ADVERTISEMENT

ಸಮುದಾಯ ಭವನಕ್ಕೆ ಹೆಚ್ಚು ಬೇಡಿಕೆ

ಸವದತ್ತಿ– ಯಲ್ಲಮ್ಮ ವಿಧಾನಭಾ ಕ್ಷೇತ್ರ: ಭವನ ನಿರ್ಮಾಣಕ್ಕೆ ಶೇ 50ಕ್ಕಿಂತಲೂ ಹೆಚ್ಚು ಹಣ ವ್ಯಯ

ಶ್ರೀಕಾಂತ ಕಲ್ಲಮ್ಮನವರ
Published 23 ಮಾರ್ಚ್ 2018, 7:18 IST
Last Updated 23 ಮಾರ್ಚ್ 2018, 7:18 IST
ಹೂಲಿ ಗ್ರಾಮದ ಹಿರೇಮಠ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ಸಮುದಾಯ ಭವನ
ಹೂಲಿ ಗ್ರಾಮದ ಹಿರೇಮಠ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ಸಮುದಾಯ ಭವನ   

ಬೆಳಗಾವಿ: ಕರ್ನಾಟಕ– ಮಹಾರಾಷ್ಟ್ರದ ಪ್ರಮುಖ ಧಾರ್ಮಿಕ ಸ್ಥಳವಾಗಿರುವ ರೇಣುಕಾದೇವಿ ಯಲ್ಲಮ್ಮನ ಗುಡ್ಡವನ್ನು ಒಳಗೊಂಡಿರುವ ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ನಿಧಿಯಡಿ ಸಾಕಷ್ಟು ಕೆಲಸಗಳು ಆಗಿವೆ. ಮುಖ್ಯವಾಗಿ ಸಮುದಾಯ ಭವನಗಳಿಗೆ ಆದ್ಯತೆ ದೊರೆತಿದೆ.

ಕ್ಷೇತ್ರದ ಬಹುತೇಕ ಎಲ್ಲ ಗ್ರಾಮ, ಪಟ್ಟಣಗಳ ನಿವಾಸಿಗಳು ಸಮುದಾಯ ಭವನಕ್ಕೆ ಹೆಚ್ಚು ಬೇಡಿಕೆ ಸಲ್ಲಿಸುತ್ತಾರೆ. ಎಲ್ಲ ಜಾತಿ, ಧರ್ಮದ ಜನರ ಒತ್ತಾಸೆ ಕೂಡ ಇದಾಗಿದೆ. ಅವರ ಬೇಡಿಕೆ ಅನುಸಾರ ಶಾಸಕ ಆನಂದ ಮಾಮನಿ ಸಮುದಾಯ ಭವನಗಳ ನಿರ್ಮಾಣಕ್ಕೆ ಶಿಫಾರಸು ಮಾಡಿದ್ದಾರೆ. ಅವರ ಒಟ್ಟು ಅನುದಾನದ ಶೇ 50ಕ್ಕಿಂತಲೂ ಹೆಚ್ಚು ಹಣವನ್ನು ಇದಕ್ಕಾಗಿ ವ್ಯಯ ಮಾಡಿರುವುದು ಕಂಡುಬಂದಿದೆ.

ಹಳ್ಳಿ ಹಳ್ಳಿಗೂ ಭವನ: ತಾಲ್ಲೂಕು ಕೇಂದ್ರಸ್ಥಳವಾದ ಸವದತ್ತಿ ಸೇರಿದಂತೆ, ಮುನವಳ್ಳಿ, ಯರಗಟ್ಟಿ, ಹಳ್ಳೂರ, ದಡ್ಡೆರ್‌ಕೊಪ್ಪ, ಉಗರಗೋಳ, ಬೂದಿಗೊಪ್ಪ, ಹಿರೇಉಳ್ಳಿಗೇರಿ, ಅಕ್ಕಿಸಾಗರ, ಕಡಬಿ, ಇಟ್ನಾಳ, ಇನಾಂಹೊಂಗಲ, ಮಾಡಮಗೇರಿ, ಕುರುಬಗಟ್ಟಿ, ಯರಝರ್ವಿ, ತಾವಳಗೇರಿ, ಧಡೇರಕೊಪ್ಪ, ಹಂಚಿನಾಳ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ.

ADVERTISEMENT

ನಡುವಿನಹಳ್ಳಿ, ತಲ್ಲೂರ, ಬಸರಗಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯದವರಿಗೂ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದಾರೆ. ಬಹುತೇಕ ಎಲ್ಲ ಜಾತಿ, ಧರ್ಮದವರ ಬೇಡಿಕೆಗೆ ಸ್ಪಂದಿಸಿದ್ದಾರೆ. ಭವನ ನಿರ್ಮಿಸಲು ಸಾಕಷ್ಟು ಅನುದಾನ ನೀಡಿದ್ದಾರೆ.

ಶುದ್ಧ ಕುಡಿಯುವ ನೀರು: ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಹಲವು ಪ್ರದೇಶಗಳಲ್ಲಿ ಆರ್‌ಒ ಘಟಕಗಳನ್ನು ಸ್ಥಾಪಿಸಲು ಕ್ರಮಕೈಗೊಂಡಿದ್ದಾರೆ. ಸವದತ್ತಿಯ ಪುರಸಭೆ ಬಳಿ, ಸಾರ್ವಜನಿಕ ಆಸ್ಪತ್ರೆ ಬಳಿ, ಮುನವಳ್ಳಿಯ ಕಾಳಮ್ಮ ಆಸ್ಪತ್ರೆ ಬಳಿ, ಕೆ.ಶಿವಾಪುರದ ರಾಣಿ ಚನ್ನಮ್ಮ ಯುವತಿಯರ ವಸತಿಗೃಹದ ಬಳಿ, ಹಂಚಿನಾಳ ಸೇರಿದಂತೆ ಇತರ ಪ್ರದೇಶಗಳಲ್ಲಿ ಸ್ಥಾಪಿಸಲು ಶಿಫಾರಸು ಮಾಡಿದ್ದಾರೆ. ಕೆಲವೆಡೆ ಅನುಷ್ಠಾನಗೊಂಡಿದ್ದು, ಇನ್ನುಳಿದ ಪ್ರದೇಶಗಳಲ್ಲಿ ಅನುಷ್ಠಾನ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಶಾಲಾ ಕಟ್ಟಡಗಳು: ಹಳ್ಳಿಗಳಲ್ಲಿರುವ ಶಾಲಾ ಕಟ್ಟಡಗಳ ದುರಸ್ತಿಗೂ ಅನುದಾನ ಹಂಚಿಕೆ ಮಾಡಿದ್ದಾರೆ. ಸತ್ತಿಗೇರಿ, ಸೊಪ್ಪಡ್ಲ ಶಾಲೆಗಳಿಗೆ ಅನುದಾನ ನೀಡಿದ್ದಾರೆ. ತಾವಲಗೇರಿ ಸರ್ಕಾರಿ ಶಾಲೆಗೆ ಹಾಗೂ ಸವದತ್ತಿಯ ಕೆ.ಎಂ. ಮಾಮನಿ ಸರ್ಕಾರಿ ಕಾಲೇಜ್‌ಗೆ ಕಂಪ್ಯೂಟರ್‌ಗಳನ್ನು ಒದಗಿಸಿಕೊಟ್ಟಿದ್ದಾರೆ. ಸವದತ್ತಿಯಲ್ಲಿ ಗುರು ಭವನ, ತೆಗ್ಗಿಹಾಳದಲ್ಲಿ ರಂಗಮಂದಿರ ನಿರ್ಮಿಸಿದ್ದಾರೆ.

ಯುವಕ ಮಂಡಳಿಗೆ ಸಹಾಯ: ಕ್ಷೇತ್ರದ ಹಲವು ಯುವಕ ಮಂಡಳಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಸವದತ್ತಿಯ ಭಗತ್‌ಸಿಂಗ್‌ ಯುವಕ ಮಂಡಳಕ್ಕೆ ಅನುದಾನ ನೀಡಿದ್ದಾರೆ. ಸವದತ್ತಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ₹ 37.50 ಲಕ್ಷ ಅನುದಾನ ಒದಗಿಸಿದ್ದಾರೆ.

₹ 11 ಕೋಟಿಗೂ ಹೆಚ್ಚು ಶಿಫಾರಸು: ಆನಂದ ಮಾಮನಿ ಅವರು 5 ವರ್ಷಗಳ ಅವಧಿಯಲ್ಲಿ ಒಟ್ಟು ₹ 11.81 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದಾರೆ. ಇವುಗಳಲ್ಲಿ ₹ 9.26 ಕೋಟಿ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

2013– 14ನೇ ಸಾಲಿನಲ್ಲಿ ₹ 2.33 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದರು, ₹ 1.95 ಕೋಟಿ ಕಾಮಗಾರಿಗಳಿಗೆ ಅನುಮೋದನೆ ದೊರೆತಿತ್ತು. 2014– 15ನೇ ಸಾಲಿನಲ್ಲಿ ₹ 2.20 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದರು, ಇದರಲ್ಲಿ ₹ 1.94 ಕೋಟಿಗೆ ಅನುಮೋದನೆ ದೊರೆತಿದೆ.
2015–16ನೇ ಸಾಲಿನಲ್ಲಿ ₹ 2.72 ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದರೆ, ₹ 1.93 ಕೋಟಿಗೆ ಅನುಮೋದನೆ ದೊರೆತಿದೆ. 2016–17ನೇ ಸಾಲಿನಲ್ಲಿ ₹ 2.32 ಕೋಟಿಗೆ ಶಿಫಾರಸು ಮಾಡಿದ್ದರೆ, ₹ 1.99 ಕೋಟಿಗೆ ಅನುಮೋದನೆ ಸಿಕ್ಕಿದೆ. ಅಂತಿಮ ವರ್ಷ 2017–18ನೇ ಸಾಲಿನಲ್ಲಿ ₹ 2.24 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದರೆ, ಕೇವಲ ₹ 1.45 ಕೋಟಿ ಮೊತ್ತದ ಕಾಮಗಾರಿಗಳಿಗೆ ಮಾತ್ರ ಅನುಮೋದನೆ ದೊರೆತಿದೆ.

ನಿಯಮಾವಳಿ ಕಾರಣ: ‘ಶಾಸಕರ ನಿಧಿಗೆ ಒದಗಿಸಲಾಗುವ ಅನುದಾನ ಬಳಸಲು ಸಾಕಷ್ಟು ನಿಯಮಾವಳಿಗಳನ್ನು ವಿಧಿಸಲಾಗಿದೆ. ಇವುಗಳನ್ನು ಪಾಲಿಸಿಕೊಂಡು ಆಡಳಿತಾತ್ಮಕ ಅನುಮೋದನೆ ಪಡೆಯಲು ಸ್ವಲ್ಪ ವಿಳಂಬವಾಗುತ್ತಿದೆ’ ಎಂದು ಆನಂದ ಮಾಮನಿ ಹೇಳಿದರು.

‘ದಲಿತರ ಏಳಿಗೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆಂದು ರಾಜ್ಯದ ಕಾಂಗ್ರೆಸ್‌ ಸರ್ಕಾರ ಬೊಗಳೆ ಬೀಡುತ್ತಿದೆ. ಎಸ್‌.ಸಿ– ಎಸ್‌.ಟಿ ಸಮುದಾಯಕ್ಕೆ ಸೇರಿದ ವಿವಿಧ ನಿಗಮಗಳ ಮೂಲಕ ಸವದತ್ತಿ ಕ್ಷೇತ್ರದಲ್ಲಿ 22 ಸಮುದಾಯ ಭವನ ನಿರ್ಮಿಸುವುದಾಗಿ ಹೇಳಿತ್ತು. ಆದರೆ, ಇದುವರೆಗೆ ಕೇವಲ ಒಂದು ನಿಗಮಕ್ಕೆ ಮಾತ್ರ ಹಣ ಬಿಡುಗಡೆಯಾಗಿದೆ’ ಎಂದು ಟೀಕಿಸಿದರು.

**
ಎಲ್ಲ ಸಮುದಾಯ, ಜಾತಿ– ಧರ್ಮದವರಿಂದ ಸಮುದಾಯ ಭವನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಬಹುತೇಕ ಎಲ್ಲ ವರ್ಗದವರಿಗೆ ಭವನಗಳನ್ನು ನಿರ್ಮಿಸಿಕೊಟ್ಟಿದ್ದೇನೆ
– ಆನಂದ ಮಾಮನಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.