ADVERTISEMENT

ಮತದಾರರಿಗೆ ಮಮತೆಯ ಕರೆಯೋಲೆ!

ಪ್ರತಿ ಮನೆಗಳಿಗೂ ವಿತರಣೆ: ರಾಮಚಂದ್ರನ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 8:20 IST
Last Updated 26 ಏಪ್ರಿಲ್ 2018, 8:20 IST
ಬೆಳಗಾವಿ ಸ್ವೀಪ್‌ ಸಮಿತಿ ಸಿದ್ಧಪಡಿಸಿರುವ ‘ಮತದಾನದ ಮಮತೆಯ ಕರೆಯೋಲೆ’ ಚಿತ್ರ‌
ಬೆಳಗಾವಿ ಸ್ವೀಪ್‌ ಸಮಿತಿ ಸಿದ್ಧಪಡಿಸಿರುವ ‘ಮತದಾನದ ಮಮತೆಯ ಕರೆಯೋಲೆ’ ಚಿತ್ರ‌   

ಬೆಳಗಾವಿ: ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಆಮಂತ್ರಣ ನೀಡಿ ಆಹ್ವಾನಿಸುವಂತೆ, ಮತದಾನಕ್ಕೆ ಆಗಮಿಸುವಂತೆ ಕೋರುವುದಕ್ಕಾಗಿ ಸಿದ್ಧಪಡಿಸಿರುವ ‘ಮತದಾರರ ಮಮತೆಯ ಕರೆಯೋಲೆ’ಯನ್ನು ಪ್ರತಿ ಮನೆಗೂ ವಿತರಿಸಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷ ರಾಮಚಂದ್ರನ್ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಸ್ವೀಪ್ ಸಮಿತಿ (ಮತದಾರರ ಜಾಗೃತಿ ಹಾಗೂ ಪಾಲ್ಗೊಳ್ಳುವಿಕೆ ಸಮಿತಿ) ಸಭೆಯಲ್ಲಿ ಅವರು ಮಾತನಾಡಿದರು.

‘ಮತದಾರರ ಚೀಟಿ ನೀಡುವ ಸಂದರ್ಭದಲ್ಲಿ ಜಾಗೃತಿ ಕರಪತ್ರಗಳನ್ನು ಕೂಡ ವಿತರಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ನಡೆಸುತ್ತಿರುವ ಸ್ಥಳಗಳಲ್ಲೂ ಅರಿವು ಮೂಡಿಸಬೇಕು. ದಿನಪತ್ರಿಕೆಗಳ ಜತೆಗೆ ವಿವಿಪ್ಯಾಟ್ ಬಳಕೆ ಕುರಿತ ಕರಪತ್ರಗಳನ್ನು ಹಂಚಲು ಹಾಗೂ ಸ್ಥಳೀಯ ಕೇಬಲ್ ವಾಹಿನಿಗಳಲ್ಲಿ ಸ್ವೀಪ್ ವಿಡಿಯೊಗಳನ್ನು ಪ್ರದರ್ಶಿಸಲು ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಸ್ವೀಪ್ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರತಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ವೀಪ್ ಸಮಿತಿಯಿಂದ ತಲಾ ₹ 50ಸಾವಿರ ಹಾಗೂ ಪಿಂಕ್ ಮತಗಟ್ಟೆಗಳ ಸ್ಥಾಪನೆಗೆ ಚುನಾವಣಾ ಆಯೋಗದಿಂದ ₹ 10ಸಾವಿರ (ಪ್ರತಿ ಮತಗಟ್ಟೆಗೆ) ನೀಡಲಾಗುವುದು’ ಎಂದು ಹೇಳಿದರು.

ಮತದಾರ ಸ್ನೇಹಿಯಾಗಿಸಲು: ‘ಮತಗಟ್ಟೆಗಳನ್ನು ಮತದಾರ ಸ್ನೇಹಿಯಾಗಿಸಲು ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಶೌಚಾಲಯ ಮೊದಲಾದ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ದೃಷ್ಟಿದೋಷ ಇರುವರಿಗೆ ಭೂತಗನ್ನಡಿ, ಅಶಕ್ತರಿಗೆ ಗಾಲಿಕುರ್ಚಿಗಳನ್ನು ಒದಗಿಸಲಾಗುವುದು. ಪ್ರತಿಯೊಬ್ಬ ಅರ್ಹ ಮತದಾರರೂ ಮತಗಟ್ಟೆಗೆ ಬಂದು ತಪ್ಪದೇ ಮತ ಚಲಾಯಿಸಬೇಕು’ ಎಂದು ಕೋರಿದರು.

‘ಮತದಾನ ದಿನ (ಮೇ 12) ಸಮೀಪಿಸುತ್ತಿರುವುದರಿಂದ ಮತದಾನದ ಕುರಿತು ಜಾಗೃತಿ ಮೂಡಿಸಲು ಸ್ವೀಪ್ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಬೇಕು ಹಾಗೂ ಮತ್ತು ಪರಿಣಾಮಕಾರಿಯಾಗಿ ನಡೆಸಬೇಕು. ವಿಶೇಷವಾಗಿ ಯುವಜನರಿಗೆ ತಿಳಿಸಿಕೊಡಬೇಕು ಹಾಗೂ ಕೊಳೆಗೇರಿಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕಾರ್ಯಯೋಜನೆ ತಯಾರಿಸಿ ಅನುಷ್ಠಾನಗೊಳಿಸಬೇಕು’ ಎಂದರು.

‘ಜಾತಿ, ಧರ್ಮದ ಪ್ರಭಾವ, ಹಣದ ಆಮಿಷಕ್ಕೆ ಒಳಗಾಗದೇ ಮುಕ್ತ ಮತ್ತು ಕಡ್ಡಾಯವಾಗಿ ಮತ ಚಲಾಯಿಸುತ್ತೇವೆ’ ಎಂದು ಯುವಜನರಿಂದ ಸಹಿ ಆಂದೋಲನ ಹಮ್ಮಿಕೊಳ್ಳಬೇಕು. ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ವಿವಿಪ್ಯಾಟ್ ಬಳಕೆ ಕುರಿತ ಸ್ಟಿಕ್ಕರ್ ಹಾಗೂ ಪೋಸ್ಟರ್‌ಗಳನ್ನು ಅಂಟಿಸಬೇಕು’ ಎಂದು ಸಲಹೆ ನೀಡಿದರು.

‘ಆಟೊರಿಕ್ಷಾ ನಿಲ್ದಾಣಗಳಿಗೆ ತೆರಳಿ ಚಾಲಕರಿಗೆ ಮತದಾನದ ಬಗ್ಗೆ ತಿಳಿಸಬೇಕು. ಆಟೊಗಳ ಮೇಲೆ ಸ್ಟಿಕ್ಕರ್ ಅಂಟಿಸಬೇಕು. ಕೊಳೆಗೇರಿಗಳಲ್ಲಿ ಜಾಥಾ ಹಮ್ಮಿಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಂಡಲೀಕ ಅನವಾಲ, ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಗುರುನಾಥ ಕಡಬೂರ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.