಗಿರುವ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಅನುಷ್ಠಾನವೂ ಸಮರ್ಪಕವಾಗಿ ಆಗಿಲ್ಲ ಎಂದು ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡ ದೂರಿದರು.

ಯೋಜನೆಗಾಗಿ ಕೋಟ್ಯಂತರ ರೂಪಾಯಿ ಮಂಜೂರು ಮಾಡಿದ್ದರೂ ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವೆಡೆ ಕಳಪೆ, ಅವೈಜ್ಞಾನಿಕವಾಗಿ ಕಾಮಗಾರಿ ಪೂರ್ಣ ಗೊಳಿಸಲಾಗಿದೆ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಓಗಳು ಲಭ್ಯವಾಗುತ್ತಿಲ್ಲ. ಎರಡು, ಮೂರು ಪಂಚಾಯ್ತಿಯ ಜವಾಬ್ದಾರಿ ವಹಿಸಿರುವುದರಿಂದ ಅವರು ಜನರ ಕೈಗೆ ಸಿಗದಂತಾಗಿದೆ ಎಂದ ಅವರು ಕೂಡಲೇ ಅಗತ್ಯ ಸಂಖ್ಯೆಯ ಸಿಬ್ಬಂದಿ ನೇಮಿಸಬೇಕು ಎಂದು ಆಗ್ರಹಿಸಿದರು.

ವಿಷಪೂರಿತ ಆಹಾರ: ಕೃಷಿಕರು ಹೆಚ್ಚು ಇಳುವರಿ ಆಸೆಗಾಗಿ ಅತಿಯಾದ ರಾಸಾಯನಿಕ ಬಳಸುತ್ತಿರುವುದರಿಂದ ಆಹಾರ ಸಂಪೂರ್ಣ ವಿಷಪೂರಿತ ಆಗುತ್ತಿದೆ. ಚಿಕ್ಕ ಮಕ್ಕಳಿಗೆ ಪೌಷ್ಟಿಕ ಆಹಾರ ಎಂದು ಕೊಡುವ ಹಣ್ಣು ವಿಷವನ್ನೇ ಒಳಗೊಂಡಿದೆ. ಸರ್ಕಾರ ಕೂಡಲೇ ಈ ಕುರಿತು ಗಮನ ಹರಿಸಬೇಕು ಎಂದು ಕಾಂಗ್ರೆಸ್‌ನ ಜೆ.ಟಿ. ಪಾಟೀಲ ಕೋರಿದರು.

ಅನಕ್ಷರಸ್ಥ ರೈತರೂ ಕೀಟನಾಶಕಕ್ಕೆ ಮಾರು ಹೋಗಿದ್ದು, ಕಾಯಿ ಬೆಳೆಸಲೂ ರಾಸಾಯನಿಕ, ಕಾಯನ್ನು ಹಣ್ಣಾಗಿಸಲೂ ರಾಸಾಯನಿಕ ಬಳಸಲಾಗುತ್ತಿದೆ. ವಿಷಕಾರಕ ಆಹಾರ ಪದಾರ್ಥ ಸೇವೆನೆಯಿಂದಾಗಿ ವಿವಿಧ ರೀತಿಯ ಮಾರಕ ಕಾಯಿಲೆಗಳು ಹೆಚ್ಚುತ್ತಿದ್ದು, ಜನ ಉಣ್ಣುವ ಹಾಲು, ತುಪ್ಪದಲ್ಲೂ ವಿಷ ಸೇರಿಕೊಂಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.