ADVERTISEMENT

ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 6:40 IST
Last Updated 15 ಸೆಪ್ಟೆಂಬರ್ 2017, 6:40 IST

ರಾಮದುರ್ಗ: ಪಟ್ಟಣದಲ್ಲಿ ಬುಧವಾರ ಇಡೀ ರಾತ್ರಿ ಬಿದ್ದ ಸರಾಸರಿ 44.25 ಮಿ.ಮೀ. ಮಳೆಯಿಂದಾಗಿ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ತಾಲ್ಲೂಕಿನ ರೈತನ ಮುಖದಲ್ಲಿ ಮಂದಹಾಸ ಅರಳಿದೆ.

ಬುಧವಾರ ರಾತ್ರಿ 11–30ರಿಂದ ಆರಂಭಗೊಂಡ ಜಡಿಮಳೆಯು ಬೆಳಗಿನ 4ರ ತನಕ ಎಡಬಿಡದೆ ಸುರಿದಿದೆ. ಮಳೆಯ ರಭಸಕ್ಕೆ ಸೇತುವೆ ನಿಮಾರ್ಣದ ಸಲುವಾಗಿ ಮಗ್ಗುಲಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಹಲಗತ್ತಿ ಸಮೀಪ ಸಂಪೂರ್ಣ ಕಿತ್ತು ಹೋಗಿದೆ. ರಾತ್ರಿಯಿಂ ದಲೇ ರಾಮದುರ್ಗ ಬಾದಾಮಿ ರಸ್ತೆ ಸಂಚಾರವೇ ನಿಂತು ಹೋಗಿತ್ತು. ಬಹುತೇಕ ಚರಂಡಿಗಳು ತುಂಬಿ ಹರಿಯುತ್ತಿದ್ದುದು ಕಂಡು ಬಂದಿತು.

ಈ ವರ್ಷದಲ್ಲಿಯೇ ಭಾರಿ ಮಳೆ ಬುಧವಾರ ರಾತ್ರಿ ಸುರಿದ್ದರಿಂದ ಪಟ್ಟಣದ ನೂತನ ಬಸ್‌ ನಿಲ್ದಾಣವು ಅಕ್ಷರಶಃ ನೀರಿನ ಮಡುವಿನಲ್ಲಿ ನಿಂತಿತ್ತು. ಅದರಲ್ಲಿಯೇ ಬಸ್‌ಗಳನ್ನು ಚಲಾಯಿಸಲು ಚಾಲಕರು ಪರದಾಡುತ್ತಿದ್ದರು.

ADVERTISEMENT

ಮಳೆ ಪ್ರಮಾಣ ಇಂತಿದೆ: ರಾಮದುರ್ಗ ಪಟ್ಟಣ: 78.5 ಮಿ.ಮೀ., ಕೆ. ಚಂದರಗಿ ಹೋಬಳಿ: 17.2 ಮಿ.ಮೀ., ಕಟಕೋಳ: 42.6 ಮಿ.ಮೀ. ಹುಲಕುಂದ: 23 ಮಿ.ಮೀ. ಮತ್ತು ಮುದಕವಿ: 60 ಮಿ.ಮೀ.

ಎರಡು ಜಾನುವಾರು ಸಾವು: ಮಳೆಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸುರೇಬಾನ ಸಮೀಪದ ಚಿಕ್ಕೊಪ್ಪ ಗ್ರಾಮದಲ್ಲಿ ಒಂದು ಎಮ್ಮೆ ಮತ್ತು ಬನ್ನೂರಿನಲ್ಲಿ ಹನಮಂತ ಲಕ್ಷ್ಮಣ ನಾಯ್ಕರ ಎಂಬುವರಿಗೆ ಸೇರಿದ್ದ ಎರಡು ಆಕಳು ಸಿಡಿಲು ಬಡಿದು ಸಾವನ್ನಪ್ಪಿವೆ ಎಂದು ತಹಶೀಲ್ದಾರ್ ರಾಮಚಂದ್ರ ಕಟ್ಟಿ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.