ADVERTISEMENT

‘ವಿದ್ಯುತ್‌ ಉತ್ಪಾದನೆಗೆ ಸೌರಶಕ್ತಿ ಘಟಕ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 7:44 IST
Last Updated 2 ಡಿಸೆಂಬರ್ 2017, 7:44 IST
ಹುಕ್ಕೇರಿ ತಾಲ್ಲೂಕು ಕೊಟಬಾಗಿ ಬಳಿ ದೀನದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ ಶಾಸಕ ಉಮೇಶ ಕತ್ತಿ ಸೋಮವಾರ ಭೂಮಿಪೂಜೆ ನೆರವೇರಿಸಿದರು
ಹುಕ್ಕೇರಿ ತಾಲ್ಲೂಕು ಕೊಟಬಾಗಿ ಬಳಿ ದೀನದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ ಶಾಸಕ ಉಮೇಶ ಕತ್ತಿ ಸೋಮವಾರ ಭೂಮಿಪೂಜೆ ನೆರವೇರಿಸಿದರು   

ಹುಕ್ಕೇರಿ: ತಾಲ್ಲೂಕಿಗೆ ಅಗತ್ಯವಿರುವ 150 ಮೆಗಾವಾಟ್‌ ವಿದ್ಯುತ್ ಉತ್ಪಾದನೆಗೆ ವಂಟಮುರಿ ಗುಡ್ಡ ಹಾಗೂ ಹಿಡಕಲ್ ಡ್ಯಾಮ್ ಪ್ರಾಜೆಕ್ಟ್‌ ವ್ಯಾಪ್ತಿಯಲ್ಲಿರುವ ಎತ್ತರದ ಪ್ರದೇಶದಲ್ಲಿ ಸೋಲಾರ್ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದು ಶಾಸಕ ಉಮೇಶ್ ಕತ್ತಿ ತಿಳಿಸಿದರು.

ತಾಲ್ಲೂಕಿನ ಕೊಟಬಾಗಿ ಬಳಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ದೀನದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದ ಈ ಯೋಜನೆ ಅನುಷ್ಠಾನಗೊಳಿಸಲು ₹ 83 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ. ಈ ಪೈಕಿ ಮೊದಲ ಹಂತದಲ್ಲಿ ₹ 7 ಕೋಟಿ ಬಿಡುಗಡೆಯಾಗಿದೆ. ಹಳೆ ವಿದ್ಯುತ್ ಮಾರ್ಗ ಬದಲಾವಣೆ ಹಾಗೂ ದುರಸ್ತಿ, ನೂತನ ಪೀಡರ್‌ಗಳ ಸ್ಥಾಪನೆ, ವಿದ್ಯುತ್ ಸಂಪರ್ಕ ವ್ಯಾಪ್ತಿ ವಿಸ್ತರಣೆ ಕಾರ್ಯ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ತಾಲ್ಲೂಕಿನಲ್ಲಿ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಲ್ಲಿಗೆ ಬೇಕಾದ ವಿದ್ಯುತ್‌ ಇಲ್ಲಿಯೇ ಉತ್ಪಾದಿಸುವ ಉದ್ದೇಶ ಹೊಂದಲಾಗಿದೆ. ಹೆಚ್ಚುವರಿ ವಿದ್ಯುತ್ ಅನ್ನು ಬೆಳಗಾವಿ ಹಾಗೂ ಕೊಲ್ಲಾಪುರಕ್ಕೆ ಮಾರಲಾಗುವುದು’ ಎಂದರು.

ಸರ್ಕಾರದ ವಿರುದ್ಧ ಆರೋಪ: ‘ಪಕ್ಕದ ಯಮಕನಮರಡಿ ಹಾಗೂ ಚಿಕ್ಕೋಡಿ ಮತಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ಆದರೆ ಹುಕ್ಕೇರಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಅಗತ್ಯ ಅನುದಾನ ಕೊಡುತ್ತಿಲ್ಲ. ಬಿಜೆಪಿಯವರು ಇಲ್ಲಿನ ಜನಪ್ರತಿನಿಧಿ ಎಂಬ ಕಾರಣಕ್ಕೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಸಂಘದ ಅಧ್ಯಕ್ಷ ಬಸವರಾಜ ಮರಡಿ, ನಿರ್ದೇಶಕರಾದ ಸುರೇಂದ್ರ ದೊಡ್ಡಲಿಂಗನವರ, ಅಬ್ದುಲ್ ಮುನಾಫ ಅತ್ತಾರ, ಕೆ.ಕೆ. ಬೆನಚಿನಮರಡಿ, ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್. ಪೂಜೇರಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಬಾಳಾಸಾಹೇಬ ನಾಯಿಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಸಂಕನ್ನವರ, ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ ಉಪಸ್ಥಿತರಿದ್ದರು. ಎಂಜಿನಿಯರ್ ನೇಮಿನಾಥ ಖೆಮಲಾಪೂರೆ ಸ್ವಾಗತಿಸಿದರು. ವ್ಯವಸ್ಥಾಪಕ ದುರದುಂಡಿ ನಾಯಿಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.